* ಸೋಂಕು ಹರಡುತ್ತಿರುವ ರೀತಿ ಬಗ್ಗೆ ಆತಂಕಕಾರಿ: ಟೆಡ್ರೋಸ್* ಮಂಕಿಪಾಕ್ಸ್ ಸದ್ಯಕ್ಕೆ ಜಾಗತಿಕ ತುರ್ತುಸ್ಥಿತಿ ಅಲ್ಲ: ಡಬ್ಲ್ಯುಎಚ್‌ಒ
ಸಿಡ್ನಿ(ಜೂ.28): ಜಗತ್ತಿನ 50ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್ ವೈರಸ್ ಸೋಂಕು ಸದ್ಯಕ್ಕೆ ಜಾಗತಿಕ ತುರ್ತುಸ್ಥಿತಿ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ. ಆದರೆ, ಇದು ಹರಡುತ್ತಿರುವ ರೀತಿ ಮತ್ತು ಉಂಟುಮಾಡಬಹುದಾದ ಅಪಾಯದ ಬಗ್ಗೆ ತೀವ್ರ ಆತಂಕವಿದೆ ಎಂದೂ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೋಸ್ ಅಧನೋಮ್ ಘೇಬ್ರಿಯೇಸಸ್, ‘ಮಂಕಿಪಾಕ್ಸ್ ಸೋಂಕನ್ನು ಈಗಲೇ ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸದೆ ಇರಲು ಡಬ್ಲ್ಯುಎಚ್‌ಒ ನಿರ್ಧರಿಸಿದೆ. ಆದರೆ, ಸೋಂಕು ಈಗಾಗಲೇ 50ಕ್ಕೂ ಹೆಚ್ಚು ದೇಶಗಳಿಗೆ ತಲುಪಿದೆ. ಇದು ತೀವ್ರ ಆತಂಕಕಾರಿ ಸಂಗತಿ. ಸೋಂಕಿನ ಬಗ್ಗೆ ಶೋಧಿಸಬೇಕಾದ ಇನ್ನೂ ಸಾಕಷ್ಟುಸಂಗತಿಗಳು ಇವೆ’ ಎಂದು ಹೇಳಿದ್ದಾರೆ.
‘ಮಂಕಿಪಾಕ್ಸ್ ಸೋಂಕಿನ ಬಗ್ಗೆ ಮುಖ್ಯವಾಗಿ ಮೂರು ಸಂಗತಿಗಳನ್ನು ನಾವು ಶೋಧಿಸಬೇಕಾಗಿದೆ. 1.ಈಗಾಗಲೇ 4100 ಜನರಲ್ಲಿ ಪತ್ತೆಯಾಗಿರುವ ಈ ವೈರಸ್ ಹೇಗೆ ರೂಪಾಂತರ ಹೊಂದುತ್ತಿದೆ ಮತ್ತು ಅದರ ಪರಿಣಾಮ ಏನು? 2.ಸೋಂಕು ಹೇಗೆ ಹರಡುತ್ತಿದೆ? ಅದರ ವಿಧಾನ ಬದಲಾಗುತ್ತಿದೆಯೇ? 3.ಎಷ್ಟುದೂರದವರೆಗೆ ಸೋಂಕು ಹರಡಿದೆ? ಕೋವಿಡ್‌ನಿಂದ ಈ ಸೋಂಕಿನ ಮೇಲೆ ಏನಾದರೂ ಪರಿಣಾಮ ಇದೆಯೇ? ಈ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ’ ಎಂದು ಟೆಡ್ರೋಸ್ ಹೇಳಿದ್ದಾರೆ.
