ಚೀನಾಗೆ ಡಬ್ಲ್ಯುಎಚ್‌ಒ ಕ್ಲೀನ್‌ಚಿಟ್‌?| ಪ್ರಾಣಿಯಿಂದ ಮನುಷ್ಯರಿಗೆ ಕೊರೋನಾ ಬಂದಿರಬಹುದು| ಡಬ್ಲ್ಯುಎಚ್‌ಒ-ಚೀನಾ ತಂಡದ ಹೊಸ ‘ಶೋಧ’| ಜಂಟಿ ಕರಡು ವರದಿಯಲ್ಲಿನ ಅಂಶ ಬಹಿರಂಗ| ಅಂತಿಮ ವರದಿ ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ

ಬೀಜಿಂಗ್(ಮಾ.30)‌: ವುಹಾನ್‌ನ ಮಾರುಕಟ್ಟೆಯಿಂದ ಕೊರೋನಾ ವೈರಸ್‌ ಹರಡಿದೆ ಅಥವಾ ತನ್ನದೇ ಪ್ರಯೋಗಾಲಯದಿಂದ ಈ ವೈರಸ್‌ ಸೋರಿಕೆಯಾಗಿದೆ ಎಂಬ ಆರೋಪಗಳನ್ನು ಮುಚ್ಚಿಹಾಕಲು ಶತಪ್ರಯತ್ನ ನಡೆಸುತ್ತಿರುವ ಚೀನಾ ಇದೀಗ ವಿಶ್ವ ಆರೋಗ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಜೊತೆಗೂಡಿ ಇನ್ನೊಂದು ಹೊಸ ಶೋಧನಾ ವರದಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಆ ವರದಿಯಲ್ಲಿ ‘ಕೊರೋನಾ ವೈರಸ್‌ ಬಾವಲಿಯಿಂದ ಯಾವುದೋ ಪ್ರಾಣಿಗೆ ಹರಡಿ ನಂತರ ಮನುಷ್ಯರಿಗೆ ಬಂದಿರಬಹುದು’ ಎಂಬ ಅಂಶವಿದೆ.

ಈ ಮೂಲಕ, ಡಬ್ಲ್ಯುಎಚ್‌ಒ ಅನ್ನು ಬಳಸಿಕೊಂಡು ಚೀನಾ ತನಗೆ ತಾನೇ ಕ್ಲೀನ್‌ಚಿಟ್‌ ತೆಗೆದುಕೊಳ್ಳಲು ಸಜ್ಜಾಗಿದೆ ಎಂಬ ಗುಮಾನಿ ಸೃಷ್ಟಿಯಾಗಿದೆ.

ಕೆಲ ತಿಂಗಳ ಹಿಂದೆ ಡಬ್ಲ್ಯುಎಚ್‌ಒ ವಿಜ್ಞಾನಿಗಳ ತಂಡವೊಂದು ಚೀನಾಕ್ಕೆ ತೆರಳಿ ಅಲ್ಲಿನ ಸರ್ಕಾರಿ ಪ್ರಯೋಗಾಲಯಗಳ ವಿಜ್ಞಾನಿಗಳ ಜೊತೆಗೆ ಸೇರಿ ಕೊರೋನಾ ವೈರಸ್ಸಿನ ಮೂಲದ ಬಗ್ಗೆ ತನಿಖೆ ನಡೆಸಿತ್ತು. ಆ ಜಂಟಿ ವರದಿಯೀಗ ಬಹುತೇಕ ಸಿದ್ಧವಾಗಿದ್ದು, ಅದರಲ್ಲಿ ಬಾವಲಿಗಳಿಂದ ಇನ್ನೊಂದು ಪ್ರಾಣಿಯ ಮೂಲಕ ಮನುಷ್ಯರಿಗೆ ಈ ವೈರಸ್‌ ಹರಡಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಈ ವರದಿ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಬಹುತೇಕ ಅಂತಿಮವಾಗಿದ್ದು, ಇದೇ ರೂಪದಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಉತ್ತರಗಳಿಲ್ಲದ ಹಲವಾರು ಪ್ರಶ್ನೆಗಳಿಗೆ ಈ ವರದಿ ಆಸ್ಪದ ಮಾಡಿಕೊಡುವಂತಿದೆ ಎಂಬ ಟೀಕೆ ಈಗಾಗಲೇ ಕೇಳಿಬಂದಿದೆ.

ವರದಿಯಲ್ಲಿ ವೈರಸ್‌ ಹರಡಿರುವ 3 ಸಾಧ್ಯತೆಗಳನ್ನು ಹೇಳಲಾಗಿದೆ:

1. ಬಾವಲಿಯಿಂದ ಪ್ರಾಣಿಗೆ, ಪ್ರಾಣಿಯಿಂದ ಮನುಷ್ಯರಿಗೆ (ಸಾಧ್ಯತೆ ಹೆಚ್ಚು)

2. ಬಾವಲಿಯಿಂದ ನೇರವಾಗಿ ಮನುಷ್ಯರಿಗೆ (ಸಾಧ್ಯತೆ ಕಡಿಮೆ)

3. ಆಹಾರೋತ್ಪನ್ನಗಳ ಕೋಲ್ಡ್‌ ಚೈನ್‌ನಿಂದ (ಸಾಧ್ಯತೆ ಬಹಳ ಕಡಿಮೆ)

ಕೊರೋನಾ ವೈರಸ್‌ ಚೀನಾದ ವುಹಾನ್‌ನಲ್ಲಿರುವ ಸಮುದ್ರ ಆಹಾರಗಳ ಮಾರುಕಟ್ಟೆಯಿಂದ 2019ರ ಡಿಸೆಂಬರ್‌ನಲ್ಲಿ ಹರಡಲು ಆರಂಭವಾಯಿತು ಎಂದು ಹೇಳಲಾಗಿತ್ತು. ನಂತರ ವುಹಾನ್‌ನಲ್ಲಿರುವ ಪ್ರಯೋಗಾಲಯದಿಂದ ವೈರಸ್‌ ಸೋರಿಕೆಯಾಗಿದೆ ಎಂದೂ ಅನುಮಾನಿಸಲಾಗಿತ್ತು. ಈ ಕುರಿತು ಕೆಲ ತಿಂಗಳ ಹಿಂದೆ ಡಬ್ಲ್ಯುಎಚ್‌ಒ ವಿಜ್ಞಾನಿಗಳ ತಂಡವು ಚೀನಾಕ್ಕೆ ತೆರಳಿ ಪರಿಶೀಲನೆ ನಡೆಸಿತ್ತು. ಆದರೆ, ಚೀನಾದ ಒತ್ತಡದಿಂದಾಗಿ ವರದಿ ಬಿಡುಗಡೆ ಮಾಡಲು ಬೇಕಂತಲೇ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.