ಬರ್ಲಿನ್‌(ಏ.26): ಒಮ್ಮೆ ಕೊರೋನಾದಿಂದ ಗುಣಮುಖರಾದವರಿಗೆ ಮತ್ತೊಮ್ಮೆ ಸೋಂಕು ತಗಲುವುದಿಲ್ಲ ಎಂಬ ಯಾವ ಖಾತರಿಯೂ ಇಲ್ಲ. ಹೀಗಾಗಿ ಸೋಂಕಿನಿಂದ ಗುಣಮುಖರಾದವರಿಗೆ ‘ಇಮ್ಯುನಿಟಿ ಪಾಸ್‌ಪೋರ್ಟ್‌’ (ಅಪಾಯ ರಹಿತ ಪ್ರಮಾಣಪತ್ರ) ನೀಡುವುದು ಸೂಕ್ತವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಾಗತಿಕ ಸಮುದಾಯಕ್ಕೆ ಗಂಭೀರ ಎಚ್ಚರಿಕೆ ನೀಡಿದೆ.

‘ಕೊರೋನಾದಿಂದ ಗುಣಮುಖನಾಗಿರುವ ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗಿರುವ ರೋಗನಿರೋಧಕ ಶಕ್ತಿಯು ಮತ್ತೊಮ್ಮೆ ಸೋಂಕು ದೇಹ ಪ್ರವೇಶ ಮಾಡುವುದನ್ನು ತಡೆಯುತ್ತದೆ ಎಂದು ಖಾತರಿಯಾಗಿ ಹೇಳುವುದಕ್ಕೆ ಯಾವುದೇ ಹೆಚ್ಚಿನ ಸಾಕ್ಷ್ಯಗಳು ಇಲ್ಲ. ಹೀಗಿರುವಾಗ ಸೋಂಕಿನಿಂದ ಗುಣಮುಖನಾದ ವ್ಯಕ್ತಿಗೆ ಇಮ್ಯುನಿಟಿ ಪಾಸ್‌ಪೋರ್ಟ್‌ ನೀಡುವುದು ಆತ ಅಪಾಯವನ್ನು ಇನ್ನಷ್ಟುಮೈಮೇಲೆ ಎಳೆದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಕಾರಣ, ಆತ ತಾನು ಸುರಕ್ಷಿತ ಎಂಬ ಕಾರಣಕ್ಕೆ ಆರೋಗ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ನಿರ್ಲಕ್ಷಿಸಬಹುದು. ಹೀಗಾಗಿ ಇಂಥ ಪ್ರಮಾಣ ಪತ್ರ ವಿತರಿಸುವುದು, ಕೊರೋನಾ ಸೋಂಕನ್ನು ಮತ್ತಷ್ಟು ಹಬ್ಬಲು ಕಾರಣ ಮಾಡಿಕೊಡಬಹುದು’ ಎಂದು ಎಚ್ಚರಿಕೆ ನೀಡಿದೆ.

ಮೇ ಅಂತ್ಯಕ್ಕೆ 2.5 ಲಕ್ಷ ಜನಕ್ಕೆ ವೈರಸ್‌?: ಅಮೆರಿಕಗಿಂತ ಭಾರತದಲ್ಲೇ ಸೋಂಕಿನ ವೇಗ ಅಧಿಕ!

ಇದೇ ವೇಳೆ ಕೊರೋನಾದಿಂದ ಗುಣಮುಖರಾದವರ ದೇಹದಲ್ಲಿ ಉತ್ಪತ್ತಿಯಾಗಿರುವ ಆ್ಯಂಟಿಬಾಡಿಗಳ ವಿಶ್ವಾಸಾರ್ಹತೆ ಮತ್ತು ಪರಿಪೂರ್ಣತೆ ಬಗ್ಗೆ ಇನ್ನಷ್ಟುಅಧ್ಯಯನ ನಡೆಯಬೇಕಿದೆ ಎಂದೂ ಹೇಳಿದೆ.

ಏನಿದು ಇಮ್ಯುನಿಟಿ ಪಾಸ್‌ಪೋರ್ಟ್‌?

ಕೊರೋನಾದಿಂದ ಗುಣಮುಖರಾದವರು ಕೆಲಸಕ್ಕೆ ಮರಳಲು, ಒಂದೆಡೆಯಿಂದ ಇನ್ನೊಂದೆಡೆಗೆ ತೆರಳಲು ನೀಡಲಾಗುವ ದಾಖಲೆ ಇಮ್ಯುನಿಟಿ ಪಾಸ್‌ಪೋರ್ಟ್‌. ಇದನ್ನು ವಿತರಿಸಲು ಕೆಲವೊಂದು ದೇಶಗಳು ನಿರ್ಧರಿಸಿವೆ.