Ukraine Russia Conflict: ನೆರೆದೇಶಕ್ಕೆ ಸೈನಿಕರ ನುಗ್ಗಿಸಲು ರಷ್ಯಾ ಆದೇಶ: 2ನೇ ಮಹಾಯುದ್ಧದ ಬಳಿಕ ಘೋರ ಸಮರ?
*ನೆರೆದೇಶಕ್ಕೆ ಸೈನಿಕರ ನುಗ್ಗಿಸಲು ರಷ್ಯಾ ಆದೇಶ
*ಯಾರಿಗೂ, ಯಾವುದಕ್ಕೂ ಹೆದರಲ್ಲ: ಉಕ್ರೇನ್
*2ನೇ ಮಹಾಯುದ್ಧದ ಬಳಿಕ ಘೋರ ಸಮರ?
ಮಾಸ್ಕೋ (ಫೆ. 23) : ಜಗತ್ತು ಆತಂಕದಿಂದ ಎದುರು ನೋಡುತ್ತಿದ್ದ ಕ್ಷಣ ಕೊನೆಗೂ ಸನ್ನಿಹಿತವಾಗಿದ್ದು, ಉಕ್ರೇನ್‌ಗೆ ಸೇನೆ ನುಗ್ಗಿಸಲು ರಷ್ಯಾ ಆದೇಶ ನೀಡಿದೆ. ಇದರೊಂದಿಗೆ ಉಭಯ ದೇಶಗಳ ನಡುವೆ ಬಹುನಿರೀಕ್ಷಿತ ಯುದ್ಧ ಬಹುತೇಕ ಆರಂಭವಾಗಿದೆ. ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪೂರ್ವ ಉಕ್ರೇನ್‌ಗೆ ಸೇನೆಯನ್ನು ಕಳುಹಿಸುವ ಆದೇಶಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿ ಹಾಕಿದ್ದಾರೆ. ಅದರ ಬೆನ್ನಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬಹಳ ಅಪರೂಪಕ್ಕೆ ರಾತ್ರೋರಾತ್ರಿ ತುರ್ತು ಸಭೆ ನಡೆಸಿದೆ. ಇನ್ನೊಂದೆಡೆ, ಉಕ್ರೇನ್ ಅಧ್ಯಕ್ಷ ವೋಲೋದಿಮಿರ್ ಜೆಲೆನ್‌ಸ್ಕಿ ರಷ್ಯಾ ವಿರುದ್ಧ ಗುಟುರು ಹಾಕಿದ್ದು, ‘ನಾವು ಯಾರಿಗೂ, ಯಾವುದಕ್ಕೂ ಹೆದರುವುದಿಲ್ಲ’ ಎಂದಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ರಷ್ಯಾ ಮತ್ತು ಉಕ್ರೇನ್ ನಡುವೆ ಈಗಾಗಲೇ ಯುದ್ಧ ಆರಂಭವಾಗಿರುವ ಅಥವಾ ಯಾವುದೇ ಕ್ಷಣದಲ್ಲಿ ಆರಂಭವಾಗುವುದರ ಸೂಚನೆಗಳು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವಿಶ್ಲೇಷಿಸಿವೆ. ಬ್ರಿಟನ್ ಕೂಡ ಇದನ್ನೇ ಹೇಳಿದ್ದು, ಯುದ್ಧ ಆರಂಭವಾದಂತಿದೆ ಎಂದಿದೆ.
ಇದನ್ನೂ ಓದಿ: Russia Ukraine Crisis: ಬಿಕ್ಕಟ್ಟಿನ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಪ್ರಧಾನಿ ಮೋದಿ
ರಷ್ಯಾ-ಉಕ್ರೇನ್ ನಡುವೆ ಯುದ್ಧ ಆರಂಭವಾದರೆ ಎರಡನೇ ಮಹಾಯುದ್ಧದ ನಂತರದ ಅತಿದೊಡ್ಡ ಯುದ್ಧವಾಗಲಿದೆ. ಅದರಿಂದ ತೈಲ ಬೆಲೆ ತೀವ್ರ ದುಬಾರಿಯಾಗುವುದೂ ಸೇರಿದಂತೆ ಜಾಗತಿಕ ಆರ್ಥಿಕತೆಯ ಮೇಲೆ ಬಲವಾದ ಹೊಡೆತ ಬೀಳುವ ಸಾಧ್ಯತೆಯಿದೆ.
ಆದೇಶಕ್ಕೆ ಪುಟಿನ್ ಸಹಿ: ಪ್ರತ್ಯೇಕತಾವಾದಿಗಳ ಕಪಿಮುಷ್ಟಿಯಲ್ಲಿರುವ ಪೂರ್ವ ಉಕ್ರೇನ್‌ನ ಭಾಗಗಳನ್ನು ಸ್ವತಂತ್ರವೆಂದು ಗುರುತಿಸುವ ಹಾಗೂ ಅಲ್ಲಿನ ಸ್ವಾಯತ್ತೆ ರಕ್ಷಣೆಗೆ ಮಿಲಿಟರಿ ಸೇರಿದಂತೆ ಎಲ್ಲಾ ನೆರವು ನೀಡುವ ಮೂಲಕ ಶಾಂತಿ ಕಾಪಾಡುವ ಆದೇಶಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಹಿ ಹಾಕಿದ್ದಾರೆ. ಇದು ಶೀಘ್ರದಲ್ಲೇ ಸಂಸತ್ತಿನಲ್ಲಿ ಮಂಡನೆಯಾಗಿ ಕಾಯ್ದೆಯಾಗಲಿದೆ.
ಈ ಆದೇಶದಲ್ಲಿ ಸೇನೆಯ ಮೂಲಕ ದಾಳಿ ನಡೆಸುವ ಅಥವಾ ಸೇನೆಯನ್ನು ಕಳುಹಿಸುವ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲವಾದರೂ ಪೂರ್ವ ಉಕ್ರೇನ್‌ನತ್ತ ಈಗಾಗಲೇ ಮಿಲಿಟರಿ ವಾಹನಗಳು ನುಗ್ಗುತ್ತಿರುವುದು ಕಂಡುಬಂದಿದೆ ಎಂದು ಮಾಧ್ಯಮ ವರದಿಗಳು ಖಚಿತಪಡಿಸಿವೆ.
ಇದನ್ನೂ ಓದಿ: Russia Ukraine Crisis : ರಷ್ಯಾದೊಂದಿಗೆ ಮಾತುಕತೆಗೆ ಮುಂದಾದ ಅಮೆರಿಕ.. ಬಟ್ ಒನ್ ಕಂಡಿಶನ್!
ಪಾಶ್ಚಾತ್ಯ ರಾಷ್ಟ್ರಗಳ ಆಕ್ರೋಶ: ರಷ್ಯಾದ ನಡೆಗೆ ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಜಾಗತಿಕ ಶಿಸ್ತನ್ನು ರಷ್ಯಾ ಮೀರಿದೆ ಎಂದು ಅನೇಕ ಪಾಶ್ಚಾತ್ಯ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಉಕ್ರೇನ್, ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳ ಮನವಿಯ ಮೇರೆಗೆ ಸೋಮವಾರ ತಡರಾತ್ರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ನಡೆಸಿ ಮುಂದಿನ ಕ್ರಮಗಳ ಕುರಿತು ಚರ್ಚಿಸಿದೆ. ರಷ್ಯಾದ ಮೇಲೆ ಅಥವಾ ರಷ್ಯಾ ಬೆಂಬಲಿತ ಉಕ್ರೇನ್‌ನ ಪೂರ್ವ ಪ್ರದೇಶಗಳ ಮೇಲೆ ಈ ಅಮೆರಿಕ, ಬ್ರಿಟನ್ ಸೇರಿ ಪಾಶ್ಚಾತ್ಯ ರಾಷ್ಟ್ರಗಳು ನಿರ್ಬಂಧಗಳನ್ನು ಘೋಷಣೆ ಮಾಡಿವೆ.
ರಷ್ಯಾ ವಿರುದ್ಧ ಉಕ್ರೇನ್ ಗುಡುಗು: ಪೂರ್ವ ಉಕ್ರೇನ್‌ಗೆ ಸೇನೆ ನುಗ್ಗಿಸುವ ಆದೇಶಕ್ಕೆ ರಷ್ಯಾ ಸಹಿ ಹಾಕುತ್ತಿದ್ದಂತೆ ರಷ್ಯಾ ವಿರುದ್ಧ ಬಹಿರಂಗವಾಗಿ ಗುಡುಗಿರುವ ಉಕ್ರೇನ್‌ನ ಅಧ್ಯಕ್ಷ ವೋಲೋದಿಮಿರ್ ಜೆಲೆನ್‌ಸ್ಕಿ, ‘ನಾವು ಯಾರಿಗೂ, ಯಾವುದರ ಬಗ್ಗೆಯೂ ಹೆದರುವುದಿಲ್ಲ. ನಾವು ಯಾರಿಗೂ ಏನನ್ನೂ ಕೊಡಬೇಕಾಗಿಲ್ಲ. ಮತ್ತು ನಾವು ಯಾರಿಗೂ ಏನನ್ನೂ ಕೊಡುವುದಿಲ್ಲ’ ಎಂದು ತಮ್ಮ ದೇಶದ ಪ್ರಜೆಗಳನ್ನು ಉದ್ದೇಶಿಸಿ ಹೇಳಿದ್ದಾರೆ.
ರಷ್ಯಾ ಮೇಲೆ ಅಮೆರಿಕ, ಬ್ರಿಟನ್ನಿಂದ ನಿರ್ಬಂಧ: ಉಕ್ರೇನ್ ಮೇಲೆ ಯುದ್ಧ ಸಾರುತ್ತಿರುವ ರಷ್ಯಾದ ಮೇಲೆ ಅಮೆರಿಕ, ಬ್ರಿಟನ್ ಕೆಲ ನಿರ್ಬಂಧ ಹೇರಿವೆ. ಉಕ್ರೇನ್‌ನ ರಷ್ಯಾ ಬೆಂಬಲಿತ ಪ್ರದೇಶಗಳಲ್ಲಿ ವ್ಯಾಪಾರ, ಹೂಡಿಕೆ ಸ್ಥಗಿತಕ್ಕೆ ಅಮೆರಿಕ ನಿರ್ಧರಿಸಿದ್ದರೆ, ರಷ್ಯಾದ 5 ಬ್ಯಾಂಕ್, 3 ಕೋಟ್ಯಧಿಪತಿಗಳಿಗೆ ಬ್ರಿಟನ್ ಆರ್ಥಿಕ ನಿರ್ಬಂಧ ವಿಧಿಸಿದೆ.
ಭಾರತೀಯರ ರಕ್ಷಣೆಗೆ 3 ವಿಮಾನಗಳ ವ್ಯವಸ್ಥೆ: ಉಕ್ರೇನ್‌ನಲ್ಲಿರುವ ತನ್ನ ಪ್ರಜೆಗಳ ರಕ್ಷಣೆಗೆ ಭಾರತ ಮುಂದಾಗಿದೆ. ಆ ದೇಶದಲ್ಲಿರುವ ಭಾರತೀಯರನ್ನು ಕರೆತರಲು ಏರ್ ಇಂಡಿಯಾದ 3 ವಿಶೇಷ ವಿಮಾನಗಳನ್ನು ನಿಯೋಜನೆ ಮಾಡಿದೆ. ಆದಷ್ಟುಬೇಗ ಉಕ್ರೇನ್ ತೊರೆಯಲು ಪ್ರಜೆಗಳಿಗೆ ಸಲಹೆ ಮಾಡಿದೆ.