* ನರ್ಸ್‌ಗ ಕೊರತೆ ಹಿನ್ನೆಲೆ, ಸಂಚಾರಿ ನರ್ಸ್‌ಗಳ ಹುದ್ದೆಗೆ ಭಾರೀ ಡಿಮಾಂಡ್* ಆಸ್ಪತ್ರೆ ಕೆಲಸ ಬಿಟ್ಟು ಸಂಚಾರಿ ಕೆಲಸಕ್ಕೆ ಹೋಗುತ್ತಿರುವ ನರ್ಸ್‌ಗಳು* ಆಸ್ಪತ್ರೆಯಲ್ಲಿನ ವೇತನಕ್ಕಿಂತ ಸಂಚಾರಿ ಹುದ್ದೆಗೆ 3 ಪಟ್ಟು ಹೆಚ್ಚು ಸಂಬಳ* ಕಂಗಾಲಾದ ಆಸ್ಪತ್ರೆಗಳಿಗೆ ಕೂಡ ಹೆಚ್ಚು ವೇತನ ನೀಡುವ ಅನಿವಾರ‍್ಯತೆ
ವಾಷಿಂಗ್ಟನ್(ಆ.04): ಕೋವಿಡ್-19 ಹಾವಳಿ ಅಮೆರಿಕದಲ್ಲಿ ಹೆಚ್ಚುತ್ತಿರುವ ನಡುವೆಯೇ ದಾದಿಯರ ಕೊರತೆ ಉಂಟಾಗಿದೆ. ನರ್ಸ್‌ಗಳು ಕೆಲಸದ ಒತ್ತಡದಿಂದ ಬೇಸತ್ತು ಕೆಲಸದಿಂದ ದೂರವಾಗುತ್ತಿದ್ದಾರೆ. ಇಲ್ಲವೇ, ಕೆಲಸದಿಂದ ನಿವೃತ್ತಿ ಹೊಂದುತ್ತಿದ್ದಾರೆ. ಇನ್ನೂ ಕೆಲವರು ತಾವು ಇದ್ದ ಆಸ್ಪತ್ರೆಯಲ್ಲಿ ಕೆಲಸ ಬಿಟ್ಟು ಹೆಚ್ಚು ವೇತನ ಲಭಿಸುವ ‘ಸಂಚಾರಿ ನರ್ಸ್’ ಹುದ್ದೆ ಸೇರಿಕೊಳ್ಳುತ್ತಿದ್ದಾರೆ. ಇದು ಆಸ್ಪತ್ರೆಗಳನ್ನು ಕಂಗೆಡಿಸಿದೆ.
‘ಸಂಚಾರಿ ನರ್ಸ್’ ನೌಕರಿಗೆ ಏಜೆನ್ಸಿಗಳು ವಾರಕ್ಕೆ 5 ಸಾವಿರ ಡಾಲರ್ (3.75 ಲಕ್ಷ ರು.) ಅಥವಾ ಅದಕ್ಕೂ ಹೆಚ್ಚು ವೇತನ ನೀಡುತ್ತಿವೆ. ಇದು ಆಸ್ಪತ್ರೆಯಲ್ಲಿನ ದಾದಿಯರ ವೇತನಕ್ಕಿಂತ 2-3 ಪಟ್ಟು ಹೆಚ್ಚು. ಹೀಗಾಗಿ ಇದ್ದ ಆಸ್ಪತ್ರೆಯಲ್ಲಿ ಕೆಲಸ ಬಿಟ್ಟು ಸಂಚಾರಿ ನರ್ಸ್ ಹುದ್ದೆಯತ್ತ ದಾದಿಯರು ಆಕರ್ಷಿತರಾಗುತ್ತಿದ್ದಾರೆ.
‘ಇಷ್ಟೊಂದು ಸಂಬಳ ಸಿಗುತ್ತದೆ ಎಂದರೆ ನಾನೂ ವೈದ್ಯ ಹುದ್ದೆ ತ್ಯಜಿಸಿ ನರ್ಸ್ ಆಗಬೇಕು ಎನಿಸುತ್ತಿದೆ’ ಎಂದು ಡಾ| ಫಿಲಿಪ್ ಕೌಲೆ ಎಂಬ ವೈದ್ಯರು ಪರಿಸ್ಥಿತಿಗೆ ಕೈಗನ್ನಡಿ ಹಿಡಿದಿದ್ದಾರೆ.
ಪರಿಸ್ಥಿತಿ ಹೇಗಿದೆ ಎಂದರೆ ಜಾರ್ಜಿಯಾದ ಅಗಸ್ಟಾವಿವಿ ಆಸ್ಪತ್ರೆಗೆ ಒಂದೇ ವಾರದಲ್ಲಿ ಸುಮಾರು 20-30 ದಾದಿಯರು ರಾಜೀನಾಮೆ ನೀಡಿ ‘ಸಂಚಾರಿ ನರ್ಸ್’ ಹುದ್ದೆ ಸೇರಿಕೊಂಡಿದ್ದಾರೆ. ಅನೇಕ ಆಸ್ಪತ್ರೆಗಳ ಪರಿಸ್ಥಿತಿ ಕೂಡ ಇದೇ ಆಗಿದ್ದು, ನೂರಾರು ನರ್ಸ್ ಹುದ್ದೆಗಳು ಖಾಲಿ ಬಿದ್ದಿವೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳೂ ಸಂಚಾರಿ ನರ್ಸ್‌ಗಿಂತ ಹೆಚ್ಚು ವೇತನ ನೀಡಿ ನರ್ಸ್‌ಗಳನ್ನು ನೇಮಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
4 ತಿಂಗಳಲ್ಲಿ 3 ವರ್ಷದ ವೇತನ ಪಡೆದೆ:
ಸಂಚಾರಿ ನರ್ಸ್ ಹುದ್ದೆಗೆ ಸೇರಿಕೊಂಡ ದಾದಿಯೊಬ್ಬರು ಮಾತನಾಡಿ, ‘ನನಗೆ ಎಷ್ಟುಸಂಬಳ ಲಭಿಸಿತೆಂದರೆ 3 ವರ್ಷದ ಸಂಬಳವನ್ನು ಕೇವಲ 4 ತಿಂಗಳಲ್ಲಿ ಸಂಪಾದಿಸಿದ್ದೇನೆ’ ಎಂದಿದ್ದಾರೆ.
ಕಿಮ್ ಡೇವಿಸ್ ಎಂಬ ದಾದಿ ಪ್ರತಿಕ್ರಿಯೆ ನೀಡಿ, ‘ಸಂಚಾರಿ ನರ್ಸ್ ಆದ ಬಳಿಕ 14 ತಿಂಗಳಲ್ಲಿ ನನ್ನ ಆದಾಯ ಡಬಲ್ ಆಗಿದೆ. ಎಲ್ಲಿ ಅಗತ್ಯ ಇದೆಯೋ ಆ ಊರಿಗೆ ಸಂಚರಿಸಿ ಕಾರ‍್ಯನಿರ್ವಹಿಸುತ್ತಿದ್ದೇನೆ. ನನ್ನ ಎಲ್ಲ 50 ಸಾವಿರ ಡಾಲರ್ ಸಾಲ ತೀರಿಸಿದೆ. ನನ್ನ ಇನ್ನೂ ಅನೇಕ ಸಹೋದ್ಯೋಗಿಗಳು ಇದೇ ಹಾದಿ ಹಿಡಿದಿದ್ದಾರೆ. ಮಾಡುವ ಒಂದೇ ಕೆಲಸಕ್ಕೆ ಅರ್ಧ ಸಂಬಳ ಪಡೆದು ಆಸ್ಪತ್ರೆಯಲ್ಲಿ ಇರುವುದೇಕೇ?’ ಎಂದಿದ್ದಾರೆ.
ನರ್ಸ್ ಹುದ್ದೆ ಸಂಭಾಳಿಸುವುದು ಅಷ್ಟುಸುಲಭವಾಗಿಲ್ಲ. ಕೋವಿಡ್ ಕಾಲದಲ್ಲಿ ಮನೆಗೂ ಹೋಗದೇ ದಿನಪೂರ್ತಿ ಕೆಲಸ ಮಾಡಿದ್ದೇವೆ. ಕೋವಿಡ್ ನಿಯಮ ಪಾಲಿಸದ ರೋಗಿಗಳೂ ಇದ್ದು ಸಾಕಷ್ಟುಬೈಗುಳ ತಿಂದಿದ್ದೇವೆ ಎಂದು ಒಕ್ಲಾಹೋಮಾದ ನರ್ಸ್ ಜೂಲಿ ಹಾಫ್, ತಮ್ಮ ಅನುಭವ ವಿವರಿಸಿದ್ದಾರೆ.
ಏನಿದು ಸಂಚಾರಿ ನರ್ಸ್ ಹುದ್ದೆ?
ಅಮೆರಿಕದಲ್ಲಿ ಸಂಚಾರಿ ನರ್ಸ್ ಹುದ್ದೆ ಇದೆ. ಏಜೆನ್ಸಿಗಳು ಇವರನ್ನು ನೇಮಿಸಿಕೊಂಡು ಅಗತ್ಯ ಇರುವ ಆಸ್ಪತ್ರೆಗಳು ಅಥವಾ ಸ್ಥಳಗಳಿಗೆ ಕೆಲಸಕ್ಕೆ ನಿಯೋಜಿಸುತ್ತವೆ. ಈ ನರ್ಸ್‌ಗಳು ಒಂದೇ ಆಸ್ಪತ್ರೆಯಲ್ಲಿ ಕೆಲಸಕ್ಕಿರುವುದಿಲ್ಲ. ಅಲ್ಪಾವಧಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನೌಕರಿ ಬದಲಿಸುತ್ತಿರುತ್ತಾರೆ.
