ಭಾರತಕ್ಕೆ ಬೇಕಾಗಿರುವ ವಿವಾದಿತ ಧರ್ಮಪ್ರಚಾರಕ ಝಾಕಿರ್ ನಾಯ್ಕ್ ಅವರ ಬಾಂಗ್ಲಾದೇಶ ಭೇಟಿ ಮುಹಮ್ಮದ್ ಯೂನಸ್ ಸರ್ಕಾರ ತಡೆಹಿಡಿದಿದೆ. ಭಾರತದ ಅಧಿಕೃತ ಆಕ್ಷೇಪಣೆ ಮತ್ತು ವ್ಯಾಪಕ ಟೀಕೆಗಳ ನಂತರ, ಢಾಕಾದಲ್ಲಿ ನಡೆಯಬೇಕಿದ್ದ ಧಾರ್ಮಿಕ ಕಾರ್ಯಕ್ರಮವನ್ನು ರದ್ದುಗೊಳಿಸಿ, ನಾಯ್ಕ್ ಪ್ರವೇಶವನ್ನು ನಿಷೇಧಿಸಲಾಗಿದೆ.

ಭಾರತಕ್ಕೆ ಬೇಕಾಗಿರುವ ಮೂಲಭೂತವಾದಿ ಇಸ್ಲಾಮಿಕ್ ಧರ್ಮಪ್ರಚಾರಕ ಝಾಕಿರ್ ನಾಯ್ಕ್ ಅವರ ಬಾಂಗ್ಲಾದೇಶ ಭೇಟಿಯನ್ನು ಬಾಂಗ್ಲಾದೇಶದ ಮುಹಮ್ಮದ್ ಯೂನಸ್ ಸರ್ಕಾರ ಈಗ ತಡೆಹಿಡಿದಿದೆ. ವ್ಯಾಪಕ ಟೀಕೆ ಮತ್ತು ವಿವಾದದ ನಂತರ, ಝಾಕಿರ್ ನಾಯ್ಕ್ ಸದ್ಯಕ್ಕೆ ದೇಶಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಮಂಗಳವಾರ ಢಾಕಾ ಸೆಕ್ರೆಟರಿಯೇಟ್‌ನಲ್ಲಿ ನಡೆದ ಗೃಹ ಸಚಿವಾಲಯದ ಕಾನೂನು ಮತ್ತು ಸುವ್ಯವಸ್ಥೆ ಕೋರ್ ಕಮಿಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಥಳೀಯ ಮಾಧ್ಯಮ ಸಂಸ್ಥೆ ಪ್ರಥಮ್ ಅಲೋ ವರದಿ ಮಾಡಿದೆ.

ಈ ಹಿಂದೆ, ದ್ವೇಷ ಭಾಷಣಗಳಿಗೆ ಕುಖ್ಯಾತರಾಗಿದ್ದ ಝಾಕಿರ್ ನಾಯ್ಕ್ ಸ್ವಾಗತಿಸಲು ಯೂನಸ್ ಸರ್ಕಾರ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಈ ಸುದ್ದಿ ಹೊರಬಿದ್ದ ತಕ್ಷಣ, ಭಾರತ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿತು. ಝಾಕಿರ್ ನಾಯ್ಕ್ ಢಾಕಾಗೆ ಬಂದರೆ ಭಾರತಕ್ಕೆ ಗಡೀಪಾರು ಮಾಡಲಾಗುತ್ತೆ ಎಂಬ ಭರವಸೆಯನ್ನು ವ್ಯಕ್ತಪಡಿಸಿ ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿತು.

ಢಾಕಾ ಬಿಟ್ಟರೆ ಝಾಕೀರ್ ನಾಯ್ಕ್ ಈಗ ಎಲ್ಲಿ ಆಶ್ರಯ?

ಝಾಕೀರ್ ನಾಯ್ಕ್ ಪ್ರಸ್ತುತ ಮಲೇಷ್ಯಾದಲ್ಲಿ ಆಶ್ರಯ ಪಡೆಯುತ್ತಿದ್ದಾನೆ. ನಾಯ್ಕ್ ಭಾರತದಲ್ಲಿ ಭಯೋತ್ಪಾದನೆ, ಹಣ ವರ್ಗಾವಣೆ ಮತ್ತು ದ್ವೇಷ ಭಾಷಣ ಸೇರಿದಂತೆ ಹಲವಾರು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. 2016 ರಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಭಯೋತ್ಪಾದನಾ ವಿರೋಧಿ ಕಾನೂನುಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿತು, ನಂತರ ಭಾರತದಿಂದ ಪಲಾಯನ ಮಾಡಿ ಮಲೇಷ್ಯಾದಲ್ಲಿ ಶಾಶ್ವತ ನಿವಾಸ ಸ್ಥಾನಮಾನವನ್ನು ಪಡೆದುಕೊಂಡಿರುವ ಝಾಕೀರ್ ನಾಯ್ಕ್

ಝಾಕೀರ್ ನಾಯ್ಕ್ ಢಾಕಾದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು:

ವರದಿಗಳ ಪ್ರಕಾರ, ಝಾಕೀರ್ ನಾಯ್ಕ್ ನವೆಂಬರ್ 28-29 ರಂದು ಢಾಕಾದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಈ ಕಾರ್ಯಕ್ರಮವನ್ನು ಸ್ಪಾರ್ಕ್ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಆಯೋಜಿಸಿತ್ತು, ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ನಾಯ್ಕ್ ಅವರನ್ನು ಬಾಂಗ್ಲಾದೇಶಕ್ಕೆ ಕರೆತರಲು ಸಿದ್ಧತೆ ನಡೆಸುತ್ತಿರುವುದಾಗಿ ಅದು ಘೋಷಿಸಿತ್ತು. ಢಾಕಾದ ಅಗರಗಾಂವ್ ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆಯಬೇಕಿತ್ತು ಮತ್ತು ಆಯೋಜಕರು ಸರ್ಕಾರದ ಅನುಮತಿಯನ್ನು ಪಡೆದಿದ್ದಾರೆ ಎಂದು ಹೇಳಿಕೊಂಡಿದ್ದರು.

ಕಾರ್ಯಕ್ರಮ ರದ್ದುಗೊಳಿಸಿದ ಸರ್ಕಾರ:

ಸರ್ಕಾರ ಈಗ ಆ ಕಾರ್ಯಕ್ರಮವನ್ನು ರದ್ದುಗೊಳಿಸಿದೆ. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರವು ಈ ಹಿಂದೆ ಝಾಕಿರ್ ನಾಯಕ್ ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿತ್ತು ಎಂಬುದು ಗಮನಿಸಬೇಕಾದ ಸಂಗತಿ. 2016 ರ ಢಾಕಾ ಕೆಫೆ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಭಯೋತ್ಪಾದಕರು ಝಾಕೀರ್ ನಾಯ್ಕ್ ಅವರ ಆಮೂಲಾಗ್ರ ಭಾಷಣಗಳಿಂದ ಪ್ರಭಾವಿತರಾಗಿದ್ದರು ಎಂದು ವರದಿಯಾಗಿತ್ತು.

ಭಾರತದಲ್ಲಿ ಝಾಕೀರ್ ನಾಯ್ಕ್ ವಿರುದ್ಧ ಪ್ರಕರಣಗಳ ತನಿಖೆ:

ಭಾರತದಲ್ಲಿ ನಾಯ್ಕ್ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆ ಇನ್ನೂ ಮುಂದುವರೆದಿದ್ದು, ಭಾರತೀಯ ಸಂಸ್ಥೆಗಳು ಝಾಕೀರ್ ನಾಯ್ಕ್ ಹಸ್ತಾಂತರಿಸಲು ಪ್ರಯತ್ನಿಸುತ್ತಿವೆ. ಬಾಂಗ್ಲಾದೇಶ ಸರ್ಕಾರದ ಈ ನಿರ್ಧಾರವನ್ನು ಪ್ರಾದೇಶಿಕ ಭದ್ರತೆಯಲ್ಲಿ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗುತ್ತಿದೆ.