ವ್ಯಾಪಾರ ಒಪ್ಪಂದದ ಕಿರಿಕ್‌ ಬಳಿಕ ಅಮೆರಿಕ ಅಧ್ಯಕ್ಷರ ಹೊಸ ವಿವಾದ!

ವ್ಯಾಪಾರ ಒಪ್ಪಂದದ ಕಿರಿಕ್‌ ಬಳಿಕ ಅಮೆರಿಕ ಅಧ್ಯಕ್ಷರ ಹೊಸ ವಿವಾದ| ಧಾರ್ಮಿಕ ಸ್ವಾತಂತ್ರ್ಯ ವಿಷಯವನ್ನು ಟ್ರಂಪ್‌ ಚರ್ಚಿಸುತ್ತಾರೆ: ಅಮೆರಿಕ| ಸಿಎಎ, ಎನ್‌ಆರ್‌ಸಿ ಬಗ್ಗೆ ಮಾತಾಡ್ತಾರಾ ಎಂಬ ಪ್ರಶ್ನೆಗೆ ಶ್ವೇತಭವನ ಉತ್ತರ

US concerned about CAA Trump will raise issue of religious freedom with Modi

ವಾಷಿಂಗ್ಟನ್‌[ಫೆ.23]: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಎಂಬುದು ದೇಶದ ಆಂತರಿಕ ವಿಚಾರ ಎಂದು ಭಾರತ ಪ್ರತಿಪಾದಿಸಿಕೊಂಡು ಬಂದಿದ್ದರೂ, ತಮ್ಮ ಭಾರತ ಪ್ರವಾಸ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹಾಗೂ ಸಾರ್ವಜನಿಕ ಭಾಷಣದ ವೇಳೆ ಈ ವಿಚಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಸ್ತಾಪ ಮಾಡುವುದು ಬಹುತೇಕ ಖಚಿತವಾಗಿದೆ.

ಭಾರತದ ಪ್ರಜಾಸತ್ತಾತ್ಮಕ ಸಂಪ್ರದಾಯ ಹಾಗೂ ಸಂಸ್ಥೆಗಳ ಬಗ್ಗೆ ಅಮೆರಿಕ ಬಹಳ ಗೌರವ ಹೊಂದಿದೆ. ಆ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಭಾರತಕ್ಕೆ ಅಮೆರಿಕ ಪ್ರೋತ್ಸಾಹ ನೀಡಲಿದೆ. ಮೋದಿ ಜತೆಗಿನ ಮಾತುಕತೆ ವೇಳೆ ಧಾರ್ಮಿಕ ಸ್ವಾತಂತ್ರ್ಯ ಕುರಿತ ವಿಚಾರವನ್ನು ಟ್ರಂಪ್‌ ಅವರು ಪ್ರಸ್ತಾಪಿಸಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.

ಭಾರತ ಭೇಟಿ ಸಂದರ್ಭ ಮೋದಿ ಅವರೊಂದಿಗಿನ ಸಮಾಲೋಚನೆ ವೇಳೆ ಟ್ರಂಪ್‌ ಅವರು ಸಿಎಎ ಹಾಗೂ ಎನ್‌ಆರ್‌ಸಿ (ರಾಷ್ಟ್ರೀಯ ನಾಗರಿಕ ನೋಂದಣಿ) ವಿಚಾರಗಳನ್ನು ಪ್ರಸ್ತಾಪಿಸುತ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು, ‘ನೀವು ಎತ್ತಿರುವ ವಿಷಯಗಳ ಬಗ್ಗೆ ನಮಗೆ ಕಳವಳವಿದೆ. ಪ್ರಜಾಪ್ರಭುತ್ವ ಹಾಗೂ ಧಾರ್ಮಿಕ ಸ್ವಾತಂತ್ರ್ಯ ಕುರಿತು ಉಭಯ ದೇಶಗಳು ಹೊಂದಿರುವ ಸಂಪ್ರದಾಯ ಕುರಿತು ತಮ್ಮ ಸಾರ್ವಜನಿಕ ಭಾಷಣ ಹಾಗೂ ಮೋದಿ ಜತೆಗಿನ ಖಾಸಗಿ ಮಾತುಕತೆ ವೇಳೆ ಟ್ರಂಪ್‌ ಅವರು ಮಾತನಾಡಲಿದ್ದಾರೆ. ಧಾರ್ಮಿಕ ಸ್ವಾತಂತ್ರ್ಯ ವಿಚಾರ ನಮ್ಮ ಆಡಳಿತಕ್ಕೆ ತುಂಬಾ ಮಹತ್ವದ್ದಾಗಿದೆ’ ಎಂದು ಹೇಳಿದ್ದಾರೆ.

ಧಾರ್ಮಿಕ ಸ್ವಾತಂತ್ರ್ಯ, ಧಾರ್ಮಿಕ ಅಲ್ಪಸಂಖ್ಯಾತರಿಗೆ ಗೌರವ ಹಾಗೂ ಎಲ್ಲ ಧರ್ಮಗಳನ್ನು ಸಮಾನ ಕಾಣಬೇಕು ಎಂಬುದು ಭಾರತದ ಸಂವಿಧಾನದಲ್ಲೇ ಇದೆ. ಹೀಗಾಗಿ ಈ ವಿಚಾರ ಅಮೆರಿಕ ಅಧ್ಯಕ್ಷರಿಗೂ ಮಹತ್ವದ್ದು. ಆದ ಕಾರಣ ಈ ವಿಷಯ ಚರ್ಚೆಗೆ ಬರಲಿದೆ. ಭಾರತವು ಪ್ರಜಾಪ್ರಭುತ್ವದ ಬಲಿಷ್ಠ ಬುನಾದಿಯನ್ನು ಹೊಂದಿದೆ. ಧಾರ್ಮಿಕ, ಭಾಷಾ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿರುವ ಶ್ರೀಮಂತ ದೇಶವಾಗಿದೆ. ಜತೆಗೆ ವಿಶ್ವದ 4 ಪ್ರಮುಖ ಧರ್ಮಗಳ ಜನನ ಸ್ಥಳವಾಗಿದೆ ಎಂದು ಹೇಳಿದ್ದಾರೆ.

ಬಲಿಷ್ಠ ಸಂಬಂಧ:

ಭಾರತಕ್ಕೆ ಅಮೆರಿಕ ಅಧ್ಯಕ್ಷರು ಭೇಟಿ ನೀಡುತ್ತಿರುವುದು ಉಭಯ ದೇಶಗಳ ನಡುವಣ ಬಲಿಷ್ಠ ಹಾಗೂ ದೀರ್ಘಕಾಲಿನ ಸಂಬಂಧವನ್ನು ತೋರ್ಪಡಿಸುತ್ತದೆ ಎಂದು ಶ್ವೇತಭವನ ತಿಳಿಸಿದೆ. ಇದೇ ವೇಳೆ ಈ ಭೇಟಿ ಸಂದರ್ಭ ವ್ಯಾಪಾರ ಒಪ್ಪಂದವೇರ್ಪಡುವ ಸಾಧ್ಯತೆ ಇಲ್ಲ ಎಂದೂ ತಿಳಿಸಿದೆ.

ಫೆಬ್ರವರಿ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios