ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರದಂತೆ ಅಮೆರಿಕ ಅಧಿಕೃತವಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬಂದಿದೆ. ಕೋವಿಡ್ ಸಮಯದಲ್ಲಿ WHO ಚೀನಾ ಪರ ನೀತಿ ಅನುಸರಿಸಿದೆ ಎಂದು ಆರೋಪಿಸಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಮೆರಿಕ ಸಂಸ್ಥೆಗೆ ಪಾವತಿಸಬೇಕಾದ 2,300 ಕೋಟಿ ರೂ. ಬಾಕಿಯನ್ನು ಉಳಿಸಿಕೊಂಡಿದೆ.
ನವದೆಹಲಿ (ಜ.24): ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಅಧಿಕೃತವಾಗಿ ಹೊರಬಂದಿದೆ. ಅಮೆರಿಕದ ಆರೋಗ್ಯ ಇಲಾಖೆ ಇದನ್ನು ಅಧಿಕೃತವಾಗಿ ತಿಳಿಸಿದೆ. ಆ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೀರ್ಘಕಾಲದ ಗುರಿ ಸಾಕಾರವಾದಂತಾಗಿದೆ. ಟ್ರಂಪ್ ಮೊದಲ ಅವಧಿಗೆ ಅಧ್ಯಕ್ಷರಾಗಿದ್ದ ಸಮಯದಲ್ಲೇ WHO ಇಂದ ಹೊರಬರುವ ನಿರ್ಧಾರ ತಿಳಿಸಿದ್ದರು. 2ನೇ ಅವಧಿಯ ಆರಂಭದಲ್ಲಿ ಅದನ್ನ ಕಾರ್ಯರೂಪಕ್ಕೆ ತಂದಿದ್ದರು.
ಆದರೆ, WHO ಅಲ್ಲಿ ಒಂದು ನಿಯಮವಿದೆ. ಯಾವುದೇ ದೇಶ ಹೊರಹೋಗಬೇಕಾದರೂ, ಕನಿಷ್ಠ 1 ವರ್ಷ ನೋಟಿಸ್ ಅವಧಿ ಪೂರೈಸಬೇಕು. ಬಾಕಿ ಉಳಿಸಿಕೊಂಡಿರುವ ಸಾಲವನ್ನು ಪಾವತಿ ಮಾಡಬೇಕು. ಅದರಂತೆ ಕಳೆದ ವರ್ಷದ ಜನವರಿಯಲ್ಲಿ ಟ್ರಂಪ್ ಈ ಆದೇಶವನ್ನು ಜಾರಿ ಮಾಡಿದ್ದರು. ಈ ವರ್ಷ WHO ಇಂದ ನಿರ್ಗಮಿಸಿದೆ. ಇನ್ನು ವಿಶ್ವ ಅರೋಗ್ಯ ಸಂಸ್ಥೆಯಲ್ಲಿ ಅಮೆರಿಕ 2,300 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಅದು ನೀರಿನಲ್ಲಿ ಹೋಮವಾದಂತೆ ಆಗಲಿದೆ. ಅಮೆರಿಕ ಈ ಹಣವನ್ನು ಪಾವತಿ ಮಾಡುವ ಯಾವ ಸಾಧ್ಯತೆಯೂ ಇಲ್ಲ ಎಂದಿದ್ದಾರೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕದಿಂದ ಈ ಹಣವನ್ನು ವಸೂಲಿ ಮಾಡುವ ಯಾವುದೇ ಸಂಪನ್ಮೂಲಗಳೂ ಕೂಡ ಇಲ್ಲ.
ಅಮೆರಿಕ ಹೊರಬರಲು ಕಾರಣವೇನು?
ಕೋವಿಡ್ ಟೈಮ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೀತಿಗಳು ಚೀನಾ ಪರವಾಗಿದ್ದವು. ಇದನ್ನು ಸಾಂಕ್ರಾಮಿಕ ಎಂದು ಘೋಷಣೆ ಮಾಡುವಲ್ಲಿ ತಡ ಮಾಡಿದವು. ಇಡೀ ಸಂಸ್ಥೆಯ ನೀತಿ ಅಮೆರಿಕದ ವಿರುದ್ಧವಾಗಿದೆ ಎಂದು ಟ್ರಂಪ್ ಹೇಳಿದ್ದರು. ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಅತಿದೊಡ್ಡ ಪಾಲುದಾರನಾಗಿದ್ದರೂ, ಈವರೆಗೂ ಸಂಸ್ಥೆಯ ಮಹಾನಿರ್ದೇಶಕರಾಗಿ ಯಾವೊಬ್ಬ ಅಮೆರಿಕನ್ ಪ್ರಜೆ ಕೂಡ ನೇಮಕವಾಗಿಲ್ಲ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದರು.
"ಕಾನೂನಿನ ವಿಷಯದಲ್ಲಿ, ಯುನೈಟೆಡ್ ಸ್ಟೇಟ್ಸ್ ತನ್ನ ಬಾಕಿ ಇರುವ ಹಣಕಾಸಿನ ಬಾಧ್ಯತೆಗಳನ್ನು ಪಾವತಿಸದ ಹೊರತು WHO ನಿಂದ ಅಧಿಕೃತವಾಗಿ ಹಿಂದೆ ಸರಿಯಲು ಸಾಧ್ಯವಿಲ್ಲ ಎಂಬುದು ಬಹಳ ಸ್ಪಷ್ಟವಾಗಿದೆ" ಎಂದು ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಜಾಗತಿಕ ಆರೋಗ್ಯ ಕಾನೂನು ಮತ್ತು ಸಾರ್ವಜನಿಕ ಆರೋಗ್ಯದ ತಜ್ಞ ಡಾ. ಲಾರೆನ್ಸ್ ಗೋಸ್ಟಿನ್ ಹೇಳಿದ್ದಾರೆ. "ಆದರೆ WHO ಗೆ ಅಮೆರಿಕವು ತಾನು ನೀಡಬೇಕಾದದ್ದನ್ನು ಪಾವತಿಸುವಂತೆ ಒತ್ತಾಯಿಸಲು ಯಾವುದೇ ಅಧಿಕಾರವಿಲ್ಲ' ಎಂದೂ ತಿಳಿಸಿದ್ದಾರೆ.
ಅಮೆರಿಕ ಹಣ ಪಾವತಿಸುವವರೆಗೆ ಹಿಂದೆ ಸರಿಯುವಂತಿಲ್ಲ ಎಂದು WHO ನಿರ್ಣಯವನ್ನು ಅಂಗೀಕರಿಸಬಹುದು, ಆದರೆ ಟ್ರಂಪ್ ಹೇಗಾದರೂ ಹಿಂದೆ ಸರಿಯುವ ಸಾಧ್ಯತೆಯಿರುವಾಗ ಅದು ಮತ್ತಷ್ಟು ಉದ್ವಿಗ್ನತೆಯನ್ನು ಸೃಷ್ಟಿಸುವ ಅಪಾಯವಿರಲಿದೆ ಎಂದು ಗೋಸ್ಟಿನ್ ಹೇಳಿದ್ದಾರೆ.
ಗುರುವಾರ, WHO ಗೆ ಅಮೆರಿಕ ಸರ್ಕಾರ ನೀಡುತ್ತಿದ್ದ ಎಲ್ಲಾ ಹಣವನ್ನು ಕೊನೆಗೊಳಿಸಲಾಗಿದೆ ಮತ್ತು ಸಂಸ್ಥೆಗೆ ನಿಯೋಜಿಸಲಾದ ಎಲ್ಲಾ ಸಿಬ್ಬಂದಿ ಮತ್ತು ಗುತ್ತಿಗೆದಾರರನ್ನು ವಾಪಸ್ ಕರೆಸಿಕೊಳ್ಳಲಾಗಿದೆ ಎಂದು HHS ಹೇಳಿದೆ. WHO ಪ್ರಾಯೋಜಿತ ಸಮಿತಿಗಳು, ನಾಯಕತ್ವ ಸಂಸ್ಥೆಗಳು, ಆಡಳಿತ ರಚನೆಗಳು ಮತ್ತು ತಾಂತ್ರಿಕ ಕಾರ್ಯ ಗುಂಪುಗಳಲ್ಲಿ ಅಮೆರಿಕ ಅಧಿಕೃತ ಭಾಗವಹಿಸುವಿಕೆಯನ್ನು ನಿಲ್ಲಿಸಿದೆ ಎಂದು ಅದು ಹೇಳಿದೆ. WHO ಜೊತೆಗಿನ ವಿಚ್ಛೇದನದ ಹೊರತಾಗಿಯೂ, ಅಮೆರಿಕ ಜಾಗತಿಕ ಆರೋಗ್ಯ ನಾಯಕನಾಗಿ ಮುಂದುವರಿಯುತ್ತದೆ ಎಂದು ಟ್ರಂಪ್ ಆಡಳಿತ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಮಾತ್ರವಲ್ಲದೆ ಅಮೆರಿಕ ಭಾಗವಾಗಿರುವ ಅಂದಾಜು 66 ಅಂತಾರಾಷ್ಟ್ರೀಯ ಸಂಘಟನೆಯಿಂದಲೂ ಹೊರಬರುವ ನಿರ್ಧಾರವಾಗಿದೆ. ಇದರಲ್ಲಿ ಭಾರತ ನಾಯಕನಾಗಿರುವ ಅಂತಾರಾಷ್ಟ್ರೀಯ ಸೋಲಾರ್ ಅಲಯನ್ಸ್ ಕೂಡ ಸೇರಿದೆ.

