ಈ ತಂತ್ರಜ್ಞಾನ ಕ್ಯಾನ್ಸರ್‌ನ ನಾಲ್ಕನೇ ಹಂತದಲ್ಲಿ ಬಳಲುತ್ತಿರೋ ರೋಗಿಗಳಿಗೆ, ಆಲ್ಝೈಮರ್, ಪಾರ್ಕಿನ್ಸನ್ ಮತ್ತು ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳಂತಹ ದುಸ್ತರ ಪರಿಸ್ಥಿತಿಗಳಿಂದ ಬಳಲುತ್ತಿರುವ ರೋಗಿಗಳಿಗೆ ಈ ಚಿಕಿತ್ಸೆ ಆಶಾಕಿರಣವಾಗಲಿದೆ ಎಂದು ವರದಿಯಾಗಿದೆ.
ವಾಷಿಂಗ್ಟನ್ ಡಿಸಿ: ಇಂದಿನ ಆಧುನಿಕ ವೈದ್ಯಕೀಯ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಅಂತ ಊಹಿಸಲು ಅಸಾಧ್ಯ. ವೈದ್ಯಕೀಯ ವಿಜ್ಞಾನದಲ್ಲಿ ಎಲ್ಲವೂ ಸಾಧ್ಯ ಎಂಬ ಮಾತು ಬಂದಾಗಿದೆ. ಈಗಾಗಲೇ ಹಲವು ವಿಸ್ಮಯಗಳಿಗೆ ವೈಜ್ಞಾನಿಕ ಜಗತ್ತು ಸಾಕ್ಷಿಯಾಗಿದೆ. ದೇಹದ ಅಂಗಗಳ ಮರು ಜೋಡಿಸುವಿಕೆ ಸೇರಿದಂತೆ ಹೃದಯ, ಕಿಡ್ನಿ, ಕಣ್ಣು ಸೇರಿದಂತೆ ಹಲವು ಟ್ರಾನ್ಸಪ್ಲಂಟ್ ಪ್ರಕ್ರಿಯೆಗಳು ಸುಲಲಿತವಾಗಿ ನಡೆಯುತ್ತಿವೆ.
ಕೆಲ ದಿನಗಳ ಹಿಂದೆಯಷ್ಟೇ ಬೊಸ್ಟೊನ್‌ನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ 62 ವರ್ಷದ ವ್ಯಕ್ತಿಗೆ ಹಂದಿಯ ಮೂತ್ರಪಿಂಡದ ಕಸಿಯನ್ನು ಯಶಸ್ವಿಯಾಗಿ ಮಾಡಲಾಗಿತ್ತು. ದೆಹಲಿಯ 45 ವರ್ಷದ ವ್ಯಕ್ತಿಗೆ ಎರಡು ಕೈಗಳನ್ನು ಜೋಡಣೆ ಮಾಡಲಾಗಿತ್ತು. ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ದೇಹಕ್ಕೆ ರುಂಡವನ್ನು ಜೋಡಿಸುವ ತಂತ್ರಜ್ಞಾನ ಬಂದಿದೆ.
ಜಾಗತೀಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ವಿಡಿಯೋಗಳು
ಅಮೆರಿಕ ಮೂಲದ ನರವಿಜ್ಞಾನ ಮತ್ತು ಬಯೋಮೆಡಿಕಲ್ ಇಂಜಿನಿಯರಿಂಗ್ ಸ್ಟಾರ್ಟಪ್ ಬ್ರೈನ್‌ಬ್ರಿಡ್ಜ್ ಸಂಶೋಧಕರೊಬ್ಬರು ತಲೆಕಸಿ ಮಾಡುವ ವ್ಯವಸ್ಥೆಯನ್ನು ಅಭಿವೃದ್ಧಗೊಳಿಸುತ್ತಿರೋದಾಗಿ ಘೋಷಿಸಿಕೊಂಡಿದ್ದಾರೆ. ಇದೀಗ ಸಂಶೋಧಕರ ಪ್ರಕಟನೆ ಜಾಗತೀಕಮಟ್ಟದಲ್ಲಿ ಸದ್ದು ಆಗುತ್ತಿದೆ. ಈ ಶಸ್ತ್ರಚಿಕಿತ್ಸೆ ಹೇಗೆ ನಡೆಯುತ್ತೆ ಎಂಬುದರ ರೋಬೋಟಿಕ್ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಯಾರಿಗೆ ಈ ಚಿಕಿತ್ಸೆಯಿಂದ ಲಾಭ?
ರೋಬೋಟ್ ಮಾನವ ತಲೆಯನ್ನು ಹೇಗೆ ಮತ್ತೊಂದು ರೋಬೋಟ್‌ಗೆ ಜೋಡಣೆ ಮಾಡಲಾಗುತ್ತಿದೆ ಎಂಬುದನ್ನು ಕಾಣಬಹುದು. ಬೆನ್ನುಮೂಳೆ ಸೇರಿದಂತೆ ಇತರೆ ಮೂಳೆಗಳನ್ನು ಹೇಗೆ ಸೂಕ್ಷ್ಮವಾಗಿ ಜೋಡಿಸಲಾಗುತ್ತಿದೆ ಎಂಬುದನ್ನು ಸಹ ವಿಡಿಯೋದಲ್ಲಿ ತೋರಿಸಲಾಗಿದೆ. ಈ ತಂತ್ರಜ್ಞಾನ ಕ್ಯಾನ್ಸರ್‌ನ ನಾಲ್ಕನೇ ಹಂತದಲ್ಲಿ ಬಳಲುತ್ತಿರೋ ರೋಗಿಗಳಿಗೆ, ಆಲ್ಝೈಮರ್, ಪಾರ್ಕಿನ್ಸನ್ ಮತ್ತು ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳಂತಹ ದುಸ್ತರ ಪರಿಸ್ಥಿತಿಗಳಿಂದ ಬಳಲುತ್ತಿರುವ ರೋಗಿಗಳಿಗೆ ಈ ಚಿಕಿತ್ಸೆ ಆಶಾಕಿರಣವಾಗಲಿದೆ ಎಂದು ವರದಿಯಾಗಿದೆ.
ಈ ಕಸಿ ಮಾಡುವ ಪ್ರಕ್ರಿಯೆಯಲ್ಲಿ ಹೃದಯ ಭಾಗದ ಕಾರ್ಯವಿಧಾನ, ಮೆದುಳಿನ ಭಾಗದಲ್ಲಿಯ ಪ್ರಜ್ಞೆ, ನೆನಪು ಮತ್ತು ಅರಿವಿನ ಸಾಮರ್ಥ್ಯವನ್ನು ಸಂರಕ್ಷಿಸೋದು ಮಹತ್ವದ್ದಾಗಿದೆ. ಸಾವನ್ನಪ್ಪಿದ ಆರೋಗ್ಯಕರ ವ್ಯಕ್ತಿಯ ಕತ್ತನ್ನು ಕಸಿ ಮಾಡುವ ಮಹತ್ವಾಕಾಂಕ್ಷೆಯ ಪರಿಕಲ್ಪನೆಯನ್ನು ಈ ಪ್ರಕ್ರಿಯೆ ಒಳಗೊಂಡಿರಲಿದೆ. ಈ ಹೊಸ ಕಸಿ ಪರಿಲ್ಪನೆಯ ಬಗ್ಗೆ ವೈಜ್ಞಾನಿಕ ವೇದಿಕೆ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.
ಈ ತಂತ್ರಜ್ಞಾನದ ಬಗ್ಗೆ ಆತಂಕ ಇದೆಯಾ?
ವಿಮರ್ಶಕರು ಈ ತಂತ್ರಜ್ಞಾನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದು ಒಬ್ಬ ವ್ಯಕ್ತಿಯ ಭಾವನೆ ಮತ್ತು ಆತನ ಆಲೋಚನೆಗಳನ್ನು ಕಸಿ ಮಾಡುವ ಮೂಲಕ ತಿಳಿದುಕೊಂಡಂತೆ ಆಗುತ್ತಿದೆ. ಈ ತಂತ್ರಜ್ಞಾನದ ಕುರಿತು ನೈತಿಕ ನೆಲಗಟ್ಟಿನಲ್ಲಿಯೂ ಚರ್ಚೆಗಳು ನಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ನೆಟ್ಟಿಗರ ಅಭಿಪ್ರಾಯ ಏನು?
ಇನ್ನು ಎಕ್ಸ್ ಖಾತೆಯಲ್ಲಿ ಈ ವಿಡಿಯೋಗಳನ್ನು ನೋಡಿದ ನೆಟ್ಟಿಗರು ಸಹ ಗಂಭೀರವಾಗಿ ಚರ್ಚೆ ನಡೆಸುತ್ತಾ ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಊಹೆ ಮಾಡಿಕೊಂಡಷ್ಟು ಸುಲಭವಲ್ಲ. ಈ ರೀತಿಯ ಕಸಿ ತಂತ್ರಜ್ಞಾನ ಅನೈತಿಕವಾದ್ದದ್ದ. ಇಲ್ಲಿ ನಮ್ಮೆಲ್ಲರ ಸೃಷ್ಟಿಕರ್ತ ದೇವರು. ನಾವುಗಳು ದೇವರ ಜೊತೆ ಸ್ಪರ್ಧೆ ಮಾಡಿದಂತಾಗುತ್ತದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಒಂದು ವೇಳೆ ಈ ಚಿಕಿತ್ಸೆ ಬಂದರೆ ಕೇವಲ ಶ್ರೀಮಂತರಿಗೆ ಮಾತ್ರ ಸಿಗಲಿದೆ. ಇಂತಹ ದುಬಾರಿ ಅವಿಷ್ಕಾರಗಳಿಂದ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳ ಬಳಕೆ ಸಂಬಂಧ ಸಮಾಜದಲ್ಲಿ ಅಸಮಾನತೆಯನ್ನು ಸೃಷ್ಟಿಸುತ್ತದೆ ಎಂಬ ವಾದವೂ ಮಂಡನೆ ಆಗುತ್ತಿದೆ.
ಕಸಿ ಮಾಡುವ ಪ್ರಕ್ರಿಯೆ ಹೇಗೆ ನಡೆಯಲಿದೆ?
ಇಷ್ಟೆಲ್ಲಾ ಚರ್ಚೆಗಳ ನಡುವೆಯೂ ಬ್ರೈನ್‌ಬ್ರಿಡ್ಜ್‌ನ ಪ್ರಾಜೆಕ್ಟ್ ಲೀಡ್ ಹಶೆಮ್ ಅಲ್-ಘೈಲಿ ನೇತೃತ್ವದಲ್ಲಿ ಸಂಶೋಧನೆ ಮುಂದುವರಿದಿದೆ. ಬಿಡುಗಡೆ ಮಾಡಲಾಗಿರುವ ವಿಡಿಯೋದಲ್ಲಿ ಈ ಸಂಬಂಧ ಶೋಧನೆ ಹೇಗೆ ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ವಿವರಿಸಲಾಗಿದೆ. ಮೆದುಳಿನ ಜೀವಕೋಶದ ನಾಶ ತಗ್ಗಿಸಲು ಮತ್ತು ಕಸಿ ಮಾಡಿದ ತಲೆ ಮತ್ತು ದಾನಿ ದೇಹದ ನಡುವೆ ತಡೆರಹಿತ ಹೊಂದಾಣಿಕೆಯನ್ನು ಖಚಿತಪಡಿಸಿಕೊಳ್ಳಲು ಹೈ-ಸ್ಪೀಡ್ ರೋಬೋಟಿಕ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಬೆನ್ನುಹುರಿ, ನರಗಳು ಮತ್ತು ರಕ್ತನಾಳಗಳ ಸೂಕ್ಷ್ಮ ಮರುಸಂಪರ್ಕದಲ್ಲಿ ಶಸ್ತ್ರಚಿಕಿತ್ಸಾ ರೋಬೋಟ್‌ಗಳಿಗೆ ಮಾರ್ಗದರ್ಶನ ನೀಡಲು ಸುಧಾರಿತ AI ಅಲ್ಗೋರಿದಮ್ ಬಳಕೆ ಮಾಡಲಾಗುತ್ತಿದೆ.
ಒಂದು ದೇಹದಿಂದ ಕತ್ತರಿಸಿದ ನರಕೋಶಗಳಿಗೆ ಮರು ಸಂಪರ್ಕಗೊಳಿಸಲು ಅಥವಾ ಜೀವಂತಗೊಳಿಸಲು Chemical adhesive and polyethylene glycol ಕಾರ್ಯವಿಧಾನ ಬಳಕೆ ಮಾಡಲಾಗುತ್ತದೆ. ಬ್ರೈನ್‌ಬ್ರಿಡ್ಜ್ ಪರಿಕಲ್ಪನೆಯ ಪ್ರತಿಯೊಂದು ಅಂಶವು ದೀರ್ಘವಾದ ವೈಜ್ಞಾನಿಕ ಸಂಶೋಧನೆಯಿಂದ ಆಧಾರದಲ್ಲಿ ನಡೆಯುತ್ತಿದೆ ಎಂದು ಅಲ್-ಘೈಲಿ ವಿವರಿಸುತ್ತಾರೆ.
ಈ ಕಸಿ ಪ್ರಕ್ರಿಯೆಯ ಕಾರ್ಯಸಾಧ್ಯತೆಯ ಅಧ್ಯಯನಗಳ ಫಲಿತಾಂಶಗಳು ಸಕಾರಾತ್ಮಕವಾಗಿ ಮುಂದುವರಿದ್ರೆ ಮುಂದಿನ ಎಂಟು ವರ್ಷಗಳಲ್ಲಿ ಇಂತಹ ಮೊದಲ ಶಸ್ತ್ರಚಿಕಿತ್ಸೆಯನ್ನು ಮಾಡಬಹುದು ಎಂದು ಅಲ್-ಘೈಲಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.
