ಕೊರೋನಾ ಲಾಕ್‌ಡೌನ್‌ ವೇಳೆ ಇಡೀ ಬ್ರಿಟನ್‌ ಸ್ತಬ್ಧವಾಗಿದ್ದಾಗ ಪ್ರಧಾನಿ ಬೋರಿಸ್‌ ಜಾನ್ಸನ್‌ ತಮ್ಮ ಅಧಿಕೃತ ನಿವಾಸದಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಸಿದ ಸಂಗತಿ ದೊಡ್ಡ ವಿವಾದ ಹುಟ್ಟುಹಾಕಿರುವಾಗಲೇ ಆ ಪಾರ್ಟಿ ನಡೆಯುತ್ತಿದ್ದಾಗ ತಾನೂ ಅಲ್ಲಿಗೆ ಹೋಗಿದ್ದೆ ಎಂದು ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಾಕ್‌ ಒಪ್ಪಿಕೊಂಡಿದ್ದಾರೆ.

ಲಂಡನ್‌ (ಫೆ.07): ಕೊರೋನಾ ಲಾಕ್‌ಡೌನ್‌ (Corona Lockdown) ವೇಳೆ ಇಡೀ ಬ್ರಿಟನ್‌ (Britain) ಸ್ತಬ್ಧವಾಗಿದ್ದಾಗ ಪ್ರಧಾನಿ ಬೋರಿಸ್‌ ಜಾನ್ಸನ್‌ (Boris Johnson) ತಮ್ಮ ಅಧಿಕೃತ ನಿವಾಸದಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಸಿದ ಸಂಗತಿ ದೊಡ್ಡ ವಿವಾದ ಹುಟ್ಟುಹಾಕಿರುವಾಗಲೇ ಆ ಪಾರ್ಟಿ ನಡೆಯುತ್ತಿದ್ದಾಗ ತಾನೂ ಅಲ್ಲಿಗೆ ಹೋಗಿದ್ದೆ ಎಂದು ಭಾರತೀಯ ಮೂಲದ ಹಣಕಾಸು ಸಚಿವ ರಿಷಿ ಸುನಾಕ್‌ (Rishi Sunak) ಒಪ್ಪಿಕೊಂಡಿದ್ದಾರೆ.

ಆದರೆ, ನಾನು ಅಲ್ಲಿಗೆ ಕೋವಿಡ್‌ ಬಗ್ಗೆ ಚರ್ಚಿಸಲು ಹೋಗಿದ್ದೆ ಎಂದು ಅವರು ಹೇಳಿದ್ದು, ಪ್ರಧಾನಿಯ ನಂ.10 ಡೌನಿಂಗ್‌ ಸ್ಟ್ರೀಟ್‌ ಮನೆಯ ಕ್ಯಾಬಿನೆಟ್‌ ರೂಮ್‌ನಲ್ಲಿ ಅಂದು ಏನು ನಡೆಯಿತು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಇಸ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ (NR Narayana Murthy) ಅವರ ಅಳಿಯನಾಗಿರುವ ರಿಷಿ ಸುನಾಕ್‌ ಪ್ರಧಾನಿ ಹುದ್ದೆಗೆ ಪ್ರಬಲ ಸ್ಪರ್ಧಿ ಎನ್ನಲಾಗಿತ್ತು. ಆದರೆ ಅವರ ಈ ಹೇಳಿಕೆಯಿಂದ ಅವರು ಪ್ರಧಾನಿ ಆಗುತ್ತಾರಾ ಎಂಬ ಬಗ್ಗೆ ಪ್ರಶ್ನೆ ಹುಟ್ಟುಹಾಕಿದೆ.

Boris Johnson: ಬ್ರಿಟನ್‌ ಪ್ರಧಾನಿಯ ಗುಂಡು ಪುರಾಣ: ಬಯಲಾದದ್ದು ಹೇಗೆ?

ಪ್ರಧಾನಿ ಹುದ್ದೆಯ ಕತೆಯೇನು?: ಇಸ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ ಅವರ ಅಳಿಯನಾಗಿರುವ ರಿಷಿ ಸುನಾಕ್‌ ಸದ್ಯ ಬ್ರಿಟನ್‌ ಸರ್ಕಾರದಲ್ಲಿ ಪ್ರಧಾನಿಯ ನಂತರ ಎರಡನೇ ಉನ್ನತ ಹುದ್ದೆಯಲ್ಲಿದ್ದಾರೆ. ಲಾಕ್‌ಡೌನ್‌ ವೇಳೆ ಅಕ್ರಮವಾಗಿ ಮದ್ಯದ ಪಾರ್ಟಿ ನಡೆಸಿದ ಕಾರಣಕ್ಕೆ ಪ್ರಧಾನಿ ಜಾನ್ಸನ್‌ ರಾಜೀನಾಮೆ ನೀಡಬೇಕಾಗಿ ಬಂದರೆ ಅವರ ಹುದ್ದೆಗೆ ರಿಷಿ ಹೆಸರೇ ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಇವರು ಪ್ರಧಾನಿಯಾದರೆ ಭಾರತವನ್ನು 200 ವರ್ಷ ಆಳಿದ ದೇಶಕ್ಕೇ ಪ್ರಧಾನಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಮ್ಮೆ ಭಾರತದ್ದಾಗಲಿದೆ. ಆದರೆ, ಈಗ ತಾನೂ ಆ ಪಾರ್ಟಿಗೆ ಹೋಗಿದ್ದೆ ಎಂದು ರಿಷಿ ಹೇಳಿದ್ದಾರೆಂದು ಬ್ರಿಟನ್ನಿನ ‘ಮಿರರ್‌’ ಪತ್ರಿಕೆ ವರದಿ ಮಾಡಿರುವುದು ಕುತೂಹಲ ಮೂಡಿಸಿದೆ.

ಒಂದಲ್ಲ, ಹಲವು ಪಾರ್ಟಿಗಳು: 2020ರ ಜೂನ್‌ನಲ್ಲಿ ಮದ್ಯದ ಪಾರ್ಟಿ ನಡೆಸಿದ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಗುರುವಾರವಷ್ಟೇ ಬ್ರಿಟನ್‌ ಸರ್ಕಾರದ ಉನ್ನತ ಹುದ್ದೆಗಳಲ್ಲಿರುವ ಹಾಗೂ ಪ್ರಧಾನಿ ಬೋರಿಸ್‌ ಜಾನ್ಸನ್‌ಗೆ ಆಪ್ತರಾಗಿದ್ದ ಐವರು ಒಟ್ಟಿಗೇ ರಾಜೀನಾಮೆ ನೀಡಿದ್ದರು. ಆ ಸಮಯದಲ್ಲಿ ಪ್ರಧಾನಿ ನಿವಾಸದಲ್ಲಿ ಒಂದರ ಬದಲು ಹಲವು ಪಾರ್ಟಿಗಳು ನಡೆದಿದ್ದವು ಎಂಬುದೂ ಬೆಳಕಿಗೆ ಬಂದಿತ್ತು. ಅದರ ಬೆನ್ನಲ್ಲೇ ರಿಷಿ ಸುನಾಕ್‌ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದಿದೆ. ಇದೇ ವೇಳೆ, ಡೌನಿಂಗ್‌ ಸ್ಟ್ರೀಟ್‌ನಲ್ಲಿ ಲಾಕ್‌ಡೌನ್‌ ವೇಳೆ ನಡೆದ ಪಾರ್ಟಿಗಳಿಂದ ಸರ್ಕಾರದಲ್ಲಿ ಜನರಿಗಿರುವ ವಿಶ್ವಾಸಕ್ಕೆ ಹೊಡೆತ ಬಿದ್ದಿದೆ ಎಂದು ರಿಷಿ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಏನಿದು ಗುಂಡು ಪುರಾಣ?: 2020ರಲ್ಲಿ ಕೊರೋನಾ (Coronavirus) ಮೊದಲನೇ ಅಲೆಗೆ ಇಡೀ ಜಗತ್ತೇ ತತ್ತರಿಸುತ್ತಿತ್ತು. ಆಗ ಬ್ರಿಟನ್‌ನಲ್ಲಿ ಬಿಗಿ ಲಾಕ್‌ಡೌನ್‌ (Lockdown) ಜಾರಿ ಮಾಡಲಾಗಿತ್ತು. ದುರಿತ ಕಾಲದಲ್ಲಿ ಪ್ರಧಾನಿ ಕಚೇರಿ ಪಾನಗೋಷ್ಠಿ ಆಯೋಜಿಸಿತ್ತು. ಪ್ರಧಾನಿಗಳ ಅಧಿಕೃತ ನಿವಾಸ ಡೌನಿಂಗ್‌ ಸ್ಟ್ರೀಟ್‌ನ ಉದ್ಯಾನದಲ್ಲಿ ಆಯೋಜಿಸಲಾಗಿದ್ದ ಮದ್ಯದ ಪಾರ್ಟಿಗೆ 100ಕ್ಕೂ ಹೆಚ್ಚು ಅಧಿಕಾರಿಗಳನ್ನು ಇ-ಮೇಲ್‌ ಮೂಲಕ ಆಹ್ವಾನಿಸಲಾಗಿತ್ತು. ಇದು ಇತ್ತೀಚೆಗೆ ಬಯಲಾಗಿ ಭಾರೀ ವಿವಾದ ಭುಗಿಲೆದ್ದಿದೆ.

UK PM Race: ಜಾನ್ಸನ್‌ಗೆ ಕಂಟಕವಾದ ಗುಂಡು ಪಾರ್ಟಿ, ಬ್ರಿಟನ್‌ ಪ್ರಧಾನಿ ರೇಸಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿ!

ಯಾಕಿಷ್ಟು ವಿವಾದ?: ಪಾರ್ಟಿ ಆಯೋಜಿಸಿದ್ದ ವೇಳೆ ಬ್ರಿಟನ್ನಿನಲ್ಲಿ ಬಿಗಿ ಲಾಕ್‌ಡೌನ್‌ ಇತ್ತು. ಜನರ ಓಡಾಟಕ್ಕೆ ನಿರ್ಬಂಧ ಇತ್ತು. ಶಾಲೆ, ಪಬ್‌, ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿತ್ತು. ಮನೆಯಲ್ಲಿ ಇಬ್ಬರಿಗಿಂತ ಹೆಚ್ಚು ಜನ ಸೇರುವಂತಿಲ್ಲ. ಸಾರ್ವಜನಿಕವಾಗಿ ಒಬ್ಬರಿಗಿಂತ ಹೆಚ್ಚಿನ ಜನ ಒಟ್ಟಿಗೆ ಕಾಣಿಸಿಕೊಳ್ಳುವಂತಿಲ್ಲ ಎಂಬಂಥ ಕಠಿಣ ನಿರ್ಬಂಧ ವಿಧಿಸಲಾಗಿತ್ತು. ನಿಯಮ ಉಲ್ಲಂಘಿಸಿ ಪಾರ್ಟಿ ನಡೆಸಿದ, ಮೋಜು ಮಾಡಿದವರ ಮೇಲೆ ಕೇಸು ಜಡಿದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ದಂಡ ವಸೂಲಿ ಮಾಡಿದ್ದರು. ಕೊರೋನಾ ಮಾರ್ಗಸೂಚಿ ಪಾಲನೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ಡ್ರೋನ್‌ ಮೂಲಕ ನಿಗಾ ವಹಿಸಲಾಗಿತ್ತು. ಹೀಗಿದ್ದೂ ಸ್ವತಃ ಪ್ರಧಾನಿ ಪಾರ್ಟಿ ನಡೆಸಿ ಮೋಜು ಮಾಡಿರುವುದೇ ಭಾರೀ ವಿವಾದಕ್ಕೆ ಕಾರಣವಾಗಿದೆ.