Breaking: ಅಜೆರ್ಬೈಜಾನ್ ವಿಮಾನ ದುರಂತಕ್ಕೆ ರಷ್ಯಾ ಕಾರಣ, ಕ್ಷಮೆ ಕೇಳಿದ ವ್ಲಾಡಿಮಿರ್ ಪುಟಿನ್!
ರಷ್ಯಾದ ವಾಯುಪ್ರದೇಶದಲ್ಲಿ ಅಜೆರ್ಬೈಜಾನ್ ವಿಮಾನ ಪತನದ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಅಜೆರ್ಬೈಜಾನ್ ಅಧ್ಯಕ್ಷರಿಗೆ ಕ್ಷಮೆ ಯಾಚಿಸಿದ್ದಾರೆ. ಆದರೆ, ಈ ಘಟನೆಗೆ ರಷ್ಯಾ ಕಾರಣ ಎಂಬುದನ್ನು ಅವರು ಒಪ್ಪಿಕೊಂಡಿಲ್ಲ. ಉಕ್ರೇನಿಯನ್ ಡ್ರೋನ್‌ಗಳನ್ನು ಹಿಮ್ಮೆಟ್ಟಿಸುವಾಗ ಈ ದುರಂತ ಸಂಭವಿಸಿದೆ ಎಂದು ಹೇಳಿದ್ದಾರೆ.
ನವದೆಹಲಿ (ಡಿ.28): ರಷ್ಯಾದ ವಾಯುಪ್ರದೇಶಕ್ಕೆ ಬಂದಿದ್ದ ಅಜೆರ್ಬೈಜಾನ್ ದೇಶದ ನಾಗರೀಕ ವಿಮಾನವನ್ನು ನೆಲಕ್ಕುರುಳಿಸಿದ ವಿಚಾರದಲ್ಲಿ ಅಜೆರ್ಬೈಜಾನ್ ದೇಶದ ಅಧ್ಯಕ್ಷರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ಷಮೆ ಕೇಳಿದ್ದಾರೆ. ಈ ಘಟನೆಯಲ್ಲಿ ಒಟ್ಟು 38 ಮಂದಿ ಸಾವು ಕಂಡಿದ್ದರು. ಆದರೆ, ಈ ಘಟನೆಗೆ ರಷ್ಯಾಗೆ ಕಾರಣ ಎನ್ನುವ ಮಾತನ್ನು ಅವರು ಒಪ್ಪಿಕೊಂಡಿಲ್ಲ. ಕ್ರಿಸ್‌ಮಸ್ ದಿನದಂದು ಸಂಭವಿಸಿದ ಅಪಘಾತದಲ್ಲಿ ಪುಟಿನ್ ಮಾಡಿದ ಮೊದಲ ಕಾಮೆಂಟ್ ಇದಾಗಿದೆ. ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗಳು ಉಕ್ರೇನಿಯನ್ ಡ್ರೋನ್‌ಗಳನ್ನು ಸಕ್ರಿಯವಾಗಿ ಹಿಮ್ಮೆಟ್ಟಿಸುವಾಗ "ದುರಂತ ಘಟನೆ" ಸಂಭವಿಸಿದೆ ಎಂದು ಪುಟಿನ್ ಹೇಳಿದ್ದಾರೆ. ದಾಳಿಯ ಬಗ್ಗೆ ರಷ್ಯಾ "ತಪ್ಪು ಮಾಹಿತಿ ಹರಡುವುದನ್ನು ನಿಲ್ಲಿಸಬೇಕು" ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮರ್ ಝೆಲೆನ್ಸ್ಕಿ ಹೇಳಿದ್ದಾರೆ.
ವಿಮಾನವು ಚೆಚೆನ್ಯಾದಲ್ಲಿ ಇಳಿಯಲು ಪ್ರಯತ್ನಿಸುತ್ತಿರುವಾಗ ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಗಳಿಂದ ದಾಳಿಗೆ ಒಳಾಗಿದೆ ಎಂದು ವರದಿಯಾಗಿದೆ. ಈ ವಿಮಾನವನ್ನು ಕ್ಯಾಸ್ಪಿಯನ್ ಸಮುದ್ರದ ಮೇಲೆ ತಿರುಗಿಸುವಂತೆ ತಿಳಿಸಲಾಗಿತ್ತು.
ಆದರೆ, ದಾಳಿಗೆ ಒಳಗಾಗಿದ್ದ ವಿಮಾನ, ಕಜಾಕ್‌ಸ್ತಾನದಲ್ಲಿ ಕ್ರ್ಯಾಶ್ ಲ್ಯಾಂಡ್ ಆಗಿತ್ತು. ವಿಮಾನದಲ್ಲಿದ್ದ 67 ಜನರ ಪೈಕಿ 38 ಮಂದಿ ಸಾವು ಕಂಡಿದ್ದರು. ಪುಟಿನ್ ಅವರು ಅಜೆರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ ಎಂದು ಕ್ರೆಮ್ಲಿನ್ ಶನಿವಾರ ಹೇಳಿಕೆಯನ್ನು ಬಿಡುಗಡೆ ಮಾಡಿದೆ. "(ಅಧ್ಯಕ್ಷ) ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ವಾಯುಪ್ರದೇಶದಲ್ಲಿ ಸಂಭವಿಸಿದ ದುರಂತ ಘಟನೆಗೆ ಕ್ಷಮೆಯಾಚಿಸಿದರು ಮತ್ತು ಮತ್ತೊಮ್ಮೆ ಸಂತ್ರಸ್ಥ ಕುಟುಂಬಗಳಿಗೆ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಗಾಯಗೊಂಡವರಿಗೆ ಶೀಘ್ರವಾಗಿ ಚೇತರಿಸಿಕೊಳ್ಳಲು ಹಾರೈಸಿದ್ದಾರೆ" ಎಂದು ಅದು ಹೇಳಿದೆ.
ರಷ್ಯಾದ ಕ್ಷಿಪಣಿ ದಾಳಿಗೆ ಒಳಗಾಗಿಯೇ ವಿಮಾನ ದುರಂತ ಸಂಭವಿಸಿದೆ ಅನ್ನೋದನ್ನ ಕ್ರೆಮ್ಲಿನ್ ಹೇಳಿಕೆಯಲ್ಲಿ ಎಲ್ಲೂ ಒಪ್ಪಿಕೊಂಡಿಲ್ಲ. ಇದಕ್ಕೂ ಮುನ್ನ ಈ ಪ್ರಕರಣದಲ್ಲಿ ರಷ್ಯಾ ಭಾಗಿಯಾಗಿದೆಯೇ ಎನ್ನುವುದನ್ನು ಖಚಿತಪಡಿಸಲು ನಿರಾಕರಿಸಿತ್ತು. ಚೆಚೆನ್ಯಾದ ಮೇಲೆ ಉಕ್ರೇನ್‌ನ ಡ್ರೋನ್ ಸ್ಟ್ರೈಕ್‌ಗಳು ನಿರಂತರವಾಗಿ ಆಗುತ್ತಿರುವ ಕಾರಣ ಈ ಪ್ರದೇಶದಲ್ಲಿ ಪರಿಸ್ಥಿತಿ ತುಂಬಾ ಜಟಿಲವಾಗಿದೆ ಎಂದು ರಷ್ಯಾದ ವಾಯುಯಾನ ಅಧಿಕಾರಿಗಳು ತಿಳಿಸಿದ್ದರು.
ಅಜೆರ್ಬೈಜಾನ್‌ನಲ್ಲಿನ ವಾಯುಯಾನ ತಜ್ಞರು ಮತ್ತು ಇತರರು ಎಲೆಕ್ಟ್ರಾನಿಕ್ ಜ್ಯಾಮಿಂಗ್‌ನಿಂದ ವಿಮಾನದ ಜಿಪಿಎಸ್ ವ್ಯವಸ್ಥೆಗಳು ಪ್ರಭಾವಿತವಾಗಿವೆ ಮತ್ತು ರಷ್ಯಾದ ವಾಯು ರಕ್ಷಣಾ ಕ್ಷಿಪಣಿ ಸ್ಫೋಟಗಳಿಂದ ಆದ ಶಾರ್ಪ್‌ನೆಲ್‌ಗಳಿಂದ ಹಾನಿಗೆ ಒಳಗಾಗಿದೆ ಎಂದು ತಿಳಿಸಿದೆ.
Azerbaijan Airlines Plane Crash: ಪ್ರಯಾಣಿಕರ ಕೊನೇ ಕ್ಷಣದ ವಿಡಿಯೋ ವೈರಲ್!
ಇನ್ನು ವಿಮಾನ ದುರಂತದಲ್ಲಿ ಬದುಕುಳಿದ ವ್ಯಕ್ತಿಗಳು, ಕ್ರ್ಯಾಶ್‌ಲ್ಯಾಂಡ್ ಆಗುವ ಮುನ್ನ ದೊಡ್ಡ ಶಬ್ದವನ್ನು ಕೇಳಿದ್ದಾಗಿ ತಿಳಿಸಿದ್ದಾರೆ. ಅಂದಿನಿಂದಲೇ ವಿಮಾನದ ಮೇಲೆ ಕ್ಷಿಪಣಿ ದಾಳಿ ಆಗಿರಬಹುದು ಎಂದು ಅಂದಾಜಿಸಲಾಗಿತ್ತು.
ಅಜರ್‌ಬೈಜಾನ್ ವಿಮಾನ ದುರಂತ; ಲ್ಯಾಂಡ್‌ಲಾಕ್ ದೇಶದ ಬಗ್ಗೆ ಇಲ್ಲಿದೆ ಮಾಹಿತಿ!
ಅಜೆರ್ಬೈಜಾನ್ ಈ ವಾರ ರಷ್ಯಾವನ್ನು ಅಧಿಕೃತವಾಗಿ ಆರೋಪ ಮಾಡಿಲ್ಲ, ಆದರೆ ದೇಶದ ಸಾರಿಗೆ ಸಚಿವರು ವಿಮಾನವು "ಬಾಹ್ಯ ಹಸ್ತಕ್ಷೇಪಕ್ಕೆ" ಒಳಪಟ್ಟಿದೆ ಮತ್ತು ಇಳಿಯಲು ಪ್ರಯತ್ನಿಸಿದಾಗ ಒಳಗೆ ಮತ್ತು ಹೊರಗೆ ಹಾನಿಯಾಗಿದೆ ಎಂದು ಹೇಳಿದರು. ಶುಕ್ರವಾರದಂದು ಯುಎಸ್ ರಕ್ಷಣಾ ಅಧಿಕಾರಿಗಳು, ವಿಮಾನ ದುರಂತಕ್ಕೆ ರಷ್ಯಾವೇ ಕಾರಣ ಎಂದು ಹೇಳಿದ್ದಾರೆ.
ಶನಿವಾರದ ಫೋನ್ ಕರೆಯಲ್ಲಿ, ಅಜೆರ್ಬೈಜಾನ್ ಏರ್ಲೈನ್ಸ್ ವಿಮಾನವು ಡಿಸೆಂಬರ್ 25 ರಂದು ಚೆಚೆನ್ಯಾದ ಗ್ರೋಜ್ನಿ ವಿಮಾನ ನಿಲ್ದಾಣದಲ್ಲಿ ಪದೇ ಪದೇ ಇಳಿಯಲು ಪ್ರಯತ್ನಿಸಿದೆ ಎಂದು ಪುಟಿನ್ ಒಪ್ಪಿಕೊಂಡಿದ್ದರು.