ವಾಷಿಂಗ್ಟನ್(ಫೆ.05): ಅಮೆರಿಕದ ಇತಿಹಾಸದಲ್ಲೇ ಮೊದಲ ಬಾರಿ ಎನ್ನಲಾದ ಅಪರೂಪದ ಪ್ರಸಂಗ ಹೌಸ್ ಆಫ್  ರೆಪ್ರೆಸೆಂಟೇಟಿವ್ ಸಭೆಯಲ್ಲಿ ನಡೆದಿದೆ. ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾಷಣದ ಪ್ರತಿಯನ್ನು ಸದನದ ಸ್ಪೀಕರ್ ಹರಿದು ಹಾಕಿದ ಘಟನೆ ನಡೆದಿದೆ.

ಅಮೆರಿಕ ಹೌಸ್ ಆಫ್ ರೆಪ್ರೆಸೆಂಟೇಟಿವ್’ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣ ಮುಗಿದ ಬಳಿಕ, ಭಾಷಣದ ಪ್ರತಿಗಳನ್ನು ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹರಿದು ಹಾಕಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ 20 ಕೋಟಿ ರು.ದಂಡ!

ಉಕ್ರೇನ್ ಸರ್ಕಾರದ ಮೂಲಕ ಪ್ರತಿಸ್ಪರ್ಧಿ ಜಾಯ್ ಬಿಡೆನ್ ವಿರುದ್ಧ ತನಿಖೆಗೆ ಆದೇಶಿಸಲು ಪ್ರಭಾವ ಬೀರಿದ್ದಾರೆ ಎಂದು ದೋಷಾರೋಪ ಎದುರಿಸಿದ ನಂತರ ಡೊನಾಲ್ಡ್ ಟ್ರಂಪ್ ಮಾಡಿರುವ ಭಾಷಣ ಇದಾಗಿದ್ದು, ಭಾಷಣ ಮುಗಿದ ನಂತರ ಸ್ಪೀಕರ್ ಕೈಕುಲುಕಲು ಮುಂದಾದಾಗ ಡೋನಾಲ್ಡ್ ಟ್ರಂಪ್ ಅದಕ್ಕೆ ಸ್ಪಂದನೆ ನೀಡಲಿಲ್ಲ.

ಟ್ರಂಪ್ ಭಾಷಣದುದ್ದಕ್ಕೂ ಅವರನ್ನು ವಿರೋಧಿಸಿ ತಲೆ ಅಲ್ಲಾಡಿಸುತ್ತಿದ್ದ ನ್ಯಾನ್ಸಿ ಪೆಲೋಸಿ, ಅವರ ಭಾಷಣದ ಮುಗಿಯುತ್ತಿದ್ದಂತೇ ಪ್ರತಿಗಳನ್ನು ಹರಿದು ಮೇಜಿನ ಮೇಲೆ ಹರಡಿದರು.

ಡೆಮಾಕ್ರಟಿಕ್ ನಿಯಂತ್ರಣವಿರುವ ಸದನದಿಂದ ಆರು ವಾರಗಳ ಹಿಂದೆ ಡೊನಾಲ್ಡ್ ಟ್ರಂಪ್ ದೋಷಾರೋಪಕ್ಕೆ ಒಳಗಾಗಿದ್ದರು. ತಮ್ಮ ಮೇಲೆ ದೋಷಾರೋಪ ಹೊರಿಸಿದ್ದಕ್ಕೆ ಸ್ಪೀಕರ್ ಅವರನ್ನು ಟ್ರಂಪ್ ವಂಚಕಿ, ನರ ನ್ಯಾನ್ಸಿ,ಕ್ರೇಜಿ ನ್ಯಾನ್ಸಿ ಎಂದು ಜರೆದಿದ್ದರು.

ಇನ್ನು ನ್ಯಾನ್ಸಿ ಪೆಲೋಸಿ ನಡೆಯನ್ನು ಟೀಕಿಸಿರುವ ಅಮೆರಿಕದ ಶ್ವೇತ ಭವನ, ನ್ಯಾನ್ಸಿ ಪೆಲೋಸಿ ಅಧ್ಯಕ್ಷರಿಗೆ ಅಗೌರವ ತೋರಿಸಿದ್ದಾರೆ ಎಂದು ಹರಿಹಾಯ್ದಿದೆ.