ಯಾದಗಿರಿ[ನ.8]: ಯಾದಗಿರಿ ನಗರದ ಗಾಂಧಿ ಚೌಕ್, ಚಕ್ರ ಕಟ್ಟಾ, ಮೈಲಾಪೂರ ಅಗಸಿ, ಗಂಜ್ ಏರಿಯಾ, ಹತ್ತಿಕುಣಿ ರೋಡ್, ಮಾರ್ಕೆಟ್ ಏರಿಯಾ ಹಾಗೂ ಇನ್ನಿತರ ಸುತ್ತಮುತ್ತಲಿನ ಸ್ಟಾಲ್, ಮಳಿಗೆ, ಅಂಗಡಿಗಳ ಮೇಲೆ ಬುಧವಾರ ಅನಿರೀಕ್ಷಿತ ದಾಳಿ ನಡೆಸಿ, ನಿಷೇಧಿತ ಪ್ಲಾಷ್ಟಿಕ್, ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಯಿತು. ಜೊತೆಗೆ ಬಾಲಕಾರ್ಮಿಕ ಮಕ್ಕಳ ಬಗ್ಗೆ ತಪಾಸಣೆ ಮಾಡಲಾಗಿದೆ.  

ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳವರ ಆದೇಶ ಪಡೆದು ನಗರದಾದ್ಯಂತ ದಾಳಿ ನಡೆಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಬಳಸುವುದು ಕಾನೂನು ಅಪರಾಧವಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಹಾಕುವುದು ನಿಷೇಧಿಸಲಾಗಿದೆ. ಕಾನೂನು ಉಲ್ಲಂಘಿಸಿದಲ್ಲಿ 25000 ರು.ಗಳವರೆಗೆ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಬಾಲಕಾರ್ಮಿಕ ಪದ್ಧತಿ 1986ರ ಕಾಯ್ದೆಯಡಿ ಯಲ್ಲಿ 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಯಾವುದೇ ಅಪಾಯಕಾರಿ ಉದ್ದಿಮೆಗಳಲ್ಲಿ ಮತ್ತು ಇತರೆ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂಬ ವಿಷಯದ ಕುರಿತು ಅಧಿಕಾರಿಗಳು ತಿಳಿವಳಿಕೆ ನೀಡಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅನಿರೀಕ್ಷಿತ ತಪಾಸಣೆ ಕೈಗೊಂಡು ಪತ್ತೆಯಾದ ಮಕ್ಕಳ ದಾಖಲೆಗಳನ್ನು ಅಧಿಕಾರಿಗಳು ವೀಕ್ಷಿಸಿದರು. ಅಂತಹ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಲು ಮಾಲೀಕರುಗಳಿಗೆ ಸೂಚಿಸಿದರು. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ ಪ್ರತಿ ಮಗುವಿನ ಮಾಲೀಕರಿಗೆ 50000 ರೂ.ಗಳನ್ನು ದಂಡ ವಿಧಿಸಲಾಗುತ್ತದೆ. ಜೊತೆಗೆ ಜೈಲು ವಾಸ ಕೂಡ ವಿಧಿಸಬಹುದಾಗಿದೆ ಎಂದು ತಿಳಿಸಿದರು. 

ಕೋಟ್ಪಾ-2003 ಕಾಯ್ದೆಯಡಿಯಲ್ಲಿ ಸೆಕ್ಷನ್ 4, 5, 6, 6ಎ, 6ಬಿ ಮತ್ತು 7ರ ಪ್ರಕಾರ ಸಂಬಂಧಿಸಿದ ಕಾಯ್ದೆಗಳನುಸಾರ ಹೋಟೆಲ್, ರೆಸ್ಟೊರೆಂಟ್, ಬಾರ್‌ಗಳಲ್ಲಿ, ಧಾಭಾಗಳಲ್ಲಿ, ಅಂಗಡಿಗಳಲ್ಲಿ ಮತ್ತು ಶಾಲಾ-ಕಾಲೇಜು ಪ್ರದೇಶದಿಂದ 100 ಮೀಟರ್ ಅಂತರದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಬಹಿರಂಗವಾಗಿ ಮಕ್ಕಳಿಂದ ಮಾರುವುದಕ್ಕೆ ಪ್ರಚೋದನೆ ನೀಡುವುದು, ದುಡಿಸಿಕೊಳ್ಳುವುದು ಮತ್ತು ಸೇದುವುದು ಕಾನೂನಿನ ಪ್ರಕಾರ ನಿಷೇಧಿಸಲಾಗಿರುತ್ತದೆ. ಕಾನೂನು ಉಲ್ಲಂಘಿಸಿದಲ್ಲಿ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಈ ಕುರಿತಂತೆ ಸಾಕಷ್ಟು ಬಾರಿ ಜಾಥಾ ಮೂಲಕ, ಆಟೋ ಪ್ರಚಾರ, ಕರ ಪತ್ರಗಳ ವಿತರಣೆ, ಕಾನೂನು ಅರಿವು ನೆರವು ಕಾರ್ಯಕ್ರಮಗಳು ಮತ್ತು ಹಲವಾರು ಬಾರಿ ಅನಿರೀಕ್ಷಿತ ತಪಾಸಣೆ, ದಾಳಿ ಮಾಡಿ ಸಾರ್ವಜನಿಕರಿಗೆ ಹಾಗೂ ಸಂಬಂಧಿಸಿದ ಅಂಗಡಿ ಮಾಲೀಕರುಗಳಿಗೆ ಮಾಹಿತಿ ನೀಡಿದರು ಸಹ ಹಲವಾರು ಅಂಗಡಿ ಮಾಲೀಕರು ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವ, ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿರುವುದು, ಬಹಿರಂಗವಾಗಿ ತಂಬಾಕು ಉತ್ಪನ್ನಗಳಿಗೆ ಸಂಬಂಧಿಸಿದಂತೆ ವಸ್ತುಗಳನ್ನು ಮಾರಾಟ ಮಾಡುವುದು ಹಾಗೂ ಬಾಲಕಾರ್ಮಿಕರನ್ನು ದುಡಿಸಿಕೊಳ್ಳಬಾರದೆಂಬ ನಿಯಮದೊಂದಿಗೆ ಸಂಬಂಧಿಸಿದ ಮಾಲೀಕರಿಗೆ ದಂಡ ವಿಧಿಸಲಾಗಿರುತ್ತದೆ. 

ಸೆಕ್ಷನ್ 5 ರಲ್ಲಿ 6 ನೋಟಿಸ್ ನೀಡಲಾಗಿರುತ್ತದೆ. ಸೆಕ್ಷನ್ 7 ರಲ್ಲಿ 3 ನೋಟಿಸ್ ನೀಡಲಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಅನಿರೀಕ್ಷಿತ ದಾಳಿ ಸಂದರ್ಭದಲ್ಲಿ ಬಾಲಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕರಾದ ರಘುವೀರ ಸಿಂಗ ಠಾಕೂರ್, ಕಾರ್ಮಿಕ ನಿರೀಕ್ಷಕ ಶಿವಶಂಕರ ಬಿ.ತಳವಾರ, ತಂಬಾಕು ಸಲಹೆಗಾರರಾದ ಮಹಾಲಕ್ಷ್ಮೀ ಸಜ್ಜನ, ನಗರಸಭೆ ಯಾದಗಿರಿ ಪರಿಸರ ಅಭಿಯಂತರರಾದ ಸಂಗಮೇಶ, ಸುರೇಶ, ಸಲೀಂ, ಸಹಾಯಕ ಪರಿಸರ ಮಾಲಿನ್ಯ ಅಧಿಕಾರಿ ಬಸವರಾಜ ಹಾಗೂ ನಗರಸಭೆ ಯಾದಗಿರಿ ಸ್ವಚ್ಚತಾ ಸಿಬ್ಬಂದಿಗಳು ಭಾಗವಹಿಸಿದ್ದರು.