ವಾಷಿಂಗ್ಟನ್(ಜ.22)‌: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಜೋ ಜೋ ಬೈಡೆನ್‌ 15 ಆದೇಶಗಳಿಗೆ ಸಹಿ ಹಾಕಿದ್ದು, ಡೊನಾಲ್ಡ್‌ ಟ್ರಂಪ್‌ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ವಿವಾದಿತ ಆದೇಶಗಳನ್ನು ಹಿಂಪಡೆದುಕೊಂಡಿದ್ದಾರೆ. ಟ್ರಂಪ್‌ ಅವಧಿಯಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ವಲಸೆ ನೀತಿಯ ತಿದ್ದುಪಡಿ ಮಸೂದೆಗೆ ಸಹಿ ಹಾಕಿರುವ ಬೈಡೆನ್‌, ಅದನ್ನು ಸಂಸತ್ತಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಮಸೂದೆ ಅಮೆರಿಕದಲ್ಲಿ ದಾಖಲೆಗಳಿಲ್ಲದೇ ನೆಲೆಸಿರುವ ಸಾವಿರಾರು ನಿರಾಶ್ರಿತರಿಗೆ ಪೌರತ್ವ ಕಲ್ಪಿಸಲು ನೆರವಾಗಲಿದೆ. ಅಲ್ಲದೇ ಗ್ರೀನ್‌ ಕಾರ್ಡ್‌ (ಕಾಯಂ ನಿವಾಸಿ) ವಿತರಣೆಗೆ ಇದ್ದ ದೇಶವಾರು ಮಿತಿ ರದ್ದಾಗಲಿದೆ.

ಮೊದಲ ದಿನ ಶ್ವೇತಭವನದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡೆನ್‌, ಚುನಾವಣೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುವುದು. ಮುಂದಿನ ದಿನಗಳಲ್ಲಿ ಇನ್ನಷ್ಟುಆದೇಶಗಳನ್ನು ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಜಾಗತಿಕ ತಾಪಮಾನ ಏರಿಕೆ ತಡೆಯುವ ನಿಟ್ಟಿನಲ್ಲಿ ನಡೆದ ಪ್ಯಾರಿಸ್‌ ಒಪ್ಪಂದದ ತೀರ್ಮಾನಗಳನ್ನು ಒಪ್ಪಲು ನಿರಾಕರಿಸಿದ್ದ ಟ್ರಂಪ್‌, ಒಪ್ಪಂದಿಂದ ಅಮೆರಿಕ ಹೊರಹೋಗುವ ನಿರ್ಧಾರ ಪ್ರಕಟಿಸಿದ್ದರು. ಆದರೆ, ಬೈಡೆನ್‌ ತಮ್ಮ ಅವಧಿಯ ಮೊದಲ ದಿನವೇ ಪ್ಯಾರಿಸ್‌ ಒಪ್ಪಂದಕ್ಕೆ ಅಮೆರಿಕ ಪುನಃ ಸೇರ್ಪಡೆ ಆಗುವ ಆದೇಶಕ್ಕೆ ಸಹಿ ಮಾಡಿದ್ದಾರೆ. ಅಲ್ಲದೇ ಮೆಕ್ಸಿಕೋದಿಂದ ಬರುವ ವಲಸಿಗರ ತಡೆಗೆ ಗಡಿಯಲ್ಲಿ ಬೃಹತ್‌ ಉಕ್ಕಿನ ಗೋಡೆ ನಿರ್ಮಾಣಕ್ಕೆ ಅನುದಾನ ತಡೆ ಹಿಡಿಯುವ ಆದೇಶಕ್ಕೂ ಬೈಡೆನ್‌ ಸಹಿ ಮಾಡಿದ್ದಾರೆ.

ಮುಸ್ಲಿಂ ಪ್ರಧಾನ ರಾಷ್ಟ್ರಗಳು, ಕೇಂದ್ರ ಏಷ್ಯಾ ಹಾಗೂ ಆಫ್ರಿಕಾದ ಕೆಲವು ದೇಶಗಳ ಮೇಲೆ ಟ್ರಂಪ್‌ ಪ್ರಯಾಣ ನಿಷೇಧ ಹೇರಿದ್ದರು. ಈ ಆದೇಶಕ್ಕೆ ಈಗ ತಡೆ ಬಿದ್ದಿದೆ. ಕೊರೋನಾ ವೈರಸ್‌ ಹಬ್ಬಿಸಿದ ಚೀನಾದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕದ ನೆರವವನ್ನು ಟ್ರಂಪ್‌ ತಡೆ ಹಿಡಿದಿದ್ದರು. ಅಲ್ಲದೇ ಡಬ್ಲ್ಯು ಎಚ್‌ಒದಿಂದ ಅಮೆರಿಕ ಹೊರ ಬರಲಿದೆ ಎಂದು ಘೋಷಿಸಿದ್ದರು. ಇದೀಗ ಡಬ್ಲ್ಯು ಎಚ್‌ಒಗೆ ಅಮೆರಿಕ ಪುನಃ ಕಾರ್ಯನಿರ್ವಹಿಸುವ ಸಂಬಂಧ ಬೈಡೆನ್‌ ಆದೇಶಿಸಿದ್ದಾರೆ. ಮುಸ್ಲಿಂ ರಾಷ್ಟ್ರಗಳ ಮೇಲಿನ ಪ್ರಯಾಣ ನಿಷೇಧ, ಧರ್ಮಾಧಾರಿತ ತಾರತಮ್ಯ, ತೃತೀಯಲಿಂಗಿಗಳು, ಸಲಿಂಗಿಗಳ ತಾರತಮ್ಯ ತಡೆ ಆದೇಶಗಳನ್ನು ಬೈಡೆನ್‌ ಜಾರಿಗೆ ತಂದಿದ್ದಾರೆ.