ವಾಷಿಂಗ್ಟನ್(ಫೆ.15): ಇದೇ ಫೆ. 24ರಿಂದ ಎರಡು ದಿನಗಳ ಭಾರತ ಭೇಟಿಗೆ ಬರಲಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ದಿನಕ್ಕೊಂದು ಆಹ್ಲಾದಕರ ಟ್ವೀಟ್ ಮಾಡುತ್ತಾ ಭಾರತೀಯರ ಮನ ಗೆಲ್ಲುತ್ತಿದ್ದಾರೆ.

ಭಾರತಕ್ಕೆ ಪತ್ನಿ ಸಮೇತರಾಗಿ ಬರಲು ಉತ್ಸುಕನಾಗಿದ್ದೇನೆ ಎಂದು ಈಗಾಗಲೇ ಹೇಳಿರುವ ಟ್ರಂಪ್, ಭಾರತೀಯರನ್ನು ಎದುರುಗೊಳ್ಳಲು ಕಾತರದಿಂದ ಇರುವುದಾಗಿ ತಿಳಿಸಿದ್ದಾರೆ.

ಅದರಂತೆ ಇದೀಗ ಮತ್ತೊಂದು ಟ್ವೀಟ್ ಮಾಡಿರುವ ಟ್ರಂಪ್, ಸಾಮಾಜಿಕ ಜಾಲತಾಣ ಫೇಸ್ಬುಕ್’ನಲ್ಲಿ ವಿಶ್ವದಲ್ಲೇ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ತಾವು, ವಿಶ್ವದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದೇನೆ ಎಂದು ಹೇಳಿದ್ದಾರೆ. 

ಫೇಸ್ಬುಕ್’ನಲ್ಲಿ  ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂಬರ್ 1, ಭಾರತದ ಪ್ರಧಾನಿ ನರೇಂದ್ರ ಮೋದಿ ನಂಬರ್ 2 ಸ್ಥಾನದಲ್ಲಿದ್ದಾರೆ. ಎಂದು ಇತ್ತೀಚೆಗೆ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಹೇಳಿದ್ದರು. 

ಈ ಸಂತಸದ ವಿಷಯವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಇನ್ನೆರಡು ವಾರಗಳಲ್ಲಿ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ, ಅದಕ್ಕಾಗಿ ಕಾಯುತ್ತಿದ್ದೇನೆ, ನನ್ನ ಈ ಭಾರತ ಭೇಟಿ ಅತ್ಯಂತ ವಿಶೇಷವಾದದ್ದು ಎಂದು ಟ್ರಂಪ್ ನುಡಿದಿದ್ದಾರೆ.