ರಾಜ್ಯದಲ್ಲಿ 36 ಜಿಲ್ಲೆ ಎಂದ ಕಟೀಲ್: ಸಮರ್ಥಿಸಿಕೊಂಡ ಬಿಜೆಪಿ

ಭಾಷಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ  ನಳೀನ್‌ ಕುಮಾರ್‌ ಕಟೀಲ್‌ ಎಡವಟ್ಟು| ರಾಜ್ಯದಲ್ಲಿ ಜಿಲ್ಲೆಗಳ ಸಂಖ್ಯೆ ಹೇಳಲು ಹೋಗಿ ಕಟೀಲ್‌ ಗೊಂದಲ| 32, 36, 34 ಜಿಲ್ಲೆಗಳಿವೆ ಎಂದು ಭಾಷಣದಲ್ಲಿ ಪ್ರಸ್ತಾಪಿಸಿ ಗೊಂದಲ|

Is It Nalin Kumar Kateel Did Not Know How Many Districts in Karnataka?

ಯಾದಗಿರಿ(ಅ.18): ರಾಜ್ಯದಲ್ಲಿ ಒಟ್ಟು ಎಷ್ಟು ಜಿಲ್ಲೆಗಳಿವೆ ಅನ್ನೋದೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರಿಗೆ ಗೊಂದಲ ಮೂಡಿದೆಯೇನೋ? ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಯಾದಗಿರಿ ನಗರಕ್ಕೆ ಆಗಮಿಸಿದ್ದ ಕಟೀಲ್‌ ಅವರು, ಬೆಳಿಗ್ಗೆ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡುವಾಗ 32 ಜಿಲ್ಲೆಗಳು ಎಂದಿದ್ದರು. ಇದು ಬೆಳಿಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ನಂತರ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಜಿಲ್ಲೆಗಳ ಸಂಖ್ಯೆ 36-34 ಎಂದು ಮಾತನಾಡಿದ್ದುದು, ಮತ್ತಷ್ಟೂ ಮಜುಗರಕ್ಕೆ ಕಾರಣವಾಗಿಸಿತ್ತು. ಇದು ಮತ್ತೇ ಮಾಧ್ಯಮಗಳಲ್ಲಿ ಪ್ರಸಾರವಾದಾಗ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ರಾಜ್ಯದಲ್ಲಿರುವ ಒಟ್ಟು ಜಿಲ್ಲೆಗಳ ಬಗ್ಗೆಯೇ ಮಾಹಿತಿಯೇ ಗೊತ್ತಿಲ್ಲ ಎಂದು ವ್ಯಂಗ್ಯ ಮಾತುಗಳು ಕೇಳಿ ಬಂದವು.

ಬಳಿಕ ಈ ಪ್ರಮಾದವನ್ನು ಸರಿಪಡಿಸಲು ಮುಂದಾದ ಸುರಪುರ ಶಾಸಕ ನರಸಿಂಹನಾಯಕ(ರಾಜೂಗೌಡ) ಅವರು, ಬಿಜೆಪಿ ಪಕ್ಷದ ಸಂಘಟನೆಯ ಅನುಕೂಲಕ್ಕಾಗಿ ರಾಜ್ಯವನ್ನು 36 ಜಿಲ್ಲೆಗಳಾಗಿ ವಿಭಾಗ ಮಾಡಿಕೊಂಡಿದೆ. ಹೀಗಾಗಿ ಕಟೀಲ್ ಅವರು ಹೀಗೆ ಹೇಳಿದ್ದಾರೆ ಅಷ್ಟೇ ಎಂದು ಹೇಳಿದ್ದಾರೆ. ಈ ಹೇಳಿಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಘಟಕ 36 ಜಿಲ್ಲೆಗಳಲ್ಲಿನ ಬಿಜೆಪಿ ಜಿಲ್ಲಾಧ್ಯಕ್ಷರುಗಳ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.

ಯಡಿಯೂರಪ್ಪಗೆ ಜೈ:

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋ ಮಾತುಗಳಿಗೆ ತೆರೆ ಎಳೆಯಲು ಮುಂದಾದವರಂತೆ ಕಂಡು ಬಂದ ಕಟೀಲ್‌ ಅವರು, ಗುರುವಾರ ಯಾದಗಿರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಜೈ ಎಂದೇ ಭಾಷಣ ಆರಂಭಿಸಿದ್ದುದು ಚಪ್ಪಾಳೆಗಳ ಸುರಿಮಳೆಗೆ ಕಾರಣವಾಗಿತ್ತು.

ಗುಲಾಮಗಿರಿ ಸಂಕೇತವಾಗಿದ್ದ ಹೈದರಾಬಾದ್‌ ಕರ್ನಾಟಕ ಭಾಗದ ಹೆಸರನ್ನು ಬದಲಿಸಿದ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ನಳೀನ್‌ ಕುಮಾರ್‌, ಬಿಎಸ್ವೈ ಅವರು ನೇಕಾರರ ಸಾಲಮನ್ನಾ ಮಾಡಿದ್ದಾರೆ, ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಿದ್ದಾರೆ, ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಹೈದರಾಬಾದ್‌ ಕರ್ನಾಟಕ ಭಾಗವನ್ನು ಗುಲಾಮಗಿರಿ ಹೆಸರಿನಿಂದ ಮುಕ್ತಿಗೊಳಿಸಿದ ಬಿಎಸ್ವೈ ಅವರಿಗೆ ಎದ್ದುನಿಂತು ಜೈಕಾರ ಹೇಳೋಣ ಎಂದು ಬಿಜೆಪಿ ಪದಾಧಿಕಾರಿಗಳಿಗೆ ಎಂದಾಗ, ಎದ್ದುನಿಂತು ಎಲ್ಲರೂ ಇದಕ್ಕೆ ದನಿಗೂಡಿಸಿದರು.

ಮುಂದಿನ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಬಿಎಸ್ವೈ ಅವರೇ ಮುಂದುವರೆಯುತ್ತಾರೆ, 15 ಕ್ಷೇತ್ರದ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲಿದೆ, ಮುಂದಿನ ವಿಧಾನಸಭೆಯ ಚುನಾವಣೆಯೂ ಬಿಎಸ್ವೈ ಅವರ ನೇತೃತ್ವದಲ್ಲೇ ನಡೆಯಲಿದೆ, 150 ಸ್ಥಾನವನ್ನು ಗೆಲ್ಲಿಸಲು ಬಿಎಸ್ವೈ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ ಎಂದರು.

ಇದಾದ ನಂತರ ಹೊರಬಂದ ಅವರು ಮಾಧ್ಯಮಗಳೆದುರು, ಯಡಿಯೂರಪ್ಪ ಅವರ ಜೊತೆ ಎಲ್ಲವೂ ಸರಿಯಿದೆ ಎಂದು ಚುಟುಕಾಗಿಯೇ ಹೇಳಿ ಮುನ್ನೆಡೆದರು.
 

Latest Videos
Follow Us:
Download App:
  • android
  • ios