ಲಂಡನ್‌(ಮೇ.19): ಸಾವಿರಾರು ಕೋಟಿ ರು. ಸಾಲ ಮರುಪಾವತಿ ಮಾಡದೆ ವಂಚನೆ ಎಸಗಿ ಪರಾರಿಯಾಗಿರುವ ಪ್ರಕರಣದಲ್ಲಿ ಬ್ರಿಟನ್ನಿನಿಂದ ಭಾರತಕ್ಕೆ ಗಡೀಪಾರಾಗುವುದನ್ನು ತಪ್ಪಿಸಿಕೊಳ್ಳಲು ‘ಮದ್ಯದ ದೊರೆ’ ವಿಜಯ್‌ ಮಲ್ಯಗೆ ಇನ್ನೊಂದು ಅಡ್ಡದಾರಿಯಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಅದು- ಬ್ರಿಟನ್‌ ಸರ್ಕಾರದಿಂದ ಅಧಿಕೃತವಾಗಿ ಆಶ್ರಯ ಕೋರುವುದು.

ವಿಶೇಷ ಅರ್ಥಿಕ ಪ್ಯಾಕೇಜ್ ಘೋಷಣೆ ಬೆನ್ನಲ್ಲೇ ಕೇಂದ್ರ ಸರ್ಕಾರಕ್ಕೆ ವಿಜಯ್ ಮಲ್ಯ ಮನವಿ !

ಬ್ರಿಟನ್ನಿನ ಪ್ರಜೆಯೂ ಆಗಿರುವ ಮಲ್ಯರನ್ನು ಭಾರತಕ್ಕೆ ಗಡೀಪಾರು ಮಾಡಬೇಕೆಂದು ಇಲ್ಲಿನ ಕೋರ್ಟ್‌ ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಆಯ್ಕೆಗಳೆಲ್ಲ ಇತ್ತೀಚೆಗಷ್ಟೇ ಮುಕ್ತಾಯವಾಗಿವೆ. ಹೀಗಾಗಿ ಇನ್ನು 28 ದಿನದೊಳಗೆ ಅವರನ್ನು ಗಡೀಪಾರು ಮಾಡಲಾಗುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಮಲ್ಯ ಬ್ರಿಟನ್‌ ಸರ್ಕಾರದ ಆಶ್ರಯ ಕೋರಿ ಅರ್ಜಿ ಸಲ್ಲಿಸಿದ್ದರೆ ಅದು ಇತ್ಯರ್ಥವಾಗುವವರೆಗೂ ಬ್ರಿಟನ್ನಿನ ಕಾನೂನಿನ ಪ್ರಕಾರ ಅವರನ್ನು ಗಡೀಪಾರು ಮಾಡುವಂತಿಲ್ಲ. ಅದಕ್ಕೆ ಎಷ್ಟು ಸಮಯ ಬೇಕಾದರೂ ಹಿಡಿಯಬಹುದು.

ಮಲ್ಯ ಇಂತಹದ್ದೊಂದು ಅರ್ಜಿ ಸಲ್ಲಿಸಿದ್ದರೆ ಅವರಿಗೆ ಆಶ್ರಯ ನೀಡಿ ಆದೇಶ ಹೊರಡಿಸುವವರೆಗೆ ಅಥವಾ ನಿರಾಕರಿಸುವವರೆಗೆ ಅದನ್ನು ಗೌಪ್ಯವಾಗಿರಿಸಲಾಗುತ್ತದೆ. ಹೀಗಾಗಿ ಕೋರ್ಟ್‌ ಆದೇಶದಂತೆ ಮಲ್ಯ ಗಡೀಪಾರಾಗುತ್ತಾರೋ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.

ಬ್ರಿಟನ್ನಿನ ಆಶ್ರಯ ಕೋರಿ ಮಲ್ಯ ಅರ್ಜಿ ಸಲ್ಲಿಸಿದ್ದರೆ ಅದನ್ನು ಭಾರತೀಯ ಮೂಲದ ಗೃಹ ಮಂತ್ರಿ ಪ್ರೀತಿ ಪಟೇಲ್‌ ನಿರ್ಧರಿಸಬೇಕಾಗುತ್ತದೆ. ಸಾಮಾನ್ಯವಾಗಿ ಕೋರ್ಟ್‌ನಿಂದ ಗಡೀಪಾರು ಆದೇಶ ಬಂದ ನಂತರ ಆಶ್ರಯ ಕೋರಿ ಸಲ್ಲಿಸುವ ಅರ್ಜಿಗಳನ್ನು ಅಂಗೀಕರಿಸುವುದಿಲ್ಲ. ಆದರೆ, ಮಲ್ಯ 2-3 ವರ್ಷಗಳ ಹಿಂದೆಯೇ ಆಶ್ರಯ ಕೋರಿ ಅರ್ಜಿ ಸಲ್ಲಿಸಿರಬಹುದು. ಅವರು ಬ್ರಿಟನ್ನಿನ ಆಶ್ರಯ ಕೋರಿ ಅರ್ಜಿ ಸಲ್ಲಿಸಿರುವ ಸಾಧ್ಯತೆಗಳೇ ಹೆಚ್ಚಿವೆ ಎಂದು ಪ್ರಸಿದ್ಧ ವಕೀಲರು ತಿಳಿಸಿದ್ದಾರೆ.

ಭೂಗತ ಪಾತಕಿ ದಾವೂದ್‌ ಇಬ್ರಾಹಿಂನ ಬಂಟ ಟೈಗರ್‌ ಹನೀಫ್‌ ಇದೇ ರೀತಿಯಲ್ಲಿ ಭಾರತಕ್ಕೆ ಗಡೀಪಾರಾಗುವುದರಿಂದ ತಪ್ಪಿಸಿಕೊಂಡಿದ್ದಾನೆ.