Asianet Suvarna News Asianet Suvarna News

ಸುರಪುರದಲ್ಲಿ ಹನಿ ನೀರಿಗೂ ತತ್ವಾರ: ಕಣ್ಮುಚ್ಚಿ ಕುಳಿತ ನಗರಸಭೆ

ಕುಡಿವ ನೀರಿಗೆ ತತ್ವಾರ: ಸ್ಪಂದಿಸೋರೇ ಇಲ್ಲ| ಸುರಪುರ ನಗರಸಭೆಗೆ ಬೇಕಿಲ್ಲ ಜನರ ಸಮಸ್ಯೆ| ಕಳೆದ ಒಂದು ತಿಂಗಳಿನಿಂದ ವಾರ್ಡ್‌ನಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗಿದೆ| ಜನ ಪರದಾಡುತ್ತಿದ್ದರೂ ಅವರ ಪಡಿಪಾಟಿಲು ಮಾತ್ರ ನಗರಸಭೆ ಅಧಿ​ಕಾರಿಗಳಿಗೆ ಕಾಣುತ್ತಿಲ್ಲ| ಇದರಿಂದ ಜಲಮೂಲವಿರುವ ಪ್ರದೇಶಗಳತ್ತ ಜನರು ಲಗ್ಗೆಯಿಟ್ಟು ನೀರು ತಂದು ಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ| 

Shorapur Town People Faces Water Problem Last One month
Author
Bengaluru, First Published Oct 10, 2019, 11:49 AM IST

ನಾಗರಾಜ್‌ ನ್ಯಾಮತಿ

ಸುರಪುರ(ಅ.10): ನಗರಸಭೆ ವ್ಯಾಪ್ತಿಗೆ ಒಳಪಡುವ ಹಸನಾಪುರ ವಾರ್ಡ್‌ನಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿ ಒಂದು ತಿಂಗಳಾದರೂ ಪೂರೈಸಬೇಕೆನ್ನುವ ಮನಸ್ಸು ಸಂಬಂಧಿತರಿಗೆ ಇಲ್ಲದಂತಾಗಿ ಜನರು ಅಧಿ​ಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕಳೆದ ಒಂದು ತಿಂಗಳಿನಿಂದ ವಾರ್ಡ್‌ನಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗಿ ಜನ ಪರದಾಡುತ್ತಿದ್ದರೂ ಅವರ ಪಡಿಪಾಟಿಲು ಮಾತ್ರ ನಗರಸಭೆ ಅಧಿ​ಕಾರಿಗಳಿಗೆ ಕಾಣುತ್ತಿಲ್ಲ ಎಂಬ ಆಕ್ರೋಶ ಜನರಲ್ಲಿ ಮೂಡಿದೆ. ಇದರಿಂದ ಜಲಮೂಲವಿರುವ ಪ್ರದೇಶಗಳತ್ತ ಜನರು ಲಗ್ಗೆಯಿಟ್ಟು ನೀರು ತಂದು ಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಟ್ಟು ನಿಂತಿರುವ ಕೈಪಂಪ್‌ಗಳು:

ವಾರ್ಡ್‌ನಲ್ಲಿರುವ ಆರೂ ಕೈಪಂಪ್‌ಗಳು ಕೆಟ್ಟು ನಿಂತು ಎರಡು ತಿಂಗಳು ಕಳೆಯುತ್ತಾ ಬಂದರೂ ಇದನ್ನು ರಿಪೇರಿ ಮಾಡಿ ಜನರಿಗೆ ನೀರು ಒದಗಿಸಬೇಕು ಎನ್ನುವ ಮನೋಭಾವ ಅ​ಧಿಕಾರಿಗಳಿಗೆ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿಯೇ ಕೈಪಂಪ್‌ಗಳು ಕೆಟ್ಟು ನಿಂತರೂ ಸರಿಪಡಿಸುವ ಗೋಜಿಗೆ ಅ​ಧಿಕಾರಿಗಳು ಹೋಗುತ್ತಿಲ್ಲ.

ನೆಲದಲ್ಲಿ ಹುದಗಿ ಹೋದ ಯಂತ್ರ:

ವಾರ್ಡ್‌ಗೆ ನೀರು ಪೂರೈಸುತ್ತಿದ್ದ ಎರಡು ಕೊಳವೆ ಬಾವಿಗಳ ಯಂತ್ರಗಳು ಭೂಮಿಯ ಆಳದಲ್ಲಿ ಹುದಗಿ ಹೋಗಿದ್ದರಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಹುದಗಿ ಹೋಗಿರುವ ಯಂತ್ರಗಳನ್ನು ಎತ್ತುವಂತೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ನೀರಿನ ಸಮಸ್ಯೆ ಅಧಿ​ಕಾರಿಗಳಿಗೆ ಅರ್ಥವಾಗುತ್ತಿಲ್ಲ. ವಾರ್ಡ್‌ಗೆ ನೀರು ಸರಬರಾಜಿಗಾಗಿ ಅ​ಧಿಕಾರಿಗಳನ್ನು ಎಳೆದು ತರುವುದೊಂದೇ ಬಾಕಿ ಉಳಿದಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನಪ್ರತಿನಿ​ಧಿಗಳ ವಿರುದ್ಧ ಆಕ್ರೋಶ:

ನಮ್ಮಿಂದ ಆಯ್ಕೆ ಹೋಗಿರುವ ಜನಪ್ರತಿನಿಧಿ​ಗಳಿಗೆ ಕೇಳಿದರೆ ಇನ್ನೂ ನಗರಸಭೆಯಲ್ಲಿ ಮಂಡಳಿಯೇ ರಚನೆಯಾಗಿಲ್ಲ. ಹೀಗಾಗಿ, ಅ​ಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ ಎಂದು ಅಹಾಯಕತೆ ವ್ಯಕ್ತಪಡಿಸುತ್ತಾರೆ. ನೀರಿಗೆ ತೊಂದರೆ ಇರುವ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುವಂತೆ ಹಲವಾರು ಸಭೆಗಳಲ್ಲಿ ಜಿಲ್ಲಾ​ಧಿಕಾರಿಗಳೇ ಹೇಳಿದರೂ ಟ್ಯಾಂಕರ್‌ ನೀರು ಗಗನಕುಸುಮವಾಗಿದೆ. ಜನರು ನೀರು ಬೇಕೆಂದು ಮೌಖಿಕ ಹಾಗೂ ಲಿಖಿತವಾಗಿ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ನೀರು ಪೂರೈಸುವಂತೆ ನಗರಸಭೆಗೆ ಅಲೆದು ಅಲೆದು ಸುಸ್ತಾಗಿ ಹೋಗಿದ್ದಾರೆ. ಜನರ ಶಾಂತತೆ ಕಟ್ಟೆಯೊಡೆಯುವ ಮುನ್ನ ನಗರಸಭೆ ಎಚ್ಚೆತ್ತುಕೊಳ್ಳಬೇಕಿರುವ ಅವಶ್ಯಕತೆಯಿದೆ.

ಕೈಪಂಪ್‌ಗಳು ಕೆಟ್ಟು ನಿಂತಿರುವುದರಿಂದ ವಾರ್ಡ್‌ನ ಪಕ್ಕದಲ್ಲಿರುವ ಬೋರ್‌ ಇರುವ ಜಮೀನಗಳು ಮಾಲೀಕರು ಬೆಳೆಗಳಿಗೆ ನೀರು ಆಗುತ್ತಿಲ್ಲ. ನಿಮಗೆ ಎಲ್ಲಿಂದ ಬಿಡೋದು. ನೀರಿಗಾಗಿ ಬಂದು ನಿಂತು ಕೊಳ್ಳಬೇಡಿ. ಇಲ್ಲಿಂದ ಕಾಲ್ಕಿತ್ತುವಂತೆ ಮಾಲೀಕರು ಹೇಳುತ್ತಾರೆ ಎಂದು ಹನುಮಂತಗೌಡ ಪಾಟೀಲ್‌ ತಮ್ಮ ಅಳಲು ತೋಡಿಕೊಳ್ಳುತ್ತಾರೆ. 

ಠುಸ್‌ ಆದ ಶಾಸಕರ ಮಾತು 

ಇತ್ತೀಚೆಗೆ ಶಾಸಕ ರಾಜೂಗೌಡ ಅವರು ವಾರ್ಡ್‌ಗಳಿಗೆ ಭೇಟಿ ಜನರ ಸಮಸ್ಯೆಗಳನ್ನು ಆಲಿಸಿದ್ದರು. ಇದರಲ್ಲಿ ನೀರಿನದ್ದೇ ಹೆಚ್ಚಾಗಿ ಪ್ರತಿಧ್ವನಿಸಿತ್ತು. ಇನ್ನೆರಡು ದಿನದಲ್ಲಿ ನೀರು ಪೂರೈಸುವುದಾಗಿ ಹೇಳಿದ್ದರು. ಅವರು ಹೇಳಿದ್ದ ಮಾತು ಕೂಡ ಠುಸ್‌ ಆಗಿದೆ. ಶಾಸಕರ ಮಾತಿಗೆ ಬೆಲೆ ಕೊಡದ ನಗರಸಭೆ ಅಧಿ​ಕಾರಿಗಳು ಇನ್ಯಾರ ಮಾತಿಗೆ ಮನ್ನಣೆ ಕೊಡುತ್ತಾರೋ ಕಾದು ನೋಡಬೇಕಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ಸುರಪುರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹೇಶ್‌ ಗುಪ್ತ ಅವರು, ನೀರಿನ ಸಮಸ್ಯೆ ಇರುವ ಬಗ್ಗೆ ದೂರುಗಳು ಬಂದಿದ್ದು, ಈ ಕುರಿತು ಶಾಸಕರು ನೀರು ಪೂರೈಸುವಂತೆ ಸೂಚಿಸಿದ್ದಾರೆ. ಹೀಗಾಗಿ ಇನ್ನೆರಡು ದಿನದಲ್ಲಿ ಕೊಳವೆಬಾವಿ ಕೊರೆಯಿಸಿ ನೀರು ಪೂರೈಸಲಾಗುವುದು ಎಂದು ಹೇಳಿದ್ದಾರೆ. 

ನೀರು ವಾರ್ಡ್‌ಗೆ ಬರದೆ ಒಂದು ತಿಂಗಳು ಆಯ್ತು. ಕುಡಿಯವ ನೀರಿಗಾಗಿ ಪರದಾಡುತ್ತಿದ್ದೇವೆ. ನಮ್ಮ ಗೋಳು ನಗರಸಭೆ ಅ​ಕಾರಿಗಳಿಗೆ ಕೇಳಿಸುತ್ತಿಲ್ಲ. ಕರೆದುಕೊಂಡು ಬಂದೂ ತೋರಿಸಿದರು ಪ್ರಯೋಜನವಾಗಿಲ್ಲ. ಇನ್ನೇನಿದ್ದರೂ ನಗರಸಭೆಗೆ ಬೀಗ ಜಡಿಯೋದೇ ನಮಗೆ ಉಳಿದಿರುವ ಮಾರ್ಗವಾಗಿದೆ ಸುರಪುರ ನಿವಾಸಿ ಹೊನ್ನಪ್ಪ ತಳವಾರ ಅವರು ತಿಳಿಸಿದ್ದಾರೆ. 

ನಗರದ ಕೆಳಭಾಗದಲ್ಲಿರುವ ಹಸನಪುರ ವಾರ್ಡ್‌ನಲ್ಲಿ ಜನರು ವಾಸಿಸುತ್ತಿದ್ದಾರೆ ಎಂಬುದನ್ನು ನಗರಸಭೆ ಮರೆತಿದೆ. ಹೀಗಾಗಿ ನಮಗೆ ಕುಡಿಯುವ ನೀರನ್ನು ಪೂರೈಸುತ್ತಿಲ್ಲ. ಇನ್ನೆರಡು ದಿನದಲ್ಲಿ ನೀರು ನಗರಸಭೆ ಅ​ಕಾರಿಗಳಿಗೆ ಘೇರಾವ್‌ ಹಾಕಲಾಗುವುದು ಎಂದು ಸುರಪುರದ ಲಂಬ ವಾರ್ಡ್‌ ನಿವಾಸಿ ಬಲಭೀಮರಾಯ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios