ರಷ್ಯಾ-ಉಕ್ರೇನ್ ಸಂಧಾನಕ್ಕೆ ಪುಟಿನ್ ಸಮ್ಮತಿ: ಮೋದಿ ನೇತೃತ್ವದಲ್ಲಿ ಮಾತುಕತೆ?
ರಷ್ಯಾ-ಉಕ್ರೇನ್ ಯುದ್ಧದ ಕುರಿತು ಸಂಧಾನಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಮ್ಮತಿ ಸೂಚಿಸಿದ್ದಾರೆ. ಭಾರತ, ಚೀನಾ ಹಾಗೂ ಬ್ರೆಜಿಲ್‌ಗಳು ಮಧ್ಯಸ್ಥಿಕೆ ವಹಿಸಬೇಕೆಂದು ಅವರು ಬಯಸಿದ್ದಾರೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ರಷ್ಯಾ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಮಾಸ್ಕೋ (ಸೆ.6): ರಷ್ಯಾ-ಉಕ್ರೇನ್ ಯುದ್ಧ ಆರಂಭವಾಗಿ ಎರಡೂವರೆ ವರ್ಷಗಳು ಕಳೆದರೂ ಮಾತುಕತೆ ನಡೆಸಲು ಹಿಂದೇಟು ಹಾಕುತ್ತಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಈಗ ಸಂಧಾನಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಷರತ್ತನ್ನೂ ಒಡ್ಡಿದ್ದಾರೆ. ಅದೇನೆಂದರೆ, ರಷ್ಯಾ-ಉಕ್ರೇನ್ ಸಂಧಾನ ಮಾತುಕತೆಗೆ ಭಾರತ, ಚೀನಾ ಹಾಗೂ ಬ್ರೆಜಿಲ್‌ಗಳು ಮಧ್ಯಸ್ಥಿಕೆ ವಹಿಸಬೇಕು ಎಂದಿದ್ದಾರೆ. ಉಭಯ ದೇಶಗಳ ನಡುವೆ 2022ರ ಫೆಬ್ರವರಿಯಲ್ಲಿ ಯುದ್ಧ ಆರಂಭಕ್ಕೂ ಮುನ್ನು ಇಸ್ತಾಂಬುಲ್‌ನಲ್ಲಿ ಮಾತುಕತೆಯಾಗಿತ್ತು. ಆ ವೇಳೆ ಪ್ರಾಥಮಿಕ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದು ಜಾರಿಗೆ ಬಂದಿರಲಿಲ್ಲ. ಆ ಒಪ್ಪಂದವನ್ನು ಆಧಾರವಾಗಿಟ್ಟುಕೊಂಡು ಮಾತುಕತೆ ನಡೆಯಬೇಕು ಎಂದೂ ಪುಟಿನ್ ಹೇಳಿದ್ದಾರೆ. ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಉಭಯ ದೇಶಗಳಿಗೂ ಶಾಂತಿಮಂತ್ರ ಬೋಧಿಸಿದ್ದರು. ಸಮಸ್ಯೆಗೆ ಮಾತುಕತೆಯೇ ಪರಿಹಾರ. ಯುದ್ಧಭೂಮಿಯಲ್ಲಿ ಶಾಂತಿ ಮಾತುಕತೆ ನಡೆಸಲು ಆಗದು ಎಂದಿದ್ದರು. ಅದರ ಬೆನ್ನಲ್ಲೇ ಪುಟಿನ್ ಅವರಿಂದ ಈ ಇಂಗಿತ ವ್ಯಕ್ತವಾಗಿರುವುದು ಗಮನಾರ್ಹ.
ಮೋದಿ ನೇತೃತ್ವ ಹೊರಲಿ: ಈ ನಡುವೆ, ಪತ್ರಿಕೆಯೊಂದರ ಜತೆ ಮಾತನಾಡಿರುವ ರಷ್ಯಾ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್, ಉಕ್ರೇನ್- ರಷ್ಯಾ ಮಾತುಕತೆಗೆ ಭಾರತ ನೆರವಾಗಬೇಕು. ಮೋದಿ ಹಾಗೂ ಪುಟಿನ್ ನಡುವೆ ಅತ್ಯುತ್ತಮ ರಚನಾತ್ಮಕ ಮತ್ತು ಸ್ನೇಹಪರ ಸಂಬಂಧವಿದೆ. ಹೀಗಾಗಿ ಈ ಬಿಕ್ಕಟ್ಟಿನ ಮಾಹಿತಿ ಪಡೆದು ಮೋದಿ ಅವರು ನೇತತ್ವ ವಹಿಸಬೇಕು. ಪುಟಿನ್, ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಹಾಗೂ ಅಮೆರಿಕ ನಾಯಕರ ಜತೆಗೂ ಅವರು ಮುಕ್ತವಾಗಿ ಮಾತನಾಡಬಲ್ಲವರಾಗಿದ್ದಾರೆ. ಈ ಮಧ್ಯಸ್ಥಿಕೆಯಿಂದ ವಿಶ್ವದ ಆಗುಹೋಗುಗಳಲ್ಲಿ ಭಾಗಿಯಾಗಲು ಭಾರತಕ್ಕೆ ದೊಡ್ಡ ಅವಕಾಶ ಸಿಕ್ಕಂತಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ರಷ್ಯಾದಲ್ಲಿನ್ನೂ ವೃದ್ಧರೇ ಇರೋಲ್ಲ, ಪುಟಿನ್ ಆದೇಶಿಸಿದ್ದೇನು?
ಇದನ್ನೂ ಓದಿ: ಮಾಸ್ಕೋದಲ್ಲಿ ಮೋದಿ: ರಾಜತಾಂತ್ರಿಕತೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಮತೋಲನದ ನಾಜೂಕಿನ ಹಾದಿ