Asianet Suvarna News Asianet Suvarna News

ಯಾದಗಿರಿ: ಇನ್ಮುಂದೆ ನೀರಿನ ಘಟಕ ದುರಸ್ತಿಗೆ ಒಂದು ಕರೆ ಮಾಡಿದ್ರೆ ಸಾಕು!

ಜನಮನ ಮೆಚ್ಚುಗೆ ಗಳಿಸಿದ ’ಕನ್ನಡಪ್ರಭ-ಸುವರ್ಣ ನ್ಯೂಸ್‌’ ಸಹಯೋಗದ ಫೋನ್‌ ಇನ್‌ ಕಾರ್ಯಕ್ರಮ| ಮೊಬೈಲ್‌ ಕರೆ ಮಾಡಿದರೆ ಸಾಕು, ಬಂದು ದುರಸ್ತಿ ಮಾಡಲಾಗುತ್ತದೆ|‘ಕನ್ನಡಪ್ರಭ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಿಇಒ ಶಿಲ್ಪಾ ಶರ್ಮಾ ಘೋಷಣೆ| ಜಮ್ಮು ಕಾಶ್ಮೀರದಿಂದ ಕರೆ ಮಾಡಿದ ಬಿಎಸ್‌ಎಫ್‌ ಯೋಧ: ತಮ್ಮೂರಲ್ಲಿ ಆರ್‌. ಪ್ಲಾಂಟ್‌ ಸ್ಥಾಪನೆಗೆ ಮನವಿ| ಯೋಧನ ಮೊದಲ ಕರೆಗೆ ಸಿಇಒ ಸ್ಪಂದನೆ| ಹುಣಸಗಿಯ ಕಲದೇವನಹಳ್ಳಿಯಲ್ಲಿ ಘಟಕಕ್ಕೆ ಅನುಮತಿ|

Mobile Van is Ready For Pure Drinking Water Plant Repair in Yadgir District
Author
Bengaluru, First Published Nov 14, 2019, 2:33 PM IST

ಯಾದಗಿರಿ(ನ.14): ಶುದ್ಧ ಕುಡಿವ ನೀರಿನ ಘಟಕಗಳ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಲು ಇನ್ಮುಂದೆ 108 ಆ್ಯಂಬುಲೆನ್ಸ್‌ ಮಾದರಿಯಲ್ಲೇ ಮೊಬೈಲ್‌ ವಾಹನವೊಂದು ರಸ್ತೆಗಳಿಯಲಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ಶುದ್ಧ ಕುಡಿವ ನೀರಿನ ಘಟಕಗಳ (ಆರ್‌ಓ ಪ್ಲಾಂಟ್‌) ಸ್ಥಿತಿಗತಿ ಬಗ್ಗೆ ಸಾರ್ವಜನಿಕರು ನಿಗದಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಿದರೆ, ಅದನ್ನು ತಕ್ಷಣದಲ್ಲೇ ರಿಪೇರಿ ಮಾಡಿ ಚಾಲ್ತಿಗೊಳಿಸಲು ಬೇಕಾಗುವ ಯಂತ್ರೋಪಕರಣಗಳುಳ್ಳ ವಾಹನ ಬಂದು, ಘಟಕದ ಪುನರುಜ್ಜೀವಗೊಳಿಸಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬುಧವಾರ ‘ಕನ್ನಡಪ್ರಭ-ಸುವರ್ಣ ನ್ಯೂಸ್‌’ ಸಹಯೋಗದಲ್ಲಿ ‘ಕನ್ನಡಪ್ರಭ’ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ, ಶುದ್ಧ ಕುಡಿವ ನೀರಿನ ಘಟಕಗಳ ಕುರಿತ ಫೋನ್‌ಇನ್‌ ನೇರಪ್ರಸಾರ ಕಾರ್ಯಕ್ರಮದಲ್ಲಿ, ಮೊಬೈಲ್‌ ವಾಹನದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಬುಧವಾರದಿಂದಲೇ ಇದಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದ್ದಾರೆ. 

ಜಿಲ್ಲಾಡಳಿತ ಗಮನ ಸೆಳೆದ ‘ಕನ್ನಡಪ್ರಭ’ ಸರಣಿ ವರದಿ

ಜಿಲ್ಲಾದ್ಯಂತ ಮೂಲೆ ಸೇರಿದ ಆರ್‌ಓ ಪ್ಲಾಂಟ್‌ ಹಾಗೂ ಅವುಗಳ ದುಸ್ಥಿತಿ ಬಗ್ಗೆ ‘ಕನ್ನಡಪ್ರಭ’ ಸರಣಿ ವರದಿಗಳ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಅದಲ್ಲದೆ, ಇದೇ ವಿಷಯವಾಗಿ ಸಾರ್ವಜನಿಕರಿಂದ ದೂರು ಸ್ವೀಕರಿಸುವ ಹಾಗೂ ಸಲಹೆ ಪಡೆಯುವ ದೃಷ್ಟಿಯಿಂದ ಫೋನ್‌ಇನ್‌ ಕಾರ್ಯಕ್ರಮಕ್ಕೆ ಸಿಇಒ ಶಿಲ್ಪಾ ಶರ್ಮಾರನ್ನು ಆಹ್ವಾನಿಸಿತ್ತು. ಜಿ.ಪಂ. ಮುಖ್ಯ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್‌, ಪ್ರಭಾರಿ ಎಕ್ಸಿಕ್ಯೂಟಿವ್‌ ಎಂಜಿನೀಯರ್‌ ರಾಜಕುಮಾರ್‌ ಪತ್ತಾರ್‌, ಸಹಾಯಕ ಎಕ್ಸಿಕ್ಯೂಟಿವ್‌ ಎಂಜಿನೀಯರ್‌ ಆನಂದ್‌ ಹಾಗೂ ಸುರಪುರದ ಸಹಾಯಕ ಎಕ್ಸಿಕ್ಯೂಟಿವ್‌ ಎಂಜಿನೀಯರ್‌ ಹನುಮಂತಪ್ಪ ಅಂಬಲಿ, ಪೂರಕ ಮಾಹಿತಿ ನೀಡಲು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅ.14 ರಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ‘ಕನ್ನಡಪ್ರಭ’ ಕಚೇರಿಯಲ್ಲಿ ಕೃಷಿ ಹಾಗೂ ರೈತರ ವಿಚಾರಗಳ ಕುರಿತ ಫೋನ್‌ ಕಾರ್ಯಕ್ರಮಕ್ಕೆ ವ್ಯಾಪಕ ಸ್ಪಂದನೆ ಸಿಕ್ಕಿತ್ತಲ್ಲದೆ, ರೈತರ ದೂರುಗಳ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾರಾವ್‌ ತೀವ್ರಗತಿಯಲ್ಲಿ ಕ್ರಮ ಕೈಗೊಂಡಿದ್ದರು. ಇದೇ ಹಿನ್ನೆಲೆಯಲ್ಲಿ, ಬುಧವಾರ ಆರ್‌ಓ ಪ್ಲಾಂಟ್‌ಗಳ ಸ್ಥಿತಿಗತಿ ಹಾಗೂ ಸಲಹೆಗಳ ಬಗ್ಗೆ ಜಿಲ್ಲಾ ಪಂಚಾಯ್ತಿ ಸಿಇಒ ಶಿಲ್ಪಾ ಶರ್ಮಾ ಕೂಡ ಆಗಮಿಸಿ, ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇಂತಹುದ್ದೊಂದು ಕಾರ್ಯಕ್ರಮದ ಬಗ್ಗೆ ಕಳೆದೆರಡು ದಿನಗಳಿಂದ ವ್ಯಾಪಕ ಪ್ರಚಾರವಾಗಿ, ಬುಧವಾರ ಬೆಳಿಗ್ಗೆಯಿಂದಲೇ ಮೊಬೈಲ್‌ ರಿಂಗಣಿಸತೊಡಗಿತ್ತು. ನಿಗದಿತ ಸಮಯದಂತೆ, ಬೆ.9ಕ್ಕೆ ಕಾರ್ಯಕ್ರಮ ಆರಂಭವಾಯಿತು. ದೂರದ ಜಮ್ಮು ಕಾಶ್ಮೀರದಲ್ಲಿ ಬಿಎಸ್‌ಎಫ್‌ ಯೋಧರಾಗಿ ಕಾರ್ಯನಿರ್ವಹಿಸುತ್ತಿರುವ, ಹುಣಸಗಿ ತಾಲೂಕು ಕಲದೇವನಹಳ್ಳಿಯ ರಾಯಪ್ಪ ಜಮ್ಮುವಿನಿಂದಲೇ ಫೋನಾಯಿಸಿದ್ದರು.

ಬೆ.6.30ಕ್ಕೆ ಫೋನ್‌ ಮಾಡಿದ್ದ ಯೋಧ ರಾಯಪ್ಪ ಅವರ ಕರೆಯನ್ನು 9 ಗಂಟೆಗೆ ವಿಶೇಷ ಆದ್ಯತೆ ಮೇರೆಗೆ ಮೊದಲಿಗೆ ಸ್ವೀಕರಿಸಲಾಯಿತು. ತಮ್ಮೂರಲ್ಲೊಂದು ಆರ್‌ಓ ಪ್ಲಾಂಟ್‌ ಸ್ಥಾಪನೆ ಹಾಗೂ ಅವರ ಅವಶ್ಯಕತೆ ಬಗ್ಗೆ ಸಿಇಓ ಅವರಿಗೆ ಮನವರಿಕೆ ಮಾಡಿದ ರಾಯಪ್ಪ, ವಿವಿಧ ರಾಸಾಯನಿಕ ಅಂಶಗಳನ್ನೊಳಗೊಂಡ ಮಿಶ್ರಣದ ನೀರನ್ನು ಕುಡಿದು, ಅಲ್ಲಿನ ಜನ ವಿವಿಧ ರೋಗಗಳಿಂದ ಬಳಲುತ್ತಿರುವುದನ್ನು ವಿವರಿಸಿದಾಗ, ಈ ಬಗ್ಗೆ ಖಂಡೀತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಶಿಲ್ಪಾ ಶರ್ಮಾ, ಸಂಜೆಯ ಹೊತ್ತಿಗಾಗಲೇ ಅಲ್ಲಿ ಹೊಸ ಆರ್‌ಓ ಪ್ಲಾಂಟ್‌ ಸ್ಥಾಪಿಸುವಂತೆ ನಿರ್ದೇಶನ ನೀಡಿದ್ದರು.

ಸುಮಾರು ಒಂದು ಗಂಟೆ ಹದಿನೈದು ನಿಮಿಷಗಳ ಕಾಲ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕ್ಷಣ ಕ್ಷಣಕ್ಕೂ ಬರುತ್ತಿದ್ದ ಕರೆಗಳು, ಜನರ ನಾಡಿಮಿಡಿತವನ್ನು ಸಾರಿದಂತಿತ್ತು. ಪ್ರತಿ ಕರೆಯನ್ನೂ ಗಂಭೀರವಾಗಿ ಅವಲೋಕಿಸಿ ಪ್ರತಿಕ್ರಿಯಿಸುತ್ತಿದ್ದ ಸಿಇಓ ಶಿಲ್ಪಾ ಶರ್ಮಾ, ಒಟ್ಟಾರೆ 42 ಕರೆಗಳನ್ನು ಸ್ವೀಕರಿಸಿದರು. ನೂರಕ್ಕೂ ಹೆಚ್ಚು ಕರೆಗಳಿಗೆ ಸಮಯದ ಅಭಾವದಿಂದ ಸ್ಪಂದಿಸಲು ಆಗಲಿಲ್ಲ.
ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ ತಂಡ ಆಯೋಜಿಸಿದ್ದ ಫೋನ್‌ ಇನ್‌ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಅವರು, ಈ ಎಲ್ಲ ಕರೆಗಳ ಮೂಲಕ ನೀಡಲಾದ ದೂರುಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ, ಅವುಗಳಿಗೆ ಸ್ಪಂದಿಸಲಾಗುತ್ತದೆ ಎಂದರು. 

ಇನ್ನು, ಪ್ರತಿಯೊಂದು ಕರೆಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಿದ್ದ ಕನ್ನಡಪ್ರಭ, ಈ ಎಲ್ಲ ಮಾಹಿತಿಗಳನ್ನೊಳಗೊಂಡ ವಿವರಗಳನ್ನು ಅಧಿಕಾರಿಗಳಿಗೆ ನೀಡಲಿದೆ. ನಂತರ, ಅಧಿಕಾರಿಗಳು ಪ್ರತಿಯೊಬ್ಬರ ದೂರಿಗರ ಪ್ರತ್ಯೇಕವಾಗಿ ಸ್ಪಂದಿಸಿ, ಇದರ ವರದಿಯನ್ನು ಇಲಾಖೆಯ ಮೇಲಧಿಕಾರಿಗಳಿಗೆ ನೀಡಲಿದ್ದು, ಅದರ ಪ್ರತಿಯನ್ನು ದೂರುದಾರರು ಹಾಗೂ ‘ಕನ್ನಡಪ್ರಭ’ಕ್ಕೆ ನೀಡಲಿದ್ದಾರೆ, ಈ ಬಗ್ಗೆ ಕನ್ನಡಪ್ರಭ ಫಾಲೋ ಅಪ್‌ ಮಾಡಲಿದೆ. ಆರೋ ಪ್ಲಾಂಟ್‌ ಬಗ್ಗೆ ದೂರು ಸಲ್ಲಿಕೆಗಾಗಿ ಮೊಬೈಲ್‌ ಸಂಖ್ಯೆ 9071083838 / 8088342060 ವಾಹನದ ಸಂಖ್ಯೆ ಕೆಎ-53, ಎಂಸಿ-83

ಆರ್‌ಓ ಪ್ಲಾಂಟ್‌ ನಿರ್ಮಿಸಿ ನಾಲ್ಕು ವರ್ಷಗಳಾದರೂ ಸರಿಯಾಗಿ ರಿಪೇರಿಯಾಗಿಲ್ಲ. ಕೆಲ ದಿನಗಳಿಂದೆ ಸುರಿದ ಮಳೆಯಿಂದಾಗಿ ನೀರು ಹಸಿರು ಬಣ್ಣದಿಂದ ಕೂಡಿದೆ. ಇದರಿಂದ ರೋಗಗಳು ಹರಡಬಹುದು. ಇದನ್ನು ಸರಿಪಡಿಸಿಬೇಕೇಂದು ಎಷ್ಟುಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು  ಗ್ರಾ.ಪಂ. ಕಚಕನೂರ ರಾಘವೇಂದ್ರ ಕೆ. ತಳಳ್ಳಿ ಅವರು ಹೇಳಿದ್ದಾರೆ.

ಗ್ರಾಮದಲ್ಲಿ ಆರ್‌.ಓ. ಪ್ಲಾಂಟ್‌ ನಿರ್ಮಿಸಿದ್ದರೂ ಕೂಡ ಇದುವರೆಗೂ ನೀರಿನ ಪೂರೈಕೆಯಾಗಿಲ್ಲ. ಕುಡಿವ ನೀರಿಗಾಗಿ ಹಾಹಾಕಾರ ಎದ್ದಿದೆ ಎಂದು ಕಾಕಲವಾರದ ಭೀಮಾಶಂಕರ ಅವರು ತಿಳಿಸಿದ್ದಾರೆ.
ಆರ್‌ಓ ಪ್ಲಾಂಟ್‌ ಎರಡಿದ್ದರೂ ನೀರು ಪೂರೈಕೆಯಾಗುತ್ತಿಲ್ಲ. ನಿಮ್ಮ (ಸಿಇಓ) ಗಮನಕ್ಕೆ ತಂದಾಗ, ಅದರಲ್ಲಿ ಒಂದು ಮಾತ್ರ ಆರಂಭವಾಗಿದ್ದು ಇನ್ನೊಂದು ಹಾಗೇ ಇದೆ. ಅದನ್ನು ಸರಿಪಡಿಸಿ ಕುಡಿವ ನೀರು ಪೂರೈಸಬೇಕಿದೆ ಎಂದು ನಗನೂರದ ಶಿವರಾಜ್‌ ಅವರು ಹೇಳಿದ್ದಾರೆ.

ಆರ್‌ಒ ಪ್ಲಾಂಟ್‌ ನಿರ್ಮಿಸಿ ಎರಡು ವರ್ಷವಾದರೂ ನೀರು ಮಾತ್ರ ಸರಬರಾಜುಯಾಗುತ್ತಿಲ್ಲ. ಆದ್ದರಿಂದ ಆರ್‌ಓ ಪ್ಲಾಂಟ್‌ ಆರಂಭಿಸಿ ಕುಡಿವ ನೀರು ಒದಸಿಕೊಡಬೇಕು ಎಂದು ಕಾಮನಟಗಿ ಗ್ರಾಮದ ನಿವಾಸಿ ಬಸವರಾಜ ಕಟ್ಟಿಮನಿ ಅವರು ಹೇಳಿದ್ದಾರೆ.

ಆರ್‌ಓ ಪ್ಲಾಂಟ್‌ ದುರಸ್ತಿಯಲ್ಲಿದೆ, ಅದರ ರಿಪೇರಿಯಾಗಿಲ್ಲ. ಅದನ್ನು ಸರಿಪಡಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಬೀರನೂರು ಗ್ರಾಮದ ನಿವಾಸಿಯಾದ ಸಿದ್ರಾಮರೆಡ್ಡಿ ಅವರು ಹೇಳಿದ್ದಾರೆ.
ಪ್ರವಾಸಿ ತಾಣವಾಗಿರುವ ಛಾಯಾ ಭಗವತಿಯಲ್ಲಿ ನೀರಿದ್ದರೂ ಸಹ ಯಾತ್ರಿಕರಿಗೆ ಹಾಗೂ ಜನರಿಗೆ ನೀರು ಪೂರೈಕೆಯಾಗುತ್ತಿಲ್ಲ. ಆದ್ದರಿಂದ ಜನರಿಗೆ ನೀರು ತಲಿಪಿಸುವಂತ ವ್ಯವಸ್ತೆ ಮಾಡಬೇಕು ಎಂದು ಕೊಡೇಕಲ್‌ ನಜಗನ್ನಾಥ ಆಚಾರ್ಯ ಜೋಷಿ ಅವರು ತಿಳಿಸಿದ್ದಾರೆ.

ನೀರಿಗಾಗಿ ಪರದಾಡುವಂತಾಗಿದೆ. ಅದಕ್ಕಾಗಿ ಗಾಂಧಿ​ ವೃತ್ತದಲ್ಲಿ ಆರ್‌ಓ ಪ್ಲಾಂಟ್‌ ನಿರ್ಮಿಸಿ ನೀರು ಪೂರೈಸಬೇಕಿದೆ ಎಂದು ಯಾದಗಿರಿ ನಗರದ ನಿವಾಸಿ ನಿಂಗರಾಜ ಅವರು ಹೇಳಿದ್ದಾರೆ.
ಎರಡು ಶುದ್ಧ ನೀರಿನ ಘಟಕವಿದ್ದು, 3 ವರ್ಷಗಳಾದರೂ ನೀರು ಮಾತ್ರ ಕಾಣಲೇ ಇಲ್ಲ. ಅದನ್ನು ಶುಚಿಗೊಳಿಸಿ ನೀರು ದೊರಕಿಸಿಕೊಡುವಂತೆ ಮಾಡಬೇಕಿದೆ. ಹಾಗೂ ಸರ್ಕಾರಿ ಪ್ರಾಢ ಶಾಲೆಯ ಮುಂದೆ ಹಾಕಿಸಿದ ಬೊರವೆಲ್‌ನಲ್ಲಿ ನೀರು ಉಪ್ಪಪ್ಪುಯಾಗಿದ್ದು. ಅಡುಗೆ ಮಾಡಲು ಮತ್ತು ಕುಡಿಯಲು ಯೋಗ್ಯವಿಲ್ಲದಾಗಿದ್ದರು ಅದೇ ನೀರನ್ನೇ ಬಳಸುತ್ತಿದ್ದಾರೆ. ಅದನ್ನು ಕೂಡ ಸರಿಪಡಿಸಿಬೇಕು ಎಂದು ಕುರಕುಂದಾ ಗ್ರಾಮ ನಿವಾಸಿಯಾದ ಯಲ್ಲಪ್ಪ ಅವರು ಹೇಳಿದ್ದಾರೆ.

ಗ್ರಾಮದಲ್ಲಿ ವಾರಕ್ಕೊಂದು ಬಾರಿ ನೀರು ಬರುತ್ತಿದೆ. ನೀರಿನ ಕೊರತೆಯಿಂದ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಕೊಡಬೇಕು ಎಂದು ಯಕ್ತಾಪುರದ ಗೊಲ್ಲಾಳಪ್ಪ ಅವರು ತಿಳಿಸಿದ್ದಾರೆ.

ಹೆಸರಿಗೆ ಮಾತ್ರ ಆರ್‌ಓ ಪ್ಲಾಂಟ್‌ ಆದ್ರೆ ಒಂದು ಹನಿ ಕುಡಿಯಲು ನೀರಿಲ್ಲ. ಗ್ರಾಮ ಪಂಚಾಯ್ತಿಗೆ ಎಷ್ಟೇ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆಯಿಲ್ಲ ಎಂದು ಈಡ್ಲೂರದ ಶಿವಕುಮಾರ್‌ ಅವರು ತಿಳಿಸಿದ್ದಾರೆ.

ಆರ್‌ಓ ಪ್ಲಾಂಟ್‌ ಇದ್ದರೂ ನೀರು ಪೂರೈಕೆಯಾಗುತ್ತಿಲ್ಲ. ಅದು ಯಾವಾಗ ನೋಡಿದರೂ ಮುಚ್ಚಿದ್ದು ಮುಚ್ಚಿದಂಗೆ ಇರುತ್ತದೆ. ಇತ್ತ ಕಡೆ ಗಮನಹರಿಸಿ ಜನರಿಗೆ ನೀರು ಒದಗಿಸುವಂತೆ ಮಾಡಿ ಎಂದು ಹೊತಪೇಠದ ಬಸಪ್ಪ ತಿಳಿಸಿದ್ದಾರೆ.

ಶುದ್ಧ ಕುಡಿವ ನೀರಿನ ಘಟಕ ಕಟ್ಟಿಸಿದ್ದು. ಅದು ಕೆಟ್ಟು ನಿಂತು 4 ತಿಂಗಳಾದರೂ ರಿಪೇರಿಯಾಗಿಲ್ಲ. ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದಾಗ ನಮಗೆ ಸಂಬಂಧವಿಲ್ಲವೆಂದು ಹೇಳುತ್ತಿದ್ದಾರೆ. ಅದನ್ನು ರಿಪೇರಿ ಮಾಡಿಸಿ ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಸಾವೂರಿನ ಮಲ್ಲಪ್ಪ ಅವರು ಹೇಳಿದ್ದಾರೆ.

ಆರ್‌.ಓ. ಪ್ಲಾಂಟ್‌ ವ್ಯವಸ್ಥೆ ಹದಗೆಟ್ಟು ಒಂದು ವರ್ಷವಾಗಿದೆ. ಯಾವ ಅ​ಧಿಕಾರಿಗಳು ಇತ್ತ ಸುಳಿದಿಲ್ಲ. ಅದನ್ನು ರಿಪೇರಿ ಮಾಡಿಸಿ ಜನರಿಗೆ ನೀರು ಪೂರೈಸಿಕೊಡಬೇಕು ಎಂದು ವಡವಟ್ಟಾ ಗ್ರಾಮದ ನಿವಾಸಿ ನಿಂಗಾರೆಡ್ಡಿ ಅವರು ಹೇಳಿದ್ದಾರೆ.

ಗ್ರಾಮದಲ್ಲಿ ಮೂರು ಆರ್‌.ಓ. ಪ್ಲಾಂಟ್‌ಗಳಿವೆ ಎಂದು ಹೇಳೋಕೆ ಅಷ್ಟೇ ಸೀಮಿತವಾಗಿದೆ. ಅಲ್ಲಿ ನೀರು ಬರದೇ ನೀರಿನ ಅವ್ಯವಸ್ಥೆ ತಾಂಡವಾಡುತ್ತಿದೆ ಎಂದು ಯರಗೋಳದ ಜಗದೇವಪ್ಪ ಹೇಳಿದ್ದಾರೆ.
ಆರ್‌.ಓ. ಪ್ಲಾಂಟ್‌ನಲ್ಲಿ ನೀರಿಲ್ಲ. ಅವು ಕೆಟ್ಟು ನಿಂತಿದೆ. ಇದರಿಂದ ಜನ ನೀರಿಗಾಗಿ ಪರದಾಡುವಂತಾಗಿದೆ. ಆದ್ದರಿಂದ ಆರ್‌.ಒ. ಪ್ಲಾಂಟ್‌ನ್ನು ರಿಪೇರಿ ಮಾಡಿಸಿ ನೀರು ಒದಗಿಸಿಕೊಡಬೇಕು ಎಂದು ಕಂದಕೂರು ಗ್ರಾಮದ ನಿವಾಸಿಯಾದ ಬಸರೆಡ್ಡಿ ಅವರು ಹೇಳಿದ್ದಾರೆ.

ಕನ್ನಡಪ್ರಭ ಕಚೇರಿಯಲ್ಲಿ ಬುಧವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಶಿಲ್ಪಾ ಶಮಾ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿದರು.

ಕನ್ನಡಪ್ರಭ ಕಚೇರಿಯಲ್ಲಿ ಬುಧವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಿಇಒ ಶಿಲ್ಪಾ ಶರ್ಮಾ ಅವರ ಜೊತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್‌, ಪ್ರಭಾರಿ ಎಕ್ಸಿಕ್ಯೂಟಿವ್‌ ಎಂಜಿನೀಯರ್‌ ರಾಜಕುಮಾರ್‌ ಪತ್ತಾರ್‌, ಸಹಾಯಕ ಎಕ್ಸಿಕ್ಯೂಟಿವ್‌ ಎಂಜಿನೀಯರ್‌ ಆನಂದ್‌ ಹಾಗೂ ಸುರಪುರದ ಸಹಾಯಕ ಎಕ್ಸಿಕ್ಯೂಟಿವ್‌ ಎಂಜಿನೀಯರ್‌ ಹನುಮಂತಪ್ಪ ಅಂಬಲಿ, ಪೂರಕ ಮಾಹಿತಿ ನೀಡಲು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
 

Follow Us:
Download App:
  • android
  • ios