*ಮಲ್ಯ, ನೀರವ್‌ ಗಡೀಪಾರಿಗೆ ಸಹಕಾರ: ಜಾನ್ಸನ್‌*ಶಿಕ್ಷೆಯಿಂದ ಪಾರಾಗಲು ಯತ್ನಿಸುವವರನ್ನು ನಾವು ಸ್ವಾಗತಿಸಲ್ಲ*ಆದರೆ ಗಡೀಪಾರಿಗೆ ಕೆಲವು ಕಾನೂನು ಪ್ರಕ್ರಿಯೆ ಇವೆ*ಮೋದಿ ಜತೆ ಚರ್ಚೆ ಬಳಿಕ ಬ್ರಿಟನ್‌ ಪ್ರಧಾನಿ ಹೇಳಿಕೆ

ನವದೆಹಲಿ (ಏ. 23): ಭಾರತಕ್ಕೆ ಸಾವಿರಾರು ಕೋಟಿ ರುಪಾಯಿ ವಂಚನೆ ಮಾಡಿದ ಬಳಿಕ ಪರಾರಿಯಾಗಿ ಬ್ರಿಟನ್‌ನಲ್ಲಿ ನೆಲೆಸಿರುವ ಉದ್ಯಮಿಗಳಾದ ವಿಜಯ್‌ ಮಲ್ಯ ಮತ್ತು ನೀರವ್‌ ಮೋದಿ ಗಡೀಪಾರಿನ ಬಗ್ಗೆ ಬ್ರಿಟನ್‌ ಪ್ರಧಾನಿ ಬೊರಿಸ್‌ ಜಾನ್ಸನ್‌ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಇವರನ್ನು ಭಾರತಕ್ಕೆ ಒಪ್ಪಿಸಲು ತಾವು ಸಿದ್ಧ ಎಂದು ಹೇಳಿದ್ದಾರೆ. ಭಾರತಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಿರುವ ಬೋರಿಸ್‌ ಜಾನ್ಸನ್‌ ಶುಕ್ರವಾರ ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗಿನ ದ್ವಿಪಕ್ಷೀಯ ಸಭೆ ನಡೆಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮಗೂ ಅವರನ್ನು (ನೀರವ್‌/ಮಲ್ಯ) ಭಾರತಕ್ಕೆ ಒಪ್ಪಿಸುವ ಮನಸ್ಸಿದೆ. ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಮ್ಮ ಕಾನೂನು ವ್ಯವಸ್ಥೆಯನ್ನು ಬಳಸುವ ಜನರನ್ನು ನಾವು ಸ್ವಾಗತಿಸುವುದಿಲ್ಲ. ಆದರೆ ಗಡೀಪಾರಿನ ಕುರಿತು ಹಲವು ಕಾನೂನಾತ್ಮಕ ಪ್ರಕ್ರಿಯೆಗಳಿವೆ’ ಎಂದರು. ಈ ಮೂಲಕ ಕಾನೂನಿನ ತೊಡಕು ನಿವಾರಣೆಯಾದರೆ ಖಂಡಿತವಾಗಿ ಮಲ್ಯ ಹಾಗೂ ನೀರವ್‌ರನ್ನು ಗಡೀಪಾರು ಮಾಡುವ ಇಂಗಿತ ವ್ಯಕ್ತಪಡಿಸಿದರು.

ಇದನ್ನೂ ಓದಿ:ಭಾರತ-ಬ್ರಿಟನ್‌ ಸಂಬಂಧ ಮತ್ತಷ್ಟು ಗಟ್ಟಿ: ಮೋದಿ-ಜಾನ್ಸನ್‌ ಮಾತುಕತೆ ಯಶಸ್ವಿ

ಇದೇ ವೇಳೆ ಖಲಿಸ್ತಾನಿ ಉಗ್ರ ಚಟುವಟಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಭಾರತದಲ್ಲಿ ಸಕ್ರಿಯವಾಗಿರುವ ಮತ್ತು ಬೇರೆ ದೇಶಗಳ ವಿರುದ್ಧ ಸಂಚು ರೂಪಿಸುವ ಉಗ್ರವಾದಿಗಳ ಗುಂಪುಗಳನ್ನು ಸಹಿಸುವುದಿಲ್ಲ. ಅಂಥವರು ಬ್ರಿಟನ್‌ ನೆಲವನ್ನು ಬಳಸಿಕೊಂಡು ಇನ್ನೊಂದು ದೇಶದ ವಿರುದ್ಧ ಸಂಚು ರೂಪಿಸಲು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

ಉಕ್ರೇನ್‌-ರಷ್ಯಾ ಯುದ್ಧದ ವಿಷಯದಲ್ಲಿ ಭಾರತದ ನಿಲುವಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಭಾರತ ಉಕ್ರೇನಿನ ಬುಚಾದಲ್ಲಿ ನಡೆದ ನರಮೇಧವನ್ನು ತೀವ್ರವಾಗಿ ಖಂಡಿಸಿದೆ. ಭಾರತ ರಷ್ಯಾದೊಂದಿಗೆ ಐತಿಹಾಸಿಕ ದ್ವಿಪಕ್ಷೀಯ ಸಂಬಂಧ ಹೊಂದಿದೆ. ನಾವು ಅದನ್ನು ಗೌರವಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಬ್ರಿಟನ್‌ ಪ್ರಧಾನಿ, ರಿಷಿ ಸುನಾಕ್‌ ಪ್ರೀತಿ ಪಟೇಲ್‌ಗೆ ರಷ್ಯಾ ನಿರ್ಬಂಧ: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, ಭಾರತೀಯ ಮೂಲದ ಬ್ರಿಟನ್‌ ಸಚಿವ ರಿಷಿ ಸುನಾಕ್‌, ಪ್ರೀತಿ ಪಟೇಲ್‌ ಸೇರಿದಂತೆ ಹಲವು ಸಚಿವರಿಗೆ ರಾಜಕಾರಣಿಗಳಿಗೆ ರಷ್ಯಾ ನಿರ್ಬಂಧ ಹೇರಿದೆ. ಉಕ್ರೇನ್‌ನ ಮೇಲಿನ ದಾಳಿಯ ನಂತರ ರಷ್ಯಾದ ಮೇಲೆ ಆರ್ಥಿಕ ನಿರ್ಬಂಧ ವಿಧಿಸಿದ್ದ ಬ್ರಿಟನ್‌ ಕ್ರಿಯೆಗೆ ಪ್ರತಿಯಾಗಿ ನಿರ್ಬಂಧ ವಿಧಿಸಲಾಗಿದೆ ಎಂದು ರಷ್ಯಾ ವಿದೇಶಾಂಗ ಸಚಿವ ತಿಳಿಸಿದ್ದಾರೆ. ರಷ್ಯಾ ನಿರ್ಬಂಧ ವಿಧಿಸಿರುವ 13 ಬ್ರಿಟಿಷ್‌ ರಾಜಕಾರಣಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿRussia- Ukraine War: ಉಕ್ರೇನ್‌ ಪ್ರಮುಖ ನಗರ ರಷ್ಯಾ ಕೈವಶ!

ರಷ್ಯಾವನ್ನು ಅಂತಾರಾಷ್ಟ್ರೀಯವಾಗಿ ಪ್ರತ್ಯೇಕಿಸಲು ಬ್ರಿಟನ್‌ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ. ಉದ್ದೇಶ ಪೂರ್ವಕವಾಗಿ ಉಕ್ರೇನ್‌ ಸುತ್ತಲಿನ ಪರಿಸ್ಥಿತಿಯನ್ನು ಬ್ರಿಟನ್‌ ಉಲ್ಬಣಗೊಳಿಸುತ್ತಿದೆ. ಕೀವ್‌ಗೆ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ. ನ್ಯಾಟೋ ಜತೆ ಸೇರಿ ಇದೇ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ರಷ್ಯಾ ಆರೋಪಿಸಿದೆ.