ರಷ್ಯಾ ಮತ್ತು ಉಕ್ರೇನ್ ನಡುವೆ ಸಮರ ಮುಂದುವರೆದಿದ್ದು, ಭಾನುವಾರ ಉಕ್ರೇನ್ ಮೇಲೆ ರಷ್ಯಾ 477 ಡ್ರೋನ್ ಸೇರಿದಂತೆ 537 ವೈಮಾನಿಕ ಸಾಧನಗಳನ್ನು ಹಾರಿಸಿ 3 ವರ್ಷಗಳಲ್ಲೇ ಘನಘೋರ ದಾಳಿ ಮಾಡಿದೆ. ಇದರ ಮಧ್ಯೆಯೇ ಉಕ್ರೇನ್‌ಗೆ ಅಮೆರಿಕ ನೀಡಿದ್ದ ಎಫ್ -16 ಸೂಪರ್‌ನಿಕ್ ಯುದ್ಧ ವಿಮಾನ ಹೊಡೆದುರುಳಿಸಿದೆ
ಕೀವ್: ರಷ್ಯಾ ಮತ್ತು ಉಕ್ರೇನ್ ನಡುವೆ ಸಮರ ಮುಂದುವರೆದಿದ್ದು, ಭಾನುವಾರ ಉಕ್ರೇನ್ ಮೇಲೆ ರಷ್ಯಾ 477 ಡ್ರೋನ್ ಸೇರಿದಂತೆ 537 ವೈಮಾನಿಕ ಸಾಧನಗಳನ್ನು ಹಾರಿಸಿ 3 ವರ್ಷಗಳಲ್ಲೇ ಘನಘೋರ ದಾಳಿ ಮಾಡಿದೆ. ಇದರ ಮಧ್ಯೆಯೇ ಉಕ್ರೇನ್‌ಗೆ ಅಮೆರಿಕ ನೀಡಿದ್ದ ಎಫ್ -16 ಸೂಪರ್‌ನಿಕ್ ಯುದ್ಧ ವಿಮಾನ ಹೊಡೆದುರುಳಿಸಿದೆ ಹಾಗೂ ಅದರಲ್ಲಿದ್ದ ಪೈಲಟ್‌ನನ್ನು ಹತ್ಯೆ ಮಾಡಿದೆ.
ಯುದ್ಧದಲ್ಲಿ ಇದು ಉಕ್ರೇನ್‌ನ ಎಫ್-16 ಯುದ್ಧ ವಿಮಾನ ಧ್ವಂಸ ಇದೇ ಮೊದಲು. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ಶಾಂತಿ ಮಾತುಕತೆಯ ಪ್ರಸ್ತಾಪ ನಡೆಯುತ್ತಿರುವ ನಡುವೆಯೇ ದಾಳಿ ನಡೆದಿದೆ.
ಈ ಬಗ್ಗೆ ಉಕ್ರೇನ್ ವಾಯುಪಡೆಯ ಸಂವಹನ ವಿಭಾಗದ ಮುಖ್ಯಸ್ಥ ಯೂರಿ ಇಹ್ನಾತ್ ಪ್ರತಿಕ್ರಿಯಿಸಿದ್ದು, ‘ಇದುವರೆಗಿನ ಯುದ್ಧದಲ್ಲಿ ರಷ್ಯಾ ಅತಿದೊಡ್ಡ ದಾಳಿ ನಡೆಸಿದೆ. ರಾತ್ರೋರಾತ್ರಿ ಜನವಸತಿ, ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು 477 ಡ್ರೋನ್ , 60 ಕ್ಷಿಪಣಿ ಸೇರಿದಂತೆ 537 ವೈಮಾನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಉಕ್ರೇನ್ ಮೇಲೆ ದಾಳಿ ನಡೆಸಿದೆ. ಈ ಪೈಕಿ 249 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. 226 ಡ್ರೋನ್‌ಗಳು ಎಲೆಕ್ಟ್ರಾನಿಕ್ ಜಾಮ್‌ನಿಂದಾಗಿ ನಾಪತ್ತೆಯಾಗಿದೆ. ದಾಳಿಯಲ್ಲಿ ನಮ್ಮ ಒಬ್ಬ ನಾಗರಿಕ ಮಾತ್ರ ಸಾವನ್ನಪ್ಪಿದ್ದಾನೆ’ ಎಂದಿದ್ದಾರೆ.
ನೆಲದಾಳದಿಂದಲೇ ಸೇನೆ ಓಡಾಟಕ್ಕೆ ಅತ್ಯಗತ್ಯವಾಗಿದ್ದ ರಷ್ಯಾ ಸೇತುವೆ ಸ್ಫೋಟಿಸಿದ ಉಕ್ರೇನ್
ಮಾಸ್ಕೋ: ಎರಡು ದಿನಗಳ ಹಿಂದಷ್ಟೇ ರಷ್ಯಾದೊಳಗೆ ತನ್ನ ಲಾರಿಗಳನ್ನು ರಹಸ್ಯವಾಗಿ ಸಾಗಿಸಿ ಬಳಿಕ ಅದರೊಳಗಿಂದ ಡ್ರೋನ್ ಹಾರಿಸಿ ರಷ್ಯಾದ 40 ಯುದ್ಧ ವಿಮಾನ ಧ್ವಂಸಗೊಳಿಸಿದ್ದ ಉಕ್ರೇನ್, ಇದೀಗ ನೆಲದಾಳದಿಂದಲೇ ದಾಳಿ ನಡೆಸಿ ರಷ್ಯಾದ ಕ್ರೆಮ್ಲಿನ್ ಸೇತುವೆಯನ್ನು ಸ್ಫೋಟಿಸಿದೆ.
11000 ಕೆ.ಜಿ.ಯಷ್ಟು ಸ್ಫೋಟಕಗಳನ್ನು ಬಳಸಿ ಈ ಸೇತುವೆಯನ್ನು ಸ್ಫೋಟಿಸಲಾಗಿದೆ. 2014ರಲ್ಲಿ ಉಕ್ರೇನ್‌ನಿಂದ ವಶಪಡಿಸಿಕೊಳ್ಳಲಾದ ಕ್ರೈಮಿಯಾದೊಂದಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯ ಕಂಬಗಳಿಗೆ, ಮಂಗಳವಾರ ಬೆಳಗ್ಗೆ ಸಂಭವಿಸಿದ ಸ್ಫೋಟದಿಂದ ಭಾರೀ ಹಾನಿಯಾಗಿದ್ದು, ಸೇತುವೆ ಕುಸಿದು ಬಿದ್ದಿದೆ. ಕೆರ್ಚ್ ಜಲಸಂಧಿಯ ಮೇಲೆ ಹಾದು ಹೋಗುವ ಈ ಸೇತುವೆ, ಸೇನೆ ಮತ್ತು ನಾಗರಿಕೆ ಓಡಾಟಕ್ಕೆ ಅತ್ಯವಶ್ಯಕವಾಗಿತ್ತು.
ಈ ಬಗ್ಗೆ ಉಕ್ರೇನ್‌ನ ಭದ್ರತಾ ಸಂಸ್ಥೆ ಮಾಹಿತಿ ನೀಡಿದ್ದು, ‘ಈ ದಾಳಿ ನಡೆಸಲು ಹಲವು ತಿಂಗಳುಗಳಿಂದ ಯೋಜನೆ ರೂಪಿಸಲಾಗುತ್ತಿತ್ತು’ ಎಂದಿದೆ. ಜತೆಗೆ, ಸ್ಫೋಟದ ವಿಡಿಯೋವನ್ನೂ ಬಿಡುಗಡೆ ಮಾಡಿದೆ.
ಕೆಲ ದಿನಗಳ ಹಿಂದಷ್ಟೇ ರಷ್ಯಾದ 2 ಸೇತುವೆಗಳು ಕುಸಿದು, ರೈಲುಗಳು ಕೆಳಗುರುಳಿ ಜನರು ಪ್ರಾಣ ಕಳೆದುಕೊಂಡಿದ್ದರು. ಈ ಸ್ಫೋಟವನ್ನೂ ಉಕ್ರೇನ್ ನಡೆಸಿದ್ದು ಎಂದು ರಷ್ಯಾ ಆರೋಪಿಸಿತ್ತು.
