* ತಮಿಳುನಾಡಿನ ಯುವಕ ಈಗಾಗಲೇ ಸೇನೆಗೆ ಸೇರ್ಪಡೆ* 500 ಭಾರತೀಯರು ಉಕ್ರೇನ್ ಸೇನೆಗೆ ಸೇರ್ಪಡೆಗೆ ಸಜ್ಜು?* ಇಷ್ಟೊಂದು ಭಾರತೀಯರಿಂದ ಸೇನೆ ಸೇರಲು ಅರ್ಜಿ ಸಲ್ಲಿಕೆ* ಸೇನೆ ಸೇರಲು ಎಲ್ಲರಿಗೂ ಅವಕಾಶ ನೀಡಿರುವ ಜೆಲೆನ್‌ಸ್ಕಿ
ಕೀವ್(ಮಾ.10): ರಷ್ಯಾ ದಾಳಿಗೆ ಪ್ರತಿದಾಳಿ ನಡೆಸಲು ರಚನೆ ಮಾಡಿರುವ ಉಕ್ರೇನ್‌ನ ಅಂತಾರಾಷ್ಟ್ರೀಯ ಸೇನೆಗೆ 500ಕ್ಕೂ ಹೆಚ್ಚು ಭಾರತೀಯರು ಸೇರ್ಪಡೆಯಾಗುವ ಸಾಧ್ಯತೆ ಇದೆ. ಇಷ್ಟೊಂದು ಸಂಖ್ಯೆಯ ಭಾರತೀಯರು ಸೇನೆ ಸೇರಲು ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಯುದ್ಧ ಆರಂಭವಾದ ನಂತರ ಸೈನ್ಯಕ್ಕೆ ಸೇರಲು ಸಾಮಾನ್ಯ ನಾಗರಿಕರಿಗೂ ಅಧ್ಯಕ್ಷ ಜೆಲೆನ್‌ಸ್ಕಿ ಅವಕಾಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಾವಿರಾರು ಉಕ್ರೇನ್ ಮತ್ತು ಇತರ ದೇಶಗಳ ನಾಗರಿಕರು ಸೇನೆಗೆ ಸೇರ್ಪಡೆಯಾಗಿದ್ದಾರೆ. ತಮಿಳುನಾಡಿನ ಸೈನಿಕೇಶ್ ರವಿಚಂದ್ರನ್ ಎಂಬ ಯುವಕ ಈಗಾಗಲೇ ಉಕ್ರೇನ್ ಸೇನೆ ಸೇರಿದ್ದಾರೆ.
ಇಷ್ಟಲ್ಲದೇ 500ಕ್ಕೂ ಹೆಚ್ಚು ಭಾರತೀಯರು ಸೇನೆಗೆ ಸೇರಲು ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ವಯಂ ಸೇವಕರು ಸೇನೆ ಸೇರಲು ಬಯಸಿದರೆ ಅವರಿಗಾಗಿಯೇ ಉಕ್ರೇನ್ ಆಡಳಿತ ವಿಶೇಷ ವೆಬ್‌ಸೈಟ್ ರೂಪಿಸಿದೆ. ಇಲ್ಲಿ ಮಾಹಿತಿಗಳನ್ನು ಭರ್ತಿ ಮಾಡುವ ಮೂಲಕ ಸೈನ್ಯಕ್ಕೆ ಸೇರ್ಪಡೆಯಾಗಬಹುದಾಗಿದೆ.
ಇಲ್ಲಿಯವರೆಗೆ ಸೇನೆಗೆ ಸೇರಲು 3 ಸಾವಿರ ಅಮೆರಿಕನ್ನರು ಅರ್ಜಿ ಸಲ್ಲಿಸಿದ್ದಾರೆ. ಸಾವಿರಾರು ವಿದೇಶಿಗರು ಉಕ್ರೇನ್ ಪರವಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಭಾರತ ಸೇನೆಗೆ ಆಯ್ಕೆಯಾಗದ್ದಕ್ಕೆ ಉಕ್ರೇನ್ ಯೋಧನಾದ ತ.ನಾಡು ಯುವಕ!
ಆಪರೇಶನ್ ಗಂಗಾದಡಿಯಲ್ಲಿ ಯುದ್ಧಪೀಡಿತ ಉಕ್ರೇನಿನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರನ್ನು ಸರ್ಕಾರ ಮರಳಿ ದೇಶಕ್ಕೆ ಕರೆ ತರುತ್ತಿರುವಾಗ ತಮಿಳುನಾಡಿನ 21 ವರ್ಷದ ಯುವಕನೊಬ್ಬ ಉಕ್ರೇನಿನ ಅರೆ ಸೇನಾಪಡೆಗೆ ಸೇರಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಯುದ್ಧ ನಡೆಯುತ್ತಿರುವುದರಿಂದ ಉಕ್ರೇನ್ ಸರ್ಕಾರ ಅಲ್ಲಿನ ಸಾಮಾನ್ಯ ಜನರಿಗೂ ಸೇನೆ ಸೇರಲು ಅವಕಾಶ ನೀಡಿದೆ.
ಕೊಯಮತ್ತೂರು ಮೂಲದ ಸೈನಿಕೇಶ್ ರವಿಚಂದ್ರನ್ 2018ರಲ್ಲಿ ಉಕ್ರೇನಿಗೆ ಏರೋನಾಟಿಕ್ಸ್ ವ್ಯಾಸಂಗಕ್ಕೆ ತೆರಳಿದ್ದ. ಖಾರ್ಕೀವ್‌ನಲ್ಲಿರುವ ರಾಷ್ಟ್ರೀಯ ಏರೋಸ್ಪೇಸ್ ವಿಶ್ವವಿದ್ಯಾಲಯದಲ್ಲಿ ಈತನು ವಿದ್ಯಾಭ್ಯಾಸ ಮಾಡುತ್ತಿದ್ದ. ಬಾಲ್ಯದಿಂದಲೇ ಸೈನ್ಯ ಸೇರುವ ಆಸೆಯನ್ನು ಹೊಂದಿದ ಸೈನಿಕೇಶ್, ಭಾರತೀಯ ಸೇನೆಯನ್ನು ಸೇರಲು ಬಯಸಿದ್ದರೂ ಕಡಿಮೆ ಎತ್ತರವಿರುವ ಕಾರಣ ಆಯ್ಕೆಯಾಗಿರಲಿಲ್ಲ. ಹೀಗಾಗಿ ರಷ್ಯಾ ಆಕ್ರಮಣ ನಡೆಸುತ್ತಿರುವಾಗ ದೇಶಕ್ಕೆ ಮರಳಲೂ ಅವಕಾಶವಿದ್ದರೂ ಅದನ್ನು ತ್ಯಜಿಸಿ ಉಕ್ರೇನಿನ ಸೇನೆಯಲ್ಲೇ ಸೇವೆ ಸಲ್ಲಿಸಲು ನಿರ್ಧರಿಸಿದ್ದಾನೆ ಎಂದು ಭಾರತದ ಗುಪ್ತಚರ ಸಂಸ್ಥೆಗಳು ನಡೆಸಿದ ವಿಚಾರಣೆಯಲ್ಲಿ ತಿಳಿದುಬಂದಿದೆ. ಈ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ, ಕೊಯಮತ್ತೂರಿನ ಆತನ ಮನೆಗೆ ಗುಪ್ತಚರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಹಲವು ಯೋಧರ ಫೋಟೋಗಳು ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ.
‘ಸೈನಿಕೇಶ್ ದೇಶಕ್ಕೆ ಮರಳದೇ ಉಕ್ರೇನಿನ ಸೇವೆಯಲ್ಲೇ ಸೇವೆ ಸಲ್ಲಿಸುವುದಾಗಿ ಹೇಳಿದ್ದಾನೆ. ಆತನು ಸುರಕ್ಷಿತವಾಗಿದ್ದು ನಮ್ಮೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾನೆ’ ಎಂದು ಕೊಯಮತ್ತೂರಿನಲ್ಲಿರುವ ಈತನ ಪಾಲಕರು ಹೇಳಿದ್ದಾರೆ.
