ಉಕ್ರೇನ್‌ ಯೋಧನ ವಿಡಿಯೋ ವೈರಲ್ ಪ್ರೇಮ ನಿವೇದನೆ ಮಾಡಿದ ಯೋಧ

ರಷ್ಯಾದೊಂದಿಗಿನ ಯುದ್ಧದ ನಡುವೆ ಚೆಕ್‌ಪಾಯಿಂಟ್‌ನಲ್ಲಿ ಉಕ್ರೇನ್ ಸೈನಿಕನೊಬ್ಬ ತನ್ನ ಗೆಳತಿಗೆ ಪ್ರಪೋಸ್ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಷ್ಯಾ ಉಕ್ರೇನ್‌ ನಡುವಿನ ಯುದ್ಧಕ್ಕೆ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ. ಜನರ ಸ್ಥಳಾಂತರಕ್ಕಾಗಿ ಈ ಕದನ ವಿರಾಮ ಘೋಷಣೆಯಾಗಿದೆ. ಆದರೆ ರಷ್ಯಾ ದಾಳಿಯಿಂದ ಸಂಪೂರ್ಣ ನರಕವಾಗಿರುವ ಉಕ್ರೇನ್‌ನಲ್ಲಿ ಜನರ ಜೀವನೋತ್ಸಾಹವಿನ್ನೂ ಕುಂದಿಲ್ಲ. 

ಅವರು ನಿರಾಶ್ರಿತ ಶಿಬಿರಗಳಲ್ಲಿ ಬಂಕರ್‌ಗಳಲ್ಲಿ ಪ್ರೇಮ ನಿವೇದನೆ ಮಾಡುತ್ತಾ, ವಿವಾಹವಾಗುತ್ತ ಸಹಜ ಜೀವನದಂತೆ ಬದುಕುತ್ತಿದ್ದಾರೆ. ಉಕ್ರೇನ್‌ ಜನರ ಜೀವನೋತ್ಸಾಹದ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ ಅಂತಹದ್ದೇ ಮತ್ತೊಂದು ವಿಡಿಯೋ ಈಗ ವೈರಲ್‌ ಆಗಿದೆ. ಉಕ್ರೇನ್‌ ಯೋಧನೊರ್ವ ಯುದ್ಧದ ಮಧ್ಯೆ ಸೇನಾ ಸಮವಸ್ತ್ರದಲ್ಲೇ ತನ್ನ ಹುಡುಗಿಗೆ ಪ್ರೇಮ ನಿವೇದನೆ ಮಾಡುತ್ತಿರುವ ವಿಡಿಯೋ ಇದಾಗಿದೆ. 

Russia Ukraine War: ಕದನವಿರಾಮದಿಂದ ತಗ್ಗಿದ ಯುದ್ಧ ಅಬ್ಬರ!

ಕೈವ್ ಸಮೀಪದ ಫಾಸ್ಟೀವ್‌ನಲ್ಲಿ (Fastiv) ಸೋಮವಾರ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ . ಚೆಕ್‌ಪಾಯಿಂಟ್‌ನಲ್ಲಿ ಉಕ್ರೇನಿಯನ್ ಸೈನಿಕರು ಆಕೆಯ ಕಾರನ್ನು ಚೆಕ್‌ ಮಾಡುವಂತೆ ನಟಿಸುತ್ತಾರೆ. ನಾಲ್ವರು ಯೋಧರು ಕಾರಿನ ಮೇಲೆ ಕೈ ಇಟ್ಟುಕೊಂಡು ದಾಖಲೆಗಳನ್ನು ಕೇಳುತ್ತಿರುವಂತೆ ನಟಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಬಳಿಕ ಇವರಲ್ಲಿ ಓರ್ವ ಯೋಧ ಉಂಗುರವನ್ನು ಹಿಡಿದುಕೊಂಡು ಆಕೆಯ ಮುಂದೆ ಮೊಣಕಾಲೂರಿ ಪ್ರೇಮ ನಿವೇದನೆ ಮಾಡುತ್ತಾನೆ.

ಹುಡುಗಿ ಏನಾಗುತ್ತಿದೆ ಇಲ್ಲಿ ಎಂದು ನೊಡುತ್ತಿದ್ದಂತೆ ತಕ್ಷಣ ಇದು ಪ್ರೇಮ ನಿವೇದನೆ (Love Proposal) ಎಂದು ತಿಳಿದ ಆಕೆ ಖುಷಿಯಿಂದ ಕಿರುಚುತ್ತಾಳೆ. ನಂತರ ಯೋಧ ಆಕೆಯ ಬೆರಳಿಗೆ ಉಂಗುರ ಹಾಕುತ್ತಾನೆ. ಬಳಿಕ ಪರಸ್ಪರ ತಬ್ಬಿಕೊಂಡು ಮುತ್ತನಿಡುತ್ತಾರೆ. ಈ ವೇಳೆ ಅವರ ಸ್ನೇಹಿತರು ಜೋರಾಗಿ ಕೂಗಿ ಅವರನ್ನು ಹುರಿದುಂಬಿಸುತ್ತಾರೆ.

500 ಭಾರತೀಯರು ಉಕ್ರೇನ್‌ ಸೇನೆಗೆ ಸೇರ್ಪಡೆಗೆ ಸಜ್ಜು?

ಸಿಬಿಎಸ್ ಮಿಯಾಮಿ ಆಂಕರ್ ಕೆಂಡಿಸ್ ಗಿಬ್ಸನ್ (Kendis Gibson) ಅವರು ಈ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಈಈ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳದಿರುವುದ ಕಷ್ಟ ಎಂದು ಬರೆದಿದ್ದಾರೆ. ಈ ವೀಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ಸುಂದರ ದೃಶ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಯುದ್ಧವಲ್ಲ ಪ್ರೀತಿಯನ್ನು ಹರಡಿ. ಯುದ್ಧದ ಮಧ್ಯೆ ಹೃದಯಸ್ಪರ್ಶಿ ದೃಶ್ಯ,' ಎಂದು ಒಬ್ಬ ಬಳಕೆದಾರ ಬರೆದಿದ್ದಾರೆ.

ಕೆಲದಿನಗಳ ಹಿಂದೆ ಉಕ್ರೇನ್‌ ಜೋಡಿಯೊಂದು ಸೇನಾ ಸಮವಸ್ತ್ರದಲ್ಲೇ ವಿವಾಹವಾಗಿತ್ತು. ಇವರ ವಿವಾಹಕ್ಕೆ ಸೈನಿಕರು ಹಾಡು ಹಾಡುವ ಮೂಲಕ ಪ್ರೋತ್ಸಾಹಿಸಿದರು. ಈ ವೇಳೆ ಒಬ್ಬ ಯೋಧ ತನ್ನ ಹೆಲ್ಮೆಟ್‌ನ್ನೇ ವಧುವಿಗೆ ಕಿರೀಟದಂತೆ ತೊಡಿಸಿದ್ದಾನೆ. (ಪಾಶ್ಚಾತ್ಯ ಸಂಸ್ಕೃತಿಯ ವಿವಾಹದಲ್ಲಿ ಮದುವೆಯಂದು ವಧುವಿಗೆ ಕಿರೀಟ ತೊಡಿಸುವ ಸಂಪ್ರದಾಯವಿದೆ)

22 ವರ್ಷಗಳಿಂದ ಒಟ್ಟಿಗೆ ಇರುವ ಈ ಜೋಡಿ 18 ವರ್ಷದ ಮಗಳನ್ನು ಹೊಂದಿದ್ದು, ಕೈವ್‌ನಲ್ಲಿ(Kyiv) ಮದುವೆಯಾಗುವ ಮೂಲಕ ತಮ್ಮ ಜೀವನಕ್ಕೆ ಹೊಸ ಅರ್ಥ ನೀಡಲು ನಿರ್ಧರಿಸಿದರು. ಕಳೆದ ತಿಂಗಳು ರಷ್ಯಾದೊಂದಿಗೆ ಯುದ್ಧ ಪ್ರಾರಂಭವಾದಾಗ ವಧು ಲೆಸಿಯಾ ಇವಾಶ್ಚೆಂಕೊ (Lesia Ivashchenko) ತನ್ನ ಕೆಲಸವನ್ನು ತೊರೆದು ಮತ್ತು ಕೈವ್‌ನ ಹೊರವಲಯದಲ್ಲಿರುವ ತನ್ನ ಜಿಲ್ಲೆಯನ್ನು ರಕ್ಷಿಸಲು ಪ್ರಾದೇಶಿಕ ರಕ್ಷಣಾ ಪಡೆಗೆ ಸೇರಿಕೊಂಡಿದ್ದರು. ರಷ್ಯಾದ ಆಕ್ರಮಣ ಆರಂಭವಾದಾಗಿನಿಂದ ಭಾನುವಾರ ಅವರ ವಿವಾಹ ನಡೆಯುವವರೆಗೂ ವಧು ಲೆಸಿಯಾ ತನ್ನ ವರ ವ್ಯಾಲೆರಿ ಫೈಲಿಮೊನೊವ್ (Valerii Fylymonov) ಅವರನ್ನು ನೋಡಿರಲಿಲ್ಲ.