ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಇದೀಗ ಭೀಕರ ಸ್ವರೂಪ ಪಡೆದುಕೊಂಡಿದ್ದು, ಎರಡೂ ದೇಶಗಳು ಭಾನುವಾರ ಪರಸ್ಪರ ಭಾರೀ ಪ್ರಮಾಣದ ದಾಳಿ-ಪ್ರತಿದಾಳಿ ನಡೆಸಿವೆ.

ಕೀವ್/ ಮಾಸ್ಕೋ (ಜೂ.02): ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಇದೀಗ ಭೀಕರ ಸ್ವರೂಪ ಪಡೆದುಕೊಂಡಿದ್ದು, ಎರಡೂ ದೇಶಗಳು ಭಾನುವಾರ ಪರಸ್ಪರ ಭಾರೀ ಪ್ರಮಾಣದ ದಾಳಿ-ಪ್ರತಿದಾಳಿ ನಡೆಸಿವೆ. ಉಕ್ರೇನ್ ಮೇಲೆ ರಷ್ಯಾ ನಡೆಸಿದ ಈವರೆಗಿನ ಅತಿ ಭೀಕರ ವೈಮಾನಿಕ ದಾಳಿಯಲ್ಲಿ 12 ಸೈನಿಕರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಉಕ್ರೇನ್, ರಷ್ಯಾ ವಾಯುನೆಲೆಯಲ್ಲಿನ 40 ಯುದ್ಧ ವಿಮಾನಗಳನ್ನು ಧ್ವಂಸ ಮಾಡಿದೆ. ‘ಉಕ್ರೇನ್‌ ಮೇಲೆ ರಷ್ಯಾ 472 ಡ್ರೋನ್‌ ಹಾಗೂ 7 ಕ್ಷಿಪಣಿ ಬಳಸಿ ದಾಳಿ ಮಾಡಿದೆ. 3 ವರ್ಷದ ಯುದ್ಧದಲ್ಲಿ ನಮ್ಮ ಮೇಲೆ ಇಷ್ಟೊಂದು ಭೀಕರ ದಾಳಿ ಇದೇ ಮೊದಲು’ ಎಂದು ಉಕ್ರೇನ್ ವಾಯುಪಡೆ ಸಂಪರ್ಕಾಧಿಕಾರಿ ಯೂರಿ ಇಗ್ನಟ್‌ ಹೇಳಿದ್ದಾರೆ.

ಭಾರಿ ದಾಳಿ - ಪ್ರತಿದಾಳಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್ಸ್ಕಿ, ಇಸ್ತಾನ್‌ಬುಲ್‌ನಲ್ಲಿ ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧ ಎಂದ ಬೆನ್ನಲ್ಲೇ ಸಂಘರ್ಷ ಮತ್ತಷ್ಟು ಕಾವು ಪಡೆದುಕೊಂಡಿದೆ. ರಷ್ಯಾ ಭಾನುವಾರ ಉಕ್ರೇನ್‌ನ ಸೇನಾ ತರಬೇತಿ ಕೇಂದ್ರದ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ನಡೆಸಿದೆ. ಈ ದಾಳಿಯಲ್ಲಿ 12 ಉಕ್ರೇನಿ ಯೋಧರು ಬಲಿಯಾಗಿದ್ದು, ಸುಮಾರು 60ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಈ ನಡುವೆ ಉಕ್ರೇನ್‌ನ ಉತ್ತರ ಸುಮಿ ಪ್ರದೇಶದ ಒಲೆಕ್ಸಿವಾ ಗ್ರಾಮದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ.

ಮತ್ತೊಂದೆಡೆ ಉಕ್ರೇನ್ ಕೂಡ ರಷ್ಯಾದ ಮೇಲೆ ದಾಳಿ ನಡೆಸಿದ್ದು, ವಾಯುನೆಲೆ ಮೇಲೆ ನಡೆದ ಬೃಹತ್‌ ಡ್ರೋನ್ ದಾಳಿಯಲ್ಲಿ ಉಕ್ರೇನ್‌ ರಷ್ಯಾದ 40 ವಿಮಾನಗಳನ್ನು ನಾಶ ಮಾಡಿದೆ ಎಂದು ವರದಿಯಾಗಿದೆ. ರಷ್ಯಾದ ಇರ್ಕುಟ್ಸ್ಕ್ ಪ್ರದೇಶದಲ್ಲಿರುವ ಮಿಲಿಟರಿ ಘಟಕದ ಮೇಲೆ ದಾಳಿ ಸಂಭವಿಸಿದೆ. ವಿಮಾನಗಳು ಹಾಗೂ ಉಕ್ರೇನ್ ಮೇಲಿನ ದಾಳಿಗೆ ಬಳಸಲು ಯೋಜಿಸಿದ್ದ ಕ್ಷಿಪಣಿಗಳನ್ನು ನಾಶ ಮಾಡಲಾಗಿದೆ ಎಂದು ಉಕ್ರೇನ್ ಹೇಳಿದೆ.

-ಉಕ್ರೇನ್‌ ಮೇಲೆ 472 ಡ್ರೋನ್‌, 7 ಕ್ಷಿಪಣಿ ಬಳಸಿ ಭೀಕರ ವೈಮಾನಿಕ ದಾಳಿ ನಡೆಸಿದ ರಷ್ಯಾ
-ಇದು ಯುದ್ಧ ಆರಂಭವಾದ ಬಳಿಕದ 3 ವರ್ಷದಲ್ಲಿ ರಷ್ಯಾ ನಡೆಸಿದ ಭಾರೀ ದಾಳಿ: ಉಕ್ರೇನ್‌
-ಉಕ್ರೇನ್‌ನಿಂದಲೂ ರಷ್ಯಾಗೆ ತಿರುಗೇಟು. ಉಕ್ರೇನ್‌ನ ವೈಮಾನಿಕ ದಾಳಿಗೆ 40 ವಿಮಾನ ಧ್ವಂಸ
-ಉಭಯ ದೇಶಗಳ ನಡುವೆ ಟರ್ಕಿಯಲ್ಲಿ ಸಂಧಾನದ ಯತ್ನದ ಹೊತ್ತಿನಲ್ಲೇ ಪರಸ್ಪರ ಭಾರೀ ದಾಳಿ