ಸಾವ್‌ ಪಾಲೋ (ಅ.23): ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಬಹುನಿರೀಕ್ಷಿತ ಕೊರೋನಾ ಲಸಿಕೆಯಾದ ಆಸ್ಟ್ರಾಜೆನೆಕಾದ 3ನೇ ಹಂತದ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸ್ವಯಂಸೇವಕನೊಬ್ಬ ಬ್ರೆಜಿಲ್‌ನಲ್ಲಿ ಮೃತಪಟ್ಟಿದ್ದಾನೆ. ಅದರೊಂದಿಗೆ ಜಗತ್ತಿನಾದ್ಯಂತ ಅಂತಿಮ ಹಂತದ ಪರೀಕ್ಷೆಯಲ್ಲಿರುವ ಲಸಿಕೆಯ ಭವಿಷ್ಯದ ಬಗ್ಗೆ ಆತಂಕ ಮನೆಮಾಡಿದೆ.

ಆದರೆ, ಲಸಿಕೆಯ ಪರೀಕ್ಷೆ ನಿಲ್ಲುವುದಿಲ್ಲ ಎಂದು ಆಕ್ಸ್‌ಫರ್ಡ್‌ ವಿವಿ, ಆಸ್ಟ್ರಾಜೆನೆಕಾ ಕಂಪನಿ ಹಾಗೂ ಬ್ರೆಜಿಲ್‌ನಲ್ಲಿ ಈ ಪರೀಕ್ಷೆಯ ಉಸ್ತುವಾರಿ ಹೊತ್ತಿರುವ ಸಾವ್‌ ಪಾಲೋದ ಫೆಡರಲ್‌ ಯುನಿವರ್ಸಿಟಿ ಸ್ಪಷ್ಟಪಡಿಸಿವೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಏಕಕಾಲಕ್ಕೆ ಈ ಲಸಿಕೆಯ 3ನೇ ಹಂತದ ಪ್ರಯೋಗ ನಡೆಯುತ್ತಿದ್ದು, ಅದರ ಮೇಲೆ ಯಾವ ಪರಿಣಾಮ ಉಂಟಾಗಲಿದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ಕೊರೋನಾ ಸೋಂಕಿತ ಶವ ಪರೀಕ್ಷೆ : ಹೊರಬಿತ್ತು ಆತಂಕಕಾರಿ ಸಂಗತಿ .

ಬ್ರೆಜಿಲ್‌ನಲ್ಲಿ 10,000 ಸ್ವಯಂ ಸೇವಕರನ್ನು ಆಸ್ಟ್ರಾಜೆನೆಕಾದ 3ನೇ ಹಂತದ ಟ್ರಯಲ್‌ಗೆ ಆಯ್ಕೆ ಮಾಡಲಾಗಿದೆ. ಅವರಲ್ಲಿ 8,000 ಸ್ವಯಂಸೇವಕರಿಗೆ ಮೊದಲ ಡೋಸ್‌ ಹಾಗೂ ಅವರಲ್ಲಿ ಕೆಲವರಿಗೆ 2ನೇ ಡೋಸ್‌ ಕೂಡ ನೀಡಲಾಗಿದೆ. ಈಗ ಮೃತಪಟ್ಟಿರುವ 28 ವರ್ಷದ ಯುವಕ ಕೊರೋನಾದಿಂದಲೇ ಮೃತಪಟ್ಟಿದ್ದು, ಆತ ಆಸ್ಟ್ರಾಜೆನೆಕಾದ ಟ್ರಯಲ್‌ಗೆ ಆಯ್ಕೆಯಾದವರ ಪಟ್ಟಿಯಲ್ಲಿದ್ದರೂ ಕೊರೋನಾ ಲಸಿಕೆ ತೆಗೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ. ಆದ್ದರಿಂದಲೇ ಲಸಿಕೆಯ ಪ್ರಯೋಗವನ್ನು ನಿಲ್ಲಿಸುತ್ತಿಲ್ಲ ಎಂಬ ಮಾತು ಕೇಳಿಬಂದಿದೆ.