ಟ್ರಂಪ್ ಎಂಬ ‘ಅಮೆರಿಕ ಫಸ್ಟ್’ ನೀತಿಯ ಪ್ರತಿಪಾದಕ..!
ತಮ್ಮ ಕನಸಿನ ಅಮೆರಿಕಾ ನಿರ್ಮಾಣ ಮಾಡುವ ಗುರಿಯತ್ತ ಮತ್ತಷ್ಟು ದೃಢ ಹೆಜ್ಜೆ ಇಟ್ಟಿರುವುದಾಗಿ ಘೋಷಿಸಿರುವ ಟ್ರಂಪ್, ತಮ್ಮ ಭಾಷಣಗಳಲ್ಲಿ ‘ಅಮೆರಿಕ ಫಸ್ಟ್’ ನೀತಿ ಪ್ರತಿಪಾದಿಸುತ್ತಿದ್ದಾರೆ.
ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಗುಂಡಿನ ದಾಳಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಮತ್ತೊಮ್ಮೆ ದೊಡ್ಡಣ್ಣನಾಗಬೇಕೆಂದು ಹಠಕ್ಕೆ ಬಿದ್ದಿದ್ದ ಟ್ರಂಪ್ಗೆ ಗುಂಡಿನ ದಾಳಿ ಬ್ರಹ್ಮಾಸ್ತ್ರದಂತೆ ಸಿಕ್ಕಿದೆ. ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ಹತ್ಯಾ ಯತ್ನದಿಂದ ವಿಚಲಿತರಾಗದೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಟ್ರಂಪ್, ಈ ದಾಳಿಯನ್ನೇ ಸವಾಲನ್ನಾಗಿ ಸ್ವೀಕರಿಸಿ, ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕೆ ಮತ್ತಷ್ಟು ವೇಗ ತುಂಬಿದ್ದಾರೆ.
ತಮ್ಮ ಕನಸಿನ ಅಮೆರಿಕಾ ನಿರ್ಮಾಣ ಮಾಡುವ ಗುರಿಯತ್ತ ಮತ್ತಷ್ಟು ದೃಢ ಹೆಜ್ಜೆ ಇಟ್ಟಿರುವುದಾಗಿ ಘೋಷಿಸಿರುವ ಟ್ರಂಪ್, ತಮ್ಮ ಭಾಷಣಗಳಲ್ಲಿ ‘ಅಮೆರಿಕ ಫಸ್ಟ್’ ನೀತಿ ಪ್ರತಿಪಾದಿಸುತ್ತಿದ್ದಾರೆ. ಇದರ ಮಧ್ಯೆ, ಒಹಾಯೋ ಸೆನೆಟರ್ ಜೇಮ್ಸ್ ಡೇವಿಡ್ ವ್ಯಾನ್ಸ್ ರನ್ನು ಉಪಾಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಿಸಿರುವ ಮೂಲಕ ಹೊಸ ದಾಳ ಉರುಳಿಸಿದ್ದು, ಎದುರಾಳಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಡೇವಿಡ್ ವ್ಯಾನ್ಸ್ ಆಯ್ಕೆ ಹಿಂದೆಯೂ ಟ್ರಂಪ್ ದೊಡ್ಡ ಮಟ್ಟದ ಲೆಕ್ಕಾಚಾರವೇ ಇದೆ. ಜೇಮ್ಸ್ ವ್ಯಾನ್ಸ್, ಟ್ರಂಪ್ ಅವರ ‘ಅಮೆರಿಕಾ ಫಸ್ಟ್’ ವಿದೇಶಾಂಗ ನೀತಿಯ ಬೆಂಬಲಿಗ. 2016ರ ಅಧ್ಯಕ್ಷೀಯ ಪ್ರಚಾರದಲ್ಲಿ ಟ್ರಂಪ್ ಘೋಷಿಸಿದ್ದ 'ಅಮೆರಿಕಾ ಫಸ್ಟ್' ನೀತಿಯನ್ನು ಬಹಿರಂಗವಾಗಿ ಬೆಂಬಲಿಸಿದ ವ್ಯಾನ್ಸ್, ಇಸ್ರೇಲ್ ಪರ ಒಲವಿರುವ ಅಮೇರಿಕನ್ನರನ್ನು ಸೆಳೆಯುವ ಶಕ್ತಿ ಹೊಂದಿದ್ದಾರೆಂಬ ನಂಬಿಕೆ ಟ್ರಂಪ್ಗೆ ಈ ಪಾಸಿಟಿವ್ ಅಂಶಗಳೇ ವ್ಯಾನ್ಸ್ ಆಯ್ಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ..
ಯಾರೀ ವ್ಯಾನ್ಸ್ : 2022ರಲ್ಲಿ ಮೊದಲ ಬಾರಿಗೆ ಸೆನೆಟ್ ಸ್ಥಾನ ಅಲಂಕರಿಸಿದ 39 ವರ್ಷದ ಜೆ. ಡಿ. ವ್ಯಾನ್ಸ್, ಜನವರಿ 2023ರಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದರು. ಅಮೆರಿಕಾದ ಸೆನೆಟ್‌ನ ಬ್ಯಾಂಕಿಂಗ್, ವಾಣಿಜ್ಯ ಮತ್ತು ಆರ್ಥಿಕ ನೀತಿಗಳ ಮೇಲೆ ಗಮನ ಕೇಂದ್ರೀಕರಿಸುವ ಸಮಿತಿಗಳಲ್ಲಿ ವ್ಯಾನ್ಸ್ ಕೆಲಸ ಮಾಡಿದ್ದಾರೆ. ಸೆನೆಟರ್ ಆಗಿ ಆಯ್ಕೆಯಾಗುವ ಮೊದಲು ಜೆ. ಡಿ. ವ್ಯಾನ್ಸ್ ಅಮೆರಿಕಾದ ಟೆಕ್ ಉದ್ಯಮದಲ್ಲಿ ಹೆಸರು ಮಾಡಿದ್ದರು. ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ವಕೀಲರಾಗಿಯೂ ವ್ಯಾನ್ಸ್ ಖ್ಯಾತರು.
2003ರಲ್ಲಿ ಪ್ರಾರಂಭವಾದ ಯುಎಸ್ ಮೆರೈನ್ ಕಾರ್ಪ್ಸ್‌ನಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ವ್ಯಾನ್ಸ್, ಇರಾಕ್ ಯುದ್ಧದ ಸಮಯದಲ್ಲಿ ಸಾರ್ವಜನಿಕ ವ್ಯವಹಾರಗಳಲ್ಲಿ ಕೆಲಸ ಮಾಡಿದ್ದರು.
ಅಮೆರಿಕಾದ ವಿದೇಶಾಂಗ ನೀತಿಯ ಕಟು ಟೀಕಾಕಾರರಾದ ವ್ಯಾನ್ಸ್, 2003ರ ಇರಾಕ್ ಆಕ್ರಮಣ ಐತಿಹಾಸಿಕ ತಪ್ಪು ನಿರ್ಧಾರ ಎಂದು ವ್ಯಾಖ್ಯಾನಿಸಿದ್ರು. ಇರಾಕ್ ಮೇಲೆ ಆಕ್ರಮಣ ಮಾಡುವ ಮೂಲಕ ಮಧ್ಯ ಪ್ರಾಚ್ಯದಲ್ಲಿ ಇರಾನ್‌ಗೆ ಹೊಸ ಮಿತ್ರನನ್ನು ನಾವೇ ಸೃಷ್ಟಿಸಿ ಕೊಟ್ಟಿದ್ದೇವೆ ಎಂದು ವ್ಯಾನ್ಸ್ ಪ್ರತಿಪಾದಿಸಿದ್ದರು. ಕಳೆದ ಏಪ್ರಿಲ್ ಅಂತ್ಯದಲ್ಲಿ ಉಕ್ರೇನ್‌ಗೆ 61 ಶತಕೋಟಿ ಅಮೇರಿಕನ್ ಡಾಲರ್ ಮಿಲಿಟರಿ ನೆರವು ಒದಗಿಸುವ ನಿರ್ಣಯ ಬೆಂಬಲಿಸುವ ಸೆನೆಟರ್‌ಗಳ ನಿರ್ಧಾರ ಟೀಕಿಸಿದ್ದ ವ್ಯಾನ್ಸ್, ಇರಾಕ್ ಯುದ್ಧದಿಂದ ಅಮೇರಿಕಾ ಪಾಠ ಕಲಿತಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಕಿಡಿಕಾರಿದ್ದರು. ಈ ಎಲ್ಲ ರಾಜಕೀಯ ನೀತಿಗಳನ್ನೇ ಮುಂದಿಟ್ಟುಕೊಂಡು, ವ್ಯಾನ್ಸ್ರನ್ನು ಉಪಾಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆಂಬುದು ಅಮೆರಿಕ ರಾಜಕೀಯ ವ್ಯಾಖ್ಯಾನಕಾರರ ಅಭಿಪ್ರಾಯ.