ಮೀನುಗಾರ ಮಹಿಳೆ ಸಾಹಸಕ್ಕೆ ಬೆರಗಾದ ಜನ 450 ಕೆ.ಜಿ ತೂಗುತ್ತಿದ್ದ ಬ್ಲೂಫಿನ್ ಟ್ಯೂನ ಮೀನು ಒಂಟಿಯಾಗಿ ಮೇಲೆತ್ತಿ ದೋಣಿಗೆ ಹಾಕಿದ ಮಹಿಳೆ

ಮೀನುಗಾರ ಮಹಿಳೆಯೊಬ್ಬರು 450 ಕೆ.ಜಿ ತೂಗುತ್ತಿದ್ದ ಬ್ಲೂಫಿನ್ ಟ್ಯೂನ ಮೀನನ್ನು ಒಬ್ಬಂಟಿಯಾಗಿ ಮೇಲೆತ್ತಿ ತನ್ನ ದೋಣಿಗೆ ಎಳೆದುಕೊಂಡು ಹೋಗಿ ಹಾಕಿದ್ದು, ನೆಟ್ಟಿಗರು ಆಕೆಯ ಧೈರ್ಯ ಹಾಗೂ ಸಾಮರ್ಥ್ಯಕ್ಕೆ ವಿಸ್ಮಯಗೊಂಡಿದ್ದಾರೆ. ಮಿಚೆಲ್ ಬ್ಯಾನ್ಸ್ವಿಕ್ಜ್ ಸಿಕಾಲೆ (Michelle Bancewicz Cicale) ಎಂಬ ಮೀನುಗಾರಿಕಾ ಮಹಿಳೆ ನ್ಯೂ ಹ್ಯಾಂಪ್‌ಶೈರ್‌ನ ( New Hampshire) ಹ್ಯಾಂಪ್ಟನ್ ಬೀಚ್‌ನಲ್ಲಿ (Hampton Beach) ದೈತ್ಯಾಕಾರದ ಮೀನನ್ನು ಹಿಡಿದಿದ್ದಾಳೆ. ಈ ಮೀನು ಬರೋಬರಿ 450 ಕೆಜಿ ತೂಕವಿತ್ತು. ಅಲ್ಲದೇ ಕಳೆದ ಆಕ್ಟೋಬರ್‌ನಲ್ಲಿ 643 ಕೆಜಿ ತೂಕದ ಮೀನನ್ನು ಕೂಡ ಈ ಮಹಿಳೆ ಹಿಡಿದಿದ್ದಳಂತೆ. 

ಈ ಮೀನನ್ನು ಒಂದೇ ಬಾರಿಗೆ ಹಿಡಿದು ದೋಣಿಗೆ ಹಾಕಲು ಅಗಾಧ ಪ್ರಮಾಣದ ಶಕ್ತಿ ಹಾಗೂ ಕೌಶಲ್ಯಪೂರ್ಣ ಸಾಮರ್ಥ್ಯ ಬೇಕಾಗುತ್ತದೆ. ಸಣ್ಣ ಮೀನುಗಳನ್ನು ಸುಲಭವಾಗಿ ಹಿಡಿದು ರಾಡ್‌ನ ತ್ವರಿತ ಎಳೆತದಿಂದ ಒಮ್ಮೆಗೆ ದೋಣಿಗೇರಿಸಬಹುದು. ಆದರೆ ದೊಡ್ಡ ಗಾತ್ರದ ಮೀನುಗಳಿಗೆ ಸಂಪೂರ್ಣ ವಿಭಿನ್ನವಾದ ಉಪಕರಣಗಳು ಮತ್ತು ಹೆಚ್ಚಿನ ಶ್ರಮ ಬೇಕಾಗುತ್ತದೆ.

ಅದಕ್ಕಾಗಿಯೇ ಅಮೆರಿಕಾದ ಹ್ಯಾಂಪ್ಟನ್ ಬೀಚ್‌ನಿಂದ 450-ಕಿಲೋ ಗ್ರಾಂ ತೂಗುತ್ತಿದ್ದ ಬ್ಲೂಫಿನ್ ಟ್ಯೂನ ಮೀನನ್ನು ತನ್ನ ದೋಣಿಯಲ್ಲಿ ಸಾಗಿಸಲು ಏಕಾಂಗಿಯಾಗಿ ಶ್ರಮ ವಹಿಸಿದ ಮಿಚೆಲ್ ಬ್ಯಾನ್ಸ್ವಿಕ್ಜ್ ಸಿಕಾಲೆ ( Michelle Bancewicz Cicale) ಬಗ್ಗೆ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಾದ ರೆಡ್ಡಿಟ್ (Reddit), ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ(Facebook) ಮಿಚೆಲ್‌ ಏಕಾಂಗಿಯಾಗಿ ಬೃಹತ್‌ ಗಾತ್ರದ ಮೀನನ್ನು ಎಳೆದು ದೋಣಿಗೆ ಹಾಕುತ್ತಿರುವ ದೃಶ್ಯದ ವಿಡಿಯೋ ವೈರಲ್‌ ಆಗಿದ್ದು, ಆಕೆಯ ಕೌಶಲ್ಯ ಹಾಗೂ ಶ್ರಮದ ಬಗ್ಗೆ ಜನ ಮೆಚ್ಚುಗೆಯ ಜೊತೆ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. 

ಮೀನಿನ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಡಲಾಮೆಯ ರಕ್ಷಿಸಿದ ಕಸ್ಟಮ್ಸ್ ತಂಡ

ಹಾಗಂತ ಸಿಕಾಲೆಗೆ ಮೀನುಗಾರಿಕೆಯಲ್ಲಿ ಬಹಳ ದೀರ್ಘಕಾಲದ ಅನುಭವ ಇಲ್ಲ. 2015 ರಿಂದ ಅವರು ಟ್ಯೂನ ಮೀನನ್ನು ಹಿಡಿಯಲು ಪ್ರಾರಂಭಿಸಿದರು ಮತ್ತು 2019 ರಲ್ಲಿ ದೋಣಿ ಖರೀದಿಸಿದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಆದರೆ ಕೆಲವೇ ವರ್ಷಗಳಲ್ಲಿ ದೊಡ್ಡ ದೊಡ್ಡ ಮೀನುಗಳನ್ನು ಹಿಡಿಯುವ ಮೂಲಕ ಅವರು ಮತ್ತಷ್ಟು ಖ್ಯಾತಿ ಗಳಿಸಿದ್ದಾರೆ. 

2021 ರಲ್ಲಿ ಆಕೆ ಮೊದಲ ಬಾರಿ ಒಂಟಿಯಾಗಿ 90 ಇಂಚು ಉದ್ದ 120 ಕೆಜಿ ತೂಕದ ಮೀನನ್ನು ಹಿಡಿದಿದ್ದರು. ಅಲ್ಲದೇ ಕೆಲ ತಿಂಗಳ ಹಿಂದಷ್ಟೇ ಅವರು 643 ಕೆಜಿ ತೂಕದ ಮೆಗಾ ಟ್ಯೂನ ಮೀನನ್ನು ಸೆರೆ ಹಿಡಿದಿದ್ದರು. ಈ ಬಾರಿ 450 ಕೆ.ಜಿ ತೂಕದ ಬ್ಲೂಫಿನ್ ಟ್ಯೂನ ಮೀನು ಹಿಡಿಯುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ಈ ಬಗ್ಗೆ ನ್ಯೂ ಹ್ಯಾಂಪ್‌ಶೈರ್‌ನ ರೇಡಿಯೊದೊಂದಿಗೆ ಮಾತನಾಡಿದ ಸಿಕಾಲೆ, ನಾನು ಪ್ರತಿಯೊಬ್ಬರಿಗೂ ಕೃತಜ್ಞಳಾಗಿದ್ದೇನೆ. ಅವರೆಲ್ಲರೂ ಅತ್ಯಂತ ಗೌರವಾನ್ವಿತರಾಗಿದ್ದಾರೆ. ನಾನು ಈ ಪ್ರದೇಶದ ಏಕೈಕ ಮಹಿಳಾ ಕ್ಯಾಪ್ಟನ್‌. ನನ್ನಂತೆ ಮೀನು ಹಿಡಿಯಲು ಇಷ್ಟಪಡುವ ಯಾವುದೇ ಮಹಿಳಾ ಸಿಬ್ಬಂದಿಯನ್ನು ಹುಡುಕುವುದು ಯಾವಾಗಲೂ ಸುಲಭವಲ್ಲ ಎಂದರು. 

ಸಸ್ಯಹಾರಿಗಳಿಗೊಂದು ಗುಡ್‌ ನ್ಯೂಸ್‌... ಇಲ್ಲಿದೆ ವೆಜಿಟೇರಿಯನ್ ಫಿಶ್

ಕಳೆದ ವರ್ಷ ಯುಕೆಯಲ್ಲಿ ಮೀನುಗಾರರೊಬ್ಬರು ಡೆವೊನ್ (Devon) ಕರಾವಳಿಯಲ್ಲಿ 7 ಅಡಿ ಉದ್ದದ 250 ಕೆಜಿ ತೂಕದ ಶಾರ್ಕ್ ಅನ್ನು ಸೆರೆಹಿಡಿದಿದ್ದರು. ಸೈಮನ್ ಡೇವಿಡ್ಸನ್ (Simon Davidson) ಅವರು ಆ ದೊಡ್ಡ ಮೀನನ್ನು ಹಿಡಿಯಲು ಹರಸಾಹಸವನ್ನೇ ಮಾಡಿದ್ದರು. ಅವರಿಗೆ ಇತರ ಐದು ಸಿಬ್ಬಂದಿ ನೆರವಾಗಿ ಅದನ್ನು ಮೇಲೆತ್ತಲು ಸಹಾಯ ಮಾಡಿದ್ದರು.