ಬೆಂಕಿ ಬಸಣ್ಣ ನ್ಯೂಯಾರ್ಕ್

ನ್ಯೂಯಾರ್ಕ್(ನ.01) ಕಳೆದ ಕೆಲವು ವಾರಗಳಿಂದ ಅಮೇರಿಕಾದಲ್ಲಿ ಕರೋನಾ ಸಾವಿನ ಸಂಖ್ಯೆ ಮತ್ತು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಹಂತದಲ್ಲಿ, ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿದ್ದು ಚುನಾವಣೆಯ ಜ್ವರ ಕರೋನವೈರಸ್ ಕಿಂತ ಹೆಚ್ಚಾಗಿ ಎಲ್ಲೆಡೆ ಹಬ್ಬುತ್ತಿದೆ.

ಒಂದೇ ದಿನದಲ್ಲಿ  87,000 ಹೊಸ ಕೊರೋನಾ ಕೇಸುಗಳು ಪತ್ತೆಯಾಗಿದ್ದು, ಅಮೆರಿಕದಲ್ಲಿ ಕರೋನಾ ಸೋಂಕಿತರ ಸಂಖ್ಯೆ 92 ಲಕ್ಷ ಮತ್ತು ಒಟ್ಟು  ಸಾವಿನ ಸಂಖ್ಯೆ 2 ಲಕ್ಷ  34 ಸಾವಿರ ದಾಟಿದ್ದು, ವಿಶ್ವದಲ್ಲಿ ತನ್ನ ಮೊದಲ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡು ಹೋಗುತ್ತಲಿದೆ.

ಟ್ರಂಪ್  ಉಪಾಧ್ಯಕ್ಷರಾದ ಮೈಕ್ ಪೆನ್ಸ್  ಅವರ  ಸಹೋದ್ಯೋಗಿಗಳಲ್ಲಿ, ಸಲಹೆಗಾರರಲ್ಲಿ ಕನಿಷ್ಠ ಐದು  ಜನಕ್ಕೆ ಕೊರನ ವೈರಸ್ ಬಂದಿದ್ದು ಟ್ರಂಪ್  ಚುನಾವಣೆಯ  ಪ್ರಚಾರಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ .ಕಾರಣ ಮೈಕ್ ಪೆನ್ಸ್ ಅವರು  "ವೈಟ್ ಹೌಸ್  ಕೊರೋನಾ ವೈರಸ್ ನಿಯಂತ್ರಣ ಕಮಿಟಿ" ಯ  ಚೇರ್ಮನ್ ಆಗಿದ್ದಾರೆ.

ಬೈಡನ್‌ಗೆ ಭಾರತೀಯರದ್ದೆ ಬಲ; ಇವರ ಸಲಹೆ ಇಲ್ಲ ಅಂದ್ರೆ ಏನೂ ನಡೆಯಲ್ಲ

ಕರೋನ  ವೈರಸ್ ಅಮೆರಿಕಕ್ಕೆ ಕಾಲಿಟ್ಟು ಈಗಾಗಲೇ  ಹತ್ತು ತಿಂಗಳಾದರೂ ಲಸಿಕೆ ಸಿಗದೆ ಇರುವುದು ಟ್ರಂಪ್ ಗೆ  ದೊಡ್ಡ ಹಿನ್ನಡೆ ಉಂಟು ಮಾಡಿದೆ.  ಅಮೆರಿಕದ ಹಲವಾರು ಫಾರ್ಮಸಿಟಿಕಲ್ ಕಂಪನಿಗಳ ವಿಜ್ಞಾನಿಗಳು ಕರೋನ ವೈರಸ್ ಗೆ ವಿವಿಧ ಹೊಸ  ಲಸಿಕೆಗಳನ್ನು ಪ್ರಯೋಗಾಲಯದಲ್ಲಿ ಸಂಶೋಧನೆ ಮಾಡಿದ್ದರೂ ಸಹಿತ ಅವು ಇನ್ನೂ ಟೆಸ್ಟ್ ಹಂತದಲ್ಲಿದ್ದು  FDA ನಿಂದ  ಅನುಮೋದನೆ ಸಿಕ್ಕಿಲ್ಲ. ಟ್ರಂಪ್  ಎಷ್ಟೇ ಒತ್ತಡ ಹಾಕಿದರೂ  ಸಹಿತ ಅವರ ಕೈ ಕೆಳಗೆ ಇರುವ  FDA ಸಂಸ್ಥೆಯು  ತುರಾತುರಿಯಲ್ಲಿ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ  ಬಿಡುಗಡೆ ಮಾಡಲು ಒಪ್ಪುತ್ತಿಲ್ಲ. 

ಕರೋನಾ ಮಹಾಮಾರಿಯಿಂದಾಗಿ ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಇನ್ನು ಹಾಗೆಯೇ ಇದೆ. ನಿರುದ್ಯೋಗಿಗಳ ಸಂಖ್ಯೆ 1 ಕೋಟಿ 25 ಲಕ್ಷ ಮೀರಿದೆ.   ಇದು ಎಪ್ರಿಲ್, ಮೇ ತಿಂಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾದರೂ ಸಹಿತ ಅಂತ ಬಹುದೊಡ್ಡ ಸುಧಾರಣೆ ಏನಲ್ಲ.ಇನ್ನೊಂದು "ಸ್ಟಿಮ್ಯುಲಸ್  ಪ್ಯಾಕೇಜ್"ನ್ನು ಬಿಡುಗಡೆ ಮಾಡಲು ವಿರೋಧಪಕ್ಷವಾದ ಡೆಮಾಕ್ರಟಿಕ್ ಪಕ್ಷ ಮತ್ತು ಆಡಳಿತ ಪಕ್ಷವಾದ ರಿಪಬ್ಲಿಕ್ ಪಕ್ಷಗಳ ಮಧ್ಯೆ ಒಮ್ಮತ  ಬರದೇ ಇರುವುದು  ತೊಂದರೆಗೊಳಗಾದ ಜನ ಸಾಮಾನ್ಯರಿಗೆ ರಾಜಕಾರಣಿಗಳ ಮೇಲೆ ಬಹಳಷ್ಟು ಆಕ್ರೋಶ ಉಂಟುಮಾಡಿದೆ.  ಇದು ಸಹ ಟ್ರಂಪ್ ಗೆ  ಶಾಪವಾಗಿ ಪರಿಣಮಿಸಬಹುದು.

ಟ್ರಂಪ್ ರನ್ನು  ಸೋಲಿಸಲೇ ತೀರಬೇಕೆಂದು ಪಣತೊಟ್ಟಿರುವ ಅಮೆರಿಕದ ಮಾಜಿ ಅಧ್ಯಕ್ಷ  ಬರಾಕ್ ಒಬಾಮಾ ತಮ್ಮ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಪರವಾಗಿ ಭರ್ಜರಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.  ಒಬಾಮ ತಮ್ಮ ಸಮುದಾಯ ಮತ್ತು ಅಲ್ಪಸಂಖ್ಯಾತ ಮತದಾರರನ್ನು ಬೆಳೆಯುವುದರಿಂದ ಅದು ಟ್ರಂಪ್ ಗೆ ಭಾರಿ ಹೊಡೆತ ಕೊಡುತ್ತದೆ.

ಅಮೆರಿಕದಲ್ಲಿಯ ಒಟ್ಟು  50 ರಾಜ್ಯಗಳಲ್ಲಿ  ಸುಮಾರು 40 ರಾಜ್ಯಗಳನ್ನು  ನೀಲಿ ಅಥವಾ ಕೆಂಪು ಎಂದು ಸುಲಭವಾಗಿ ವಿಂಗಡಿಸಬಹುದು. ಸಾಮಾನ್ಯವಾಗಿ ಯಾವಾಗಲೂ ನೀಲಿ ರಾಜ್ಯಗಳಲ್ಲಿ   ಡೆಮಾಕ್ರೆಟಿಕ್ ಪಕ್ಷವು ಮತ್ತು ಕೆಂಪು ರಾಜ್ಯಗಳಲ್ಲಿ ರಿಪಬ್ಲಿಕ್ ಪಕ್ಷವು  ಗೆಲ್ಲುತ್ತವೆ.

ಉದಾಹರಣೆಗೆ ಕ್ಯಾಲಿಫೋರ್ನಿಯಾ ಮತ್ತು ನ್ಯೂಯಾರ್ಕ್  ರಾಜ್ಯಗಳು ನೀಲಿ ರಾಜ್ಯಗಳಾಗಿದ್ದು ಅಲ್ಲಿ ಸಾಮಾನ್ಯವಾಗಿ ಯಾವಾಗಲೂ ಡೆಮಾಕ್ರಟಿಕ್ ಪಾರ್ಟಿಯೇ   ಗೆಲ್ಲುತ್ತದೆ.  ಟೆಕ್ಸಸ್,  ಕಾನ್ಸಾಸ್, ನಾರ್ತ್ ಡಕೋಟಾ, ಸೌತ್ ಡಕೋಟಾ ರಾಜ್ಯಗಳು ಕೆಂಪು ರಾಜ್ಯಗಳಾಗಿದ್ದವು, ಅಲ್ಲಿ ಸಾಮಾನ್ಯವಾಗಿ ಯಾವಾಗಲೂ ರಿಪಬ್ಲಿಕ್ ಪಾರ್ಟಿ ಗೆಲ್ಲುವುದು.

ಉಳಿದ ಹತ್ತು ರಾಜ್ಯಗಳನ್ನು ಸ್ವಿಂಗ್ ಸ್ಟೇಟ್ ( ಉಯ್ಯಾಲೆಯ  ರಾಜ್ಯಗಳು)  ಅಥವಾ ಬ್ಯಾಟಲ್ -ಗ್ರೌಂಡ್ ಸ್ಟೇಟ್  (ಯುದ್ಧ ಭೂಮಿಯ ರಾಜ್ಯಗಳು) ಅನ್ನುತ್ತಾರೆ. ಇಲ್ಲಿ ಖಂಡಿತವಾಗಿ ರಿಪಬ್ಲಿಕನ್ ಅಥವಾ  ಡೆಮಾಕ್ರಟಿಕ್ ಪಕ್ಷ ನೀರಿಕ್ಷೆ ಮಾಡಲು ಸಾಧ್ಯವಿಲ್ಲ. ಯಾವ ಪಕ್ಷವಾದರೂ  ಗೆಲ್ಲಬಹುದು. ಸ್ವಿಂಗ್ ಸ್ಟೇಟ್ ಗಳ ಉದಾಹರಣೆಯೆಂದರೆ ಫ್ಲೋರಿಡಾ, ಆಯೋವಾ ,ಮಿಷಿಗನ್, ಓಹಿಯೋ,  ವಿಸ್ಕಾನ್ಸನ್,  ಪೆನ್ಸಿಲ್ವೇನಿಯಾ, ಕೊಲೊರಾಡೊ,  ವರ್ಜಿನಿಯಾ ಮತ್ತು  ನಾರ್ತ್ ಕರೋಲಿನಾ.  ಈ ಸ್ವಿಂಗ್ ಸ್ಟೇಟ್ ಗಳಲ್ಲಿ ಜೋ  ಬಿಡೆನ್  ಮತ್ತು ಟ್ರಂಪ್ ಅವರು ಹಗಲಿರುಳು ಚುನಾವಣೆ ಪ್ರಚಾರ ನಡೆಸಿದ್ದಾರೆ. ಇವರಿಬ್ಬರ  ಭವಿಷ್ಯ  ಏನಾಗುತ್ತದೆ ಎಂದು ನವಂಬರ್ ಮೂರರಂದು ನಿರ್ಧಾರವಾಗುತ್ತದೆ.

ಅಮೆರಿಕದಲ್ಲಿರುವ ಭಾರತೀಯರು  ತಮ್ಮ ದೇಶದ ಮೂಲದವರಾದ ಕಮಲಾ ಹ್ಯಾರಿಸ್ ರನ್ನು  ಉಪಾಧ್ಯಕ್ಷೆ ಅಭ್ಯರ್ಥಿಯನ್ನಾಗಿ ಮಾಡಿದ ಜೋ ಬಿಡೆನ್ ಗೆ ವೋಟು ಹಾಕಬೇಕೋ ಅಥವಾ  ಚೀನಾದ ಬದ್ಧ ವೈರಿ, ಮೋದಿಯವರ ಸ್ನೇಹಿತರಾದ,  ಸದಾ ವಿವಾದದ ಕೇಂದ್ರ ಬಿಂದುವಾದ, ಟ್ರಂಪ್ ಗೆ ವೋಟು ಹಾಕಬೇಕೋ ಎನ್ನುವ ಗೊಂದಲದಲ್ಲಿದ್ದಾರೆ.

ಈ ಕರೋನಾ ವೈರಸ್ ಟ್ರಂಪ್ ರ ಎರಡನೇ ಅವಧಿಗೆ ಅಧ್ಯಕ್ಷನಾಗುವ ಕನಸನ್ನು ಬಲಿತೆಗೆದುಕೊಳ್ಳುವುದೇ?  ಎಂಬ ಬಹುಜನರ ಪ್ರಶ್ನೆಗೆ ಇನ್ನು ನಾಲ್ಕೇ ದಿನಗಳಲ್ಲಿ ಉತ್ತರ ಸಿಗಲಿದೆ.  ಆ  ಜನಾದೇಶಕ್ಕಾಗಿ ನಾವು ಕಾದು ನೋಡೋಣ!