* ಐಸಿಸ್‌-ಕ ಉಗ್ರರನ್ನು ಗುರಿಯಾಗಿಸಿಕೊಂಡು ನಡೆಸಿದ ಡ್ರೋನ್‌ ದಾಳಿ * ಡ್ರೋನ್‌ ದಾಳಿ ಗುರಿತಪ್ಪಿ ನಾಗರಿಕರು ಸಾವು* ನಮ್ಮಿಂದ ತಪ್ಪು ನಡೆದಿದ್ದು, ಇದಕ್ಕಾಗಿ ಕ್ಷಮೆ ಕೇಳುತ್ತೇವೆ ಎಂದ ಅಮೆರಿಕ 

ವಾಷಿಂಗ್ಟನ್‌(ಸೆ.19): ಕಳೆದ ತಿಂಗಳು ಕಾಬೂಲ್‌ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದ ಐಸಿಸ್‌-ಕ ಉಗ್ರರನ್ನು ಗುರಿಯಾಗಿಸಿಕೊಂಡು ನಡೆಸಿದ ಡ್ರೋನ್‌ ದಾಳಿ ಗುರಿತಪ್ಪಿ ನಾಗರಿಕರು ಸಾವಿಗೀಡಾಗಿದ್ದನ್ನು ಅಮೆರಿಕ ಒಪ್ಪಿಕೊಂಡಿದೆ. ಅಲ್ಲದೇ ನಮ್ಮಿಂದ ತಪ್ಪು ನಡೆದಿದ್ದು, ಇದಕ್ಕಾಗಿ ಕ್ಷಮೆ ಕೇಳುತ್ತೇವೆ ಎಂದು ಅಮೆರಿಕದ ಉನ್ನತ ಮಿಲಿಟರಿ ಕಮಾಂಡರ್‌ವೊಬ್ಬರು ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರರೊಂದಿಗೆ ಮಾತನಾಡಿದ ಅಮೆರಿಕ ಕೇಂದ್ರೀಯ ಪಡೆಯ ಕಮಾಂಡರ್‌ ಜನರಲ್‌ ಫ್ರಾಂಕ್‌ ಮೆಕೆಂಜಿ, ‘ಆ.29ರಂದು ನಡೆದ ಡ್ರೋನ್‌ ದಾಳಿಯ ತನಿಖಾ ವರದಿ ಸಲ್ಲಿಕೆಯಾಗಿದ್ದು, ಡ್ರೋನ್‌ ದಾಳಿ ನಡೆಸಿದ ವಾಹನ ಮತ್ತು ಮತ್ತು ಘಟನೆಯಲ್ಲಿ ಸಾವನ್ನಪ್ಪಿದವರು ಐಸಿಸ್‌-ಕೆ ಸಂಬಂಧಿಸಿದವರಲ್ಲ. ವಿಮಾನ ನಿಲ್ದಾಣದ ಮೇಲೆ ಇನ್ನೊಂದು ದಾಳಿ ನಡೆಯುವ ಬಗ್ಗೆ ಗುಪ್ತಚರ ಇಲಾಖೆಯ ಖಚಿತ ಮಾಹಿತಿಯನ್ನು ಆಧರಿಸಿ ಡ್ರೋನ್‌ ದಾಳಿಯನ್ನು ನಡೆಸಲಾಗಿತ್ತು.

ಆದರೆ, ದುರದೃಷ್ಟವಶಾತ್‌ 7 ಮಕ್ಕಳು ಸೇರಿದಂತೆ 10 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ. ಇದೊಂದು ಪ್ರಮಾದ. ಓರ್ವ ಕಮಾಂಡರ್‌ ಆಗಿ ಈ ತಪ್ಪಿಗೆ ನಾನು ಕ್ಷಮಾಪಣೆ ಕೇಳುತ್ತೇನೆ. ಈ ದಾಳಿಯ ಸಂಪೂರ್ಣ ಹೊಣೆಯನ್ನು ನಾನೇ ಹೊರುತ್ತೇನೆ’ ಎಂದು ಹೇಳಿದ್ದಾರೆ.