ವಾಷಿಂಗ್ಟನ್(ಡಿ.21): ಫೈಝರ್‌- ಬಯೋಎನ್‌ಟೆಕ್‌ ಕಂಪನಿಗಳು ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆಯನ್ನು ಪಡೆದ ಬೆನ್ನಲ್ಲೇ ಅಮೆರಿಕದ ನರ್ಸ್‌ವೊಬ್ಬರು ತಲೆ ಸುತ್ತಿನಿಂದ ಕುಸಿದು ಬಿದ್ದ ಘಟನೆ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ. ಲಸಿಕೆ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತಿದ್ದಾಗಲೇ ಈ ಘಟನೆ ನಡೆದಿದ್ದು, ನರ್ಸ್‌ ಕುಸಿದುಬೀಳುವ ದೃಶ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್‌ ಆಗಿದೆ.

ಅಮೆರಿಕದಲ್ಲಿ ಫೈಝರ್‌ ಲಸಿಕೆಯನ್ನು ಕೊರೋನಾ ವಾರಿಯರ್‌ಗಳಿಗೆ ನೀಡಲಾಗುತ್ತಿದೆ. ಅದರಂತೆ ಟೆನ್ನೆಸ್ಸೀ ರಾಜ್ಯದ ಛಟ್ಟನೂಗಾ ಆಸ್ಪತ್ರೆಯ ನರ್ಸ್‌ ಟಿಫನಿ ಡೋವರ್‌ ಅವರಿಗೆ ಲಸಿಕೆ ನೀಡಲಾಗಿತ್ತು. ಲಸಿಕೆ ಪಡೆದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಲು ಆರಂಭಿಸಿದರು. ಲಸಿಕೆ ಪಡೆದಿರುವುದಕ್ಕೆ ಸಂಭ್ರಮವಾಗುತ್ತಿದೆ ಎಂದು ಮಾತನಾಡುತ್ತಾ ಏಕಾಏಕಿ ತಲೆ ಮೇಲೆ ಕೈ ಇಟ್ಟುಕೊಂಡು, ತಲೆ ಸುತ್ತುತ್ತಿದೆ ಎಂದು ಹೊರಡಲು ಮುಂದಾದರು. ಕೂಡಲೇ ಕುಸಿದರು. ವೈದ್ಯರು ತಕ್ಷಣವೇ ಅವರ ರಕ್ಷಣೆಗೆ ನಿಂತರು.

ತಮಗೆ ಕೆಲವೊಮ್ಮೆ ನೋವಾದಾಗ ತಲೆ ಸುತ್ತು ಕಾಣಿಸಿಕೊಳ್ಳುತ್ತದೆ ಎಂದು ಚೇತರಿಕೆ ಬಳಿಕ ನರ್ಸ್‌ ತಿಳಿಸಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ. ಈ ನಡುವೆ, ಲಸಿಕೆ ಪಡೆದ ನೋವು ಅಥವಾ ಉದ್ವೇಗದಿಂದ ಕೆಲವು ವ್ಯಕ್ತಿಗಳು ಲಸಿಕೆ ಹಾಕಿಸಿಕೊಂಡ ಬಳಿಕ ಕುಸಿದ ನಿದರ್ಶನಗಳು ಇವೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ, ಲಸಿಕೆ ಪಡೆದ ನರ್ಸ್‌ ಕುಸಿದು ಬೀಳುವ ವಿಡಿಯೋ ವೈರಲ್‌ ಆಗಿದ್ದು, ಲಸಿಕೆ ಬಗ್ಗೆಯೂ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.