ಲಂಡನ್‌(ಜ.06): ಬ್ರಿಟನ್‌ನಲ್ಲಿ ಇತ್ತೀಚೆಗೆ ಪತ್ತೆಯಾಗಿ ವಿಶ್ವದ ಹಲವು ದೇಶಗಳಿಗೆ ಹೈಸ್ಪೀಡ್‌ ವೈರಸ್‌ ಹಬ್ಬಿದ ಬೆನ್ನಲ್ಲೇ, ದಕ್ಷಿಣ ಆಫ್ರಿಕಾದಲ್ಲಿ ಕೆಲ ವಾರಗಳ ಹಿಂದೆ ಪತ್ತೆಯಾಗಿ ತೀವ್ರ ವೇಗದಲ್ಲಿ ಹರಡುತ್ತಿರುವ ರೂಪಾಂತರಿ ಕೊರೋನಾ ವೈರಸ್‌ ವಿರುದ್ಧ ಈಗಿನ ಲಸಿಕೆಗಳು ಕೆಲಸ ಮಾಡುವುದು ಅನುಮಾನ ಎಂಬ ಆತಂಕ ವ್ಯಕ್ತವಾಗಿದೆ. ಬ್ರಿಟನ್‌ ಸರ್ಕಾರದ ವೈಜ್ಞಾನಿಕ ಸಲಹೆಗಾರರಲ್ಲಿ ಒಬ್ಬರು ಈ ಅನುಮಾನ ವ್ಯಕ್ತಪಡಿಸಿದ್ದಾರೆ.

ಬ್ರಿಟನ್ನಿನಲ್ಲಿ ಪತ್ತೆಯಾಗಿರುವ ರೂಪಾಂತರಿ ಕೊರೋನಾ ವಿರುದ್ಧ ಈಗಿನ ಲಸಿಕೆಗಳು ಕೆಲಸ ಮಾಡುತ್ತವೆ ಎಂದು ವಿಜ್ಞಾನಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ, ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಹೊಸ ವೈರಸ್‌ ವಿರುದ್ಧ ಈ ಲಸಿಕೆಗಳು ಕೆಲಸ ಮಾಡುತ್ತವೆಯೋ ಇಲ್ಲವೋ ಎಂಬುದನ್ನು ಹೇಳಲಾಗದು ಎಂದು ಹೇಳಿದ್ದಾರೆ. ಬ್ರಿಟನ್‌ನ ಆರೋಗ್ಯ ಸಚಿವ ಮ್ಯಾಟ್‌ ಹ್ಯಾಂಕಾಕ್‌ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ‘ನನಗೆ ದಕ್ಷಿಣ ಆಫ್ರಿಕಾ ವೈರಸ್‌ನದೇ ದೊಡ್ಡ ಹೆದರಿಕೆ’ ಎಂದು ಹೇಳಿದ್ದಾರೆ.

ಈ ನಡುವೆ ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಕೂಡ ತಮ್ಮ ದೇಶದಲ್ಲಿ ಪತ್ತೆಯಾಗಿರುವ ರೂಪಾಂತರಿ ವೈರಸ್‌ನ ಮೇಲೆ ಲಸಿಕೆಯ ಪರಿಣಾಮಗಳ ಅಧ್ಯಯನಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಅವರು ಈಗಾಗಲೇ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿರುವ ವ್ಯಕ್ತಿಗಳ ರಕ್ತ ಮತ್ತು ಲಸಿಕೆ ಪಡೆದಿರುವ ವ್ಯಕ್ತಿಗಳ ರಕ್ತವನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡುವ ಮೂಲಕ ಹೊಸ ವೈರಸ್‌ ಮೇಲೆ ಲಸಿಕೆಯ ಪರಿಣಾಮ ಅಧ್ಯಯನ ನಡೆಸುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಪ್ರತಿಕ್ರಿಯೆ ನೀಡಿರುವ ಅಮೆರಿಕದ ಫೈಝರ್‌ ಲಸಿಕೆಯ ರೂವಾರಿಯೂ ಆಗಿರುವ ಬಯೋಎನ್‌ಟೆಕ್‌ ಕಂಪನಿಯ ಸಿಇಒ ಉಗುರ್‌ ಸಹಿನ್‌ ಮತ್ತು ಆಕ್ಸ್‌ಫರ್ಡ್‌ ಲಸಿಕೆಯ ಸಲಹೆಗಾರ ಜಾನ್‌ ಬೆಲ್‌ ಅವರು, ‘ನಮ್ಮ ಲಸಿಕೆಗಳನ್ನು ಹೊಸ ರೂಪಾಂತರಿ ವೈರಸ್‌ಗಳ ವಿರುದ್ಧ ಪರೀಕ್ಷೆ ಮಾಡುತ್ತಿದ್ದೇವೆ. ಅಗತ್ಯಬಿದ್ದರೆ ಆರು ವಾರಗಳಲ್ಲಿ ಲಸಿಕೆಯಲ್ಲಿ ಸೂಕ್ತ ಮಾರ್ಪಾಟು ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಲಸಿಕೆಯಲ್ಲಿ ಬದಲಾವಣೆ ಮಾಡಿದರೆ ಅದಕ್ಕೆ ಮತ್ತೊಮ್ಮೆ ವಿವಿಧ ದೇಶಗಳಲ್ಲಿ ಔಷಧ ನಿಯಂತ್ರಕರ ಒಪ್ಪಿಗೆ ಪಡೆಯಬೇಕಾಗುತ್ತದೆ.

ಏನಿದು ಆಫ್ರಿಕಾ ವೈರಸ್‌?

ಕೊರೋನಾ ವೈರಸ್‌ನ ಮತ್ತೊಂದು ಮಾದರಿ. ಬ್ರಿಟನ್‌ನಲ್ಲಿ ಹೊಸ ಮಾದರಿಯ ವೈರಸ್‌ ಪತ್ತೆಯಾದ ಸಂದರ್ಭದಲ್ಲೇ ಆಫ್ರಿಕಾದಲ್ಲೂ ಕೊರೋನಾದ ರೂಪಾಂತರಗೊಂಡ ಹೊಸ ವೈರಾಣು ಗೋಚರವಾಗಿತ್ತು. ಇದು ಬ್ರಿಟನ್‌ ವೈರಸ್‌ಗಿಂತ ವೇಗವಾಗಿ ಹಬ್ಬುತ್ತದೆ. ಆಫ್ರಿಕಾದಿಂದ ಬ್ರಿಟನ್‌ಗೆ ಬಂದವರಲ್ಲೂ ಪತ್ತೆಯಾಗಿದೆ.