ನವದೆಹಲಿ(ಜ.14): ಇದೇ ಫೆಬ್ರವರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ದಟ್ಟವಾಗಿದೆ. ಟ್ರಂಪ್ ಭೇಟಿಯ ವ್ಯವಸ್ಥೆಗಳನ್ನು ಪರಿಶೀಲಿಸಲು ವಾಷಿಂಗ್ಟನ್‌ನಿಂದ ಭದ್ರತಾ ತಂಡ ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿವೆ ಎನ್ನಲಾಗಿದೆ.  

ಟ್ರಂಪ್  ಭಾರತ ಭೇಟಿಯ ಕುರಿತು ಇದುವರೆಗೂ ಎರಡೂ ದೇಶಗಳಿಂದ ಅಧಿಕೃತ  ಹೇಳಿಕೆ  ಬಂದಿಲ್ಲ. ಆದರೂ ಈ ಕುರಿತಾದ ಸಿದ್ಧತೆಗಳು ಟ್ರಂಪ್ ಭೇಟಿಯನ್ನು ಖಚಿತಪಡಿಸುತ್ತವೆ. 

ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಟ್ರಂಪ್ ಅವರನ್ನು ಪ್ರಧಾನಿ ಮೋದಿ  ಕೋರಿದ್ದರು. ಆದರೆ ಈ ಆಹ್ವಾನವನ್ನು ಟ್ರಂಪ್ ನಿರಾಕರಿಸಿದ್ದು, ಫೆಬ್ರವರಿಯಲ್ಲಿ ಭಾರತಕ್ಕೆ ಬರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.  

ಕಳೆದ ಜ.7 ರಂದು ಪ್ರಧಾನಿ ಮೋದಿ ಅವರಿಗೆ ದೂರವಾಣಿ ಕರೆ ಮಾಡಿದ್ದ ಟ್ರಂಪ್, ಫೆಬ್ರವರಿ ಕೊನೆ ವಾರದಲ್ಲಿ ಭಾರತ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಶ್ವೇತಭವನ ಕೂಡ ಸಿದ್ಧತೆಯಲ್ಲಿ ನಿರತವಾಗಿದ್ದು, ಟ್ರಂಪ್ ಭಾರತ ಭೇಟಿಗೂ ಮೊದಲು ಭದ್ರತಾ ತಂಡವನ್ನು ಕಳುಹಿಸಲು ಶ್ವೇತಭವನ ತಯಾರಿ ನಡೆಸಿದೆ ಎನ್ನಲಾಗಿದೆ.

ಹೇಗೆ ನಿಭಾಯಿಸ್ತೀರಿ?: ‘ಹೌಡಿ ಮೋದಿ’ಯಲ್ಲಿ ಭಾರೀ ಜನಸ್ತೋಮಕ್ಕೆ ಟ್ರಂಪ್‌ ಬೆಸ್ತು!

ಟ್ರಂಪ್ ಭೇಟಿಯ ಮಹತ್ವ:

ಟ್ರಂಪ್  ಭಾರತ ಭೇಟಿಯ ವೇಳೆ ಉಭಯ ದೇಶಗಳ ನಡುವೆ 2018ರಿಂದ ಬಾಕಿ ಉಳಿದುಕೊಂಡಿರುವ ಹಲವು ವ್ಯಾಪಾರ ಒಪ್ಪಂದಗಳು   ಇತ್ಯರ್ಥಗೊಳ್ಳುವ ನಿರೀಕ್ಷೆಯಿದೆ. 

ಜೂನ್ 2019 ರಲ್ಲಿ ಭಾರತಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ಅಮೆರಿಕಾ ರದ್ದುಗೊಳಿಸಿತ್ತು. ಈ ನಿರ್ಧಾರವನ್ನು ಟ್ರಂಪ್ ಪರಾಮರ್ಶಿಸುವ ಸಾಧ್ಯತೆ ದಟ್ಟವಾಗಿದೆ. 

ಪ್ರಮುಖವಾಗಿ ಅಮೆರಿಕದಲ್ಲಿ ಭಾರತದ ಹೂಡಿಕೆಗಳು ಮತ್ತು ತೈಲ ಉತ್ಪನ್ನಗಳ ಆಮದನ್ನು ಹೆಚ್ಚಿಸುವ ಬಗ್ಗೆ ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದಗಳಾಗುವ ಸಾಧ್ಯತೆ ಇದೆ.