ಪಾಕಿಸ್ತಾನಕ್ಕಿಂತಲೂ ಕೆಟ್ಟ ಸ್ಥಿತಿ, ಅಮೆರಿಕ ನಾಗರಿಕರು ಭಾರತಕ್ಕೆ ಹೋಗ್ಬೇಡಿ!
ಭಾರತಕ್ಕಿಂತ ಪಾಕಿಸ್ತಾನ ಸೇಫ್| ತನ್ನ ದೇಶದ ನಾಗರಿಕರನ್ನು ಭಾರತಕ್ಕೆ ತೆರಳದಂತೆ ಎಚ್ಚರಿಸಿದ ಅಮೆರಿಕ| ಪಾಕಿಸ್ತಾನ ಮೂರನೇ ಶ್ರೇಣಿಗೆ ಏರಿಕೆ, ಭಾರತವಿನ್ನೂ ನಾಲ್ಕನೇ ಶ್ರೇಣಿಯಲ್ಲೇ ಬಾಕಿ
ವಾಷಿಂಗ್ಟನ್(ಸೆ.09): ಭಾರತದ ಗೆಳೆಯ ಎಂದು ಹೇಳಿಕೊಳ್ಳುವ ದೊಡ್ಡಣ್ಣ ಅಮೆರಿಕದ ದೃಷ್ಟಿಯಲ್ಲಿ ಭಾರತದ ಪರಿಸ್ಥಿತಿ ಪಾಕಿಸ್ತಾನಕ್ಕಿಂತಲೂ ಕೆಟ್ಟದಾಗಿದೆ. ಹೀಗಾಗಿ ಅದು ತನ್ನ ನಾಗರಿಕರಿಗೆ ಭಾರತಕ್ಕೆ ಹೋಗಬೇಡಿ ಎಂದು ಸಲಹೆ ನೀಡಿದೆ. ಅಲ್ಲದೇ ಅದು ತನ್ನ ಪಾಕಿಸ್ತಾನ ಪ್ರಯಾಣ ಸಲಹೆಯನ್ನು ಪರಿಷ್ಕರಿಸಿ ಅದನ್ನು ಮೂರನೇ ಶ್ರೇಣಿಯಲ್ಲಿರಿಸಿದೆ. ಜೊತೆಗೆ ಪಾಕಿಸ್ತಾನಕ್ಕೆ 'ಪ್ರಯಾಣದ ಯೋಜನೆಯನ್ನು ಪುನರ್ವಿಮರ್ಶಿಸಲು' ತನ್ನ ನಾಗರಿಕರಿಗೆ ಸೂಚಿಸಿದೆ. ಇತ್ತ ಭಾರತ ಇನ್ನೂ ಪ್ರಯಾಣಿಸಲು ಸೂಕ್ತವಲ್ಲದ ದೇಶಗಳ ಪಟ್ಟಿಯಲ್ಲಿ ಮುಂದುವರೆದಿದೆ.
ಈ ಹಿಂದೆ ಅಮೆರಿಕ ತನ್ನ ಪಟ್ಟಿಯಲ್ಲಿ ಪಾಕಿಸ್ತಾನವನ್ನು ನಾಲ್ಕನೇ ಸ್ಥಾನದಲ್ಲಿರಿಸಿತ್ತು. ನಾಲ್ಕನೇ ಶ್ರೇಣಿಯಲ್ಲಿರುವ ದೇಶಗಳು ಪ್ರಯಾಣಿಸಲು ಸೂಕ್ತವಲ್ಲದ ದೇಶಗಳಾಗಿವೆ. ಅಮೆರಿಕ ವಿದೇಶಾಂಗ ಸಚಿವಾಲಯ ಪರಿಷ್ಕರಿಸಿದ ಈ ಪಟ್ಟಿಯನ್ವಯ ಭಾರತ ಇನ್ನೂ ನಾಲ್ಕನೇ ಶ್ರೇಣಿಯಲ್ಲಿದೆ. ಭಾರತ ಹೊರತುಪಡಿಸಿ ಸಿರಿಯಾ, ಇರಾನ್, ಇರಾಕ್ ಹಾಗೂ ಯಮನ್ ಸೇರಿ ಅನೇಕ ರಾಷ್ಟ್ರಗಳು ನಾಲ್ಕನೇ ಶ್ರೇಣಿಯಲ್ಲಿವೆ. ಭಾರತದಲ್ಲಿ ನಿರಂತರವಾಗಿ ಏರುತ್ತಿರುವ ಕೊರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಭಾರತಕ್ಕ ಪ್ರಯಾಣಿಸುವುದು ಸುರಕ್ಷಿತವಲ್ಲ ಎಂದು ಹೇಳಿದೆ.
ಈ ಪರಿಷ್ಕೃತ ಪಟ್ಟಿಯನ್ನು ಮಂಗಳವಾರ ಬಿಡುಗಡೆಗೊಳಿಸಿರುವ ವಿದೇಶಾಂಗ ಸಚಿವಾಲಯ ಕೊರೋನಾ ಸೋಂಕು ಹಾಗೂ ಉಗ್ರ ದಾಳಿಯನ್ನು ಗಮನದಲ್ಲಿಟ್ಟುಕೊಂಡು ಈ ಪಟ್ಟಿ ತಯಾರಿಸಿರವುದಾಗಿ ತಿಳಿಸಿದೆ. ಇದೇ ವೇಳೆ ಪಾಕಿಸ್ತಾನಕ್ಕೆ ಭೇಟಿ ನೀಡುವ ತನ್ನ ದೇಶದ ನಾಗರಿಕರಿಗೆ ಗಡಿ ಭಾಗಕ್ಕೆ ತೆರಳುವಾಗ ಎಚ್ಚರಿಕೆಯಿಂದಿರುವಂತೆಯೂ ಸೂಚಿಸಿದೆ.