ನ್ಯೂಯಾರ್ಕ್(ನ.02): ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ತಾವು ಕೊರೋನಾ ಸೋಂಕಿತನೊಂದಿಗೆ ಸಂಪರ್ಕ ಹೊಂದಿದ್ದೆ ಎಂಬ ವಿಚಾರ ತಿಳಿದ ಬೆನ್ನಲ್ಲೇ ಸ್ವಯಂ ಕ್ವಾರಂಟೈನ್ ಆಗಿದ್ದಾರೆ.

ಈ ಬಗ್ಗೆ ಸ್ವತಃ  ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, 'ಕೋವಿಡ್‍-19  ಸೋಂಕಿತರೊಬ್ಬರೊಂದಿಗೆ ತಾನು ಸಂಪರ್ಕ ಹೊಂದಿರುವುದು ತಿಳಿದು ಬಂದಿದೆ. ರೋಗಲಕ್ಷಣಗಳಿಲ್ಲದೆ ನಾನು ಆರೋಗ್ಯವಾಗಿದ್ದೇನೆ. ಆದರೂ, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಅನ್ವಯ ಕೆಲ ದಿನಗಳ ಕಾಲ ಸ್ವಯಂ-ಐಸೋಲೇಷನ್‌ನಲ್ಲಿದ್ದು, ಮನೆಯಿಂದಲೇ ಕಾರ್ಯನಿರ್ವಹಿಸುತ್ತೇನೆ' ಎಂದಿದ್ದಾರೆ.

ಇನ್ನು ಸೋಂಕು ಹರಡುವಿಕೆ ತಡೆಯಲು ಮತ್ತು ಆರೋಗ್ಯರಕ್ಷಣಾ ವ್ಯವಸ್ಥೆಗಳ ಹೊರೆ ತಪ್ಪಿಸಲು ಸಾಂಕ್ರಾಮಿಕ ರೋಗದ ನಡುವೆ ಆರೋಗ್ಯ ಮಾರ್ಗಸೂಚಿಗಳನ್ನು ಪಾಲಿಸುವುದು ಅತಿಮುಖ್ಯವಾಗಿದ ಎಂದು ಅವರು ಪ್ರತಿಪಾದಿಸಿದ್ದಾರೆ. 

ನಾವೆಲ್ಲರೂ ಆರೋಗ್ಯ ಮಾರ್ಗಸೂಚಿಗಳನ್ನು ಅನುಸರಿಸುವುದು ಅತ್ಯಂತ  ಮುಖ್ಯವಾಗಿದೆ.  ಸೋಂಕಿತರ ಸಂಪರ್ಕ ತಿಳಿದ ಕೂಡಲೇ ಸ್ವಯಂ ನಿರ್ಬಂಧ ಹೇರಿಕೊಂಡರೆ ನಾವು ಕೋವಿಡ್ ಸೋಂಕಿನ ಪ್ರಸರಣದ ಸರಪಳಿಯನ್ನು ಮುರಿಯಬಹುದು. ಆ ಮೂಲಕ ವೈರಸ್ ಇತರರಿಗೆ ಸೋಂಕದಂತೆ ನಿಗ್ರಹಿಸಬಹುದು ಹಾಗೂ ಅಲ್ಲದೆ ಆರೋಗ್ಯ ವ್ಯವಸ್ಥೆಗಳನ್ನು ರಕ್ಷಿಸಬಹುದು ಎಂದೂ ತಿಳಿಸಿದ್ದಾರೆ.