ಪ್ರತಿಭಟನಾ ನಿರತ ರೈತರನ್ನು ಅನುಚಿತವಾಗಿ ನಡೆಸಿಕೊಂಡ ಆರೋಪ| ಭಾರತದ ವಿರುದ್ಧ ತನಿಖಾ ಆಯೋಗ ರಚನೆಗೆ ಒತ್ತಾಯಿಸುತ್ತಿರುವ ಖಲಿಸ್ತಾನ ಪರ ಸಂಘಟನೆ| ವಿಶ್ವಸಂಸ್ಥೆಗೆ ದೇಣಿಗೆ ನೀಡಿ ದಿಲ್ಲಿ ರೈತ ಹೋರಾಟ ಪರ ಖಲಿಸ್ತಾನ್‌ ಲಾಬಿ!

ಲಂಡನ್(ಮಾ.15)‌: ಪ್ರತಿಭಟನಾ ನಿರತ ರೈತರನ್ನು ಅನುಚಿತವಾಗಿ ನಡೆಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ತನಿಖಾ ಆಯೋಗ ರಚನೆಗೆ ಒತ್ತಾಯಿಸುತ್ತಿರುವ ಖಲಿಸ್ತಾನ ಪರ ಸಂಘಟನೆ- ಸಿಖ್‌ ಫಾರ್‌ ಜಸ್ಟೀಸ್‌ ತನಗೆ 7 ಲಕ್ಷ ರು. ದೇಣಿಗೆ ನೀಡಿದೆ ಎಂಬ ಸಂಗತಿಯನ್ನು ವಿಶ್ವಸಂಸ್ಥೆ ಖಚಿತಪಡಿಸಿದೆ.

ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆಯನ್ನು ಪ್ರತಿನಿಧಿಸುವ ವ್ಯಕ್ತಿಯೊಬ್ಬರಿಂದ ಮಾ.1ರಂದು 7 ಲಕ್ಷ ರು. ದೇಣಿಗೆ ಸ್ವೀಕರಿಸಲಾಗಿತ್ತು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಹೈಕಮಿಷನರ್‌ ಕಚೇರಿಯ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ. ವಿಶ್ವಸಂಸ್ಥೆಯ ನಿಷೇಧಿತ ಪಟ್ಟಿಯಲ್ಲಿ ಇಲ್ಲದೇ ಇರುವ ಯಾವುದೇ ಸಂಘಟನೆಯಿಂದ ದೇಣಿಗೆ ಬಂದರೂ ಅದನ್ನು ವಿಶ್ವಸಂಸ್ಥೆ ಸ್ವೀಕರಿಸುತ್ತದೆ.

ಅದೇ ರೀತಿ ಸಿಖ್‌ ಫಾರ್‌ ಜಸ್ಟೀಸ್‌ ಸಂಘಟನೆಯಿಂದಲೂ ದೇಣಿಗೆ ಸ್ವೀಕರಿಸಿದ್ದೇವೆ. ಆದರೆ, ಭಾರತದ ವಿರುದ್ಧ ವಿಶ್ವ ಸಂಸ್ಥೆಯಿಂದ ತನಿಖಾ ಆಯೋಗ ರಚಿಸುವ ಯಾವುದೇ ಉದ್ದೇಶ ಇಲ್ಲ ಎಂದು ಅವರು ಹೇಳಿದ್ದಾರೆ.