ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ ಅವರನ್ನು ಅಮೆರಿಕಕ್ಕೆ ಗಡಿಪಾರು ಮಾಡುವಂತೆ ಕೋರಿದ್ದ ಅರ್ಜಿ ತಿರಸ್ಕಾರ| ಗಡಿಪಾರು ಮಾಡಿದರೆ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ
ಲಂಡನ್(ಜ.05): ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ ಅವರನ್ನು ಅಮೆರಿಕಕ್ಕೆ ಗಡಿಪಾರು ಮಾಡುವಂತೆ ಕೋರಿದ್ದ ಅರ್ಜಿಯನ್ನು ಬ್ರಿಟನ್‌ನ ನ್ಯಾಯಾಲಯವೊಂದು ತಿರಸ್ಕರಿಸಿದೆ. ಒಂದು ವೇಳೆ ಅಸಾಂಜೆ ಅವರನ್ನು ಗಡಿಪಾರು ಮಾಡಿದರೆ ಅವರು ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಹೇಳಿದೆ. ಈ ನಡುವೆ ಈ ತೀರ್ಪನ್ನು ಮೇಲಿನ ಹಂತದ ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಅಮೆರಿಕ ಸರ್ಕಾರ ಹೇಳಿದೆ.
ಆಸ್ಪ್ರೇಲಿಯಾ ಮೂಲದ ಅಸಾಂಜೆ ಅಮೆರಿಕ ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುವ ವೇಳೆ ಅಮೆರಿಕ ಮಿಲಿಟರಿ ಕುರಿತ ರಹಸ್ಯ ದಾಖಲೆಗಳನ್ನು ಸಂಗ್ರಹಿಸಿ, ಅದನ್ನು ತಮ್ಮ ವಿಕಿಲೀಕ್ಸ್ ತಾಣದ ಮೂಲಕ ಬಿಡುಗಡೆ ಮಾಡಿದ್ದರು. ಅದರಲ್ಲಿ ಅಮೆರಿಕ ಸೇನೆ ಆಷ್ಘಾನಿಸ್ತಾನ ಮತ್ತು ಇರಾಕ್‌ನಲ್ಲಿ ನಡೆಸಿದ ದೌರ್ಜನ್ಯಗಳ ಕುರಿತ ರಹಸ್ಯ ಮಾಹಿತಿ ಇದ್ದವು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಮೆರಿಕ ಸರ್ಕಾರ ಅಸಾಂಜೆ ವಿರುದ್ಧ ದೇಶದ್ರೋಹದ 17 ಕೇಸು ದಾಖಲಿಸಿತ್ತು. ಈ ಆರೋಪ ಸಾಬೀತಾದರೆ ಅವರು 175 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿತ್ತು. ಆದರೆ ಬಂಧನದ ಭೀತಿಯಿಂದ ಅಸಾಂಜೆ ಬ್ರಿಟನ್‌ನಲ್ಲಿ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಗಡಿಪಾರಿಗೆ ಅಮೆರಿಕ ಸರ್ಕಾರ ಕೋರಿತ್ತು.
ಆದರೆ ಅಸಾಂಜೆ ಓರ್ವ ಪತ್ರಕರ್ತನಾಗಿ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡುವ ವಾಕ್ ಸ್ವಾತಂತ್ರ್ಯ ಹೊಂದಿದ್ದಾರೆ. ಅವರಿಗೆ ಈ ವಿಷಯದಲ್ಲಿ ವಿನಾಯಿತಿ ಇದೆ ಎಂದು ಅವರ ವಕೀಲರು ವಾದಿಸಿದ್ದರು. ಆದರೆ ಈ ಆರೋಪವನ್ನು ನ್ಯಾಯಾಲಯ ತಿರಸ್ಕರಿಸಿತ್ತಾದರೂ, ಅಸಾಂಜೆ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದಾರೆ. ಅವರನ್ನು ಗಡಿಪಾರು ಮಾಡಿದರೆ ಅವರು ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಗಡಿಪಾರು ಮಾಡುವುದು ಅವರ ಮೇಲಿನ ದೌರ್ಜನ್ಯವಾಗಲಿದೆ ಎಂದು ಹೇಳಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 5, 2021, 1:21 PM IST