ಪೀತೋರಗಢ/ಡೆಹ್ರಾಡೂನ್(ಜು.07)‌: ಭಾರತ ವಿರೋಧಿ ನೀತಿ ಅನುಸರಿಸುತ್ತಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಯತ್ನ ಆರಂಭವಾದ ಬೆನ್ನಲ್ಲೇ, ನೇಪಾಳ ಸರ್ಕಾರ ಗಡಿ ವೀಕ್ಷಣಾ ನೆಲೆಗಳನ್ನು ತೆರವುಗೊಳಿಸಲು ಆರಂಭಿಸಿದೆ.

ಭಾರತದ ಜೊತೆಗಿನ ಗಡಿ ವಿವಾದದ ಹಿನ್ನೆಲೆಯಲ್ಲಿ ಉತ್ತರಾಖಂಡದ ಪಿತೋರ್‌ಗಢ ಜಿಲ್ಲೆಯ ಡ್ರಾಚುಲಾ ಪ್ರದೇಶದ ಗಡಿಯ ಸಮೀಪ ನೇಪಾಳ ಸಶಸ್ತ್ರ ಪೊಲೀಸ್‌ ಪಡೆ ಆರು ಗಡಿ ವೀಕ್ಷಣಾ ನೆಲೆಗಳನ್ನು ಸ್ಥಾಪಿಸಿತ್ತು. ಆದರೆ, ಕೆಲವು ದಿನಗಳ ಹಿಂದೆ ಇವುಗಳ ಪೈಕಿ ಎರಡು ನೆಲೆಗಳನ್ನು ನೇಪಾಳ ಸರ್ಕಾರ ಹಿಂಪಡೆದುಕೊಂಡಿದೆ ಎಂದು ಉತ್ತರಾಖಂಡ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ವಿರೋಧಿ ನೀತಿಯಿಂದಾಗಿ ಓಲಿ ಅವರು ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದು, ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ನೇಪಾಳ ಗಡಿ ಪೋಸ್ಟ್‌ಗಳನ್ನು ತೆರವುಗೊಳಿಸಿದ್ದನ್ನು ಡ್ರಾಚುಲಾ ಉಪ ವಿಭಾಗೀಯ ಮ್ಯಾಜಿಸ್ಪ್ರೇಟ್‌ ಅನಿಲ್‌ ಕುಮಾರ್‌ ಶುಕ್ಲಾ ಮಾಹಿತಿ ನೀಡಿದ್ದಾರೆ. ಅಲ್ಲದೇ ಹೊಸದಾಗಿ ರಚಿಸಲಾದ ಮೂರು ಗಡಿ ವೀಕ್ಷಣಾ ನೆಲೆಗಳನ್ನು ಶೀಘ್ರದಲ್ಲೇ ತೆರವುಗೊಳಿಸಲು ನೇಪಾಳ ಸರ್ಕಾರ ಉದ್ದೇಶಿಸಿದೆ ಎಂದು ವರದಿಗಳು ತಿಳಿಸಿವೆ.