ಜಿನೇವಾ(ಜ.19): ಕೊರೋನಾ ಲಸಿಕೆ ನೀಡುವಾಗ ಬಡ ದೇಶಗಳ ವೃದ್ಧರಿಗೆ ಆದ್ಯತೆ ನೀಡಬೇಕು. ಅದನ್ನು ಬಿಟ್ಟು ಶ್ರೀಮಂತ ದೇಶಗಳ ಯುವಕರು ಹಾಗೂ ಆರೋಗ್ಯವಂತ ವಯಸ್ಕರಿಗೆ ಆದ್ಯತೆ ನೀಡಿ ಲಸಿಕೆ ನೀಡುವುದು ಸರಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಡಬ್ಲುಎಚ್‌ಒ ಮಹಾನಿರ್ದೇಶಕ ಟೆಡ್ರೋಸ್‌ ಅಧಾನೋಂ ಘೆಬ್ರೇಯೆಸಸ್‌ ಸೋಮವಾರ ಜಿನೇವಾದಲ್ಲಿ ಮಾತನಾಡಿ, ‘ಬಡ ದೇಶವೊಂದಕ್ಕೆ 25 ದಶಲಕ್ಷ, 25 ಸಾವಿರ ಅಲ್ಲ.. ಕೇವಲ 25 ಲಸಿಕೆ ಡೋಸ್‌ ಕಳಿಸಲಾಗಿದೆ. ಆದರೆ 50 ಶ್ರೀಮಂತ ದೇಶಗಳಿಗೆ 39 ದಶಲಕ್ಷ ಲಸಿಕೆ ಡೋಸ್‌ಗಳನ್ನು ಪೂರೈಸಲಾಗಿದೆ’ ಎಂದರು. ಆದರೆ 25 ಡೋಸ್‌ ಸಿಕ್ಕ ದೇಶದ ಹೆಸರು ಹೇಳಲಿಲ್ಲ.

ಈ ರೀತಿ ಆಗಬಾರದು. ಶ್ರೀಮಂತ ದೇಶಗಳ ಯುವಕರಿಗಿಂತ ಬಡ ದೇಶಗಳ ವೃದ್ಧರಿಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.