* ರಸ್ತೆಗಳಲೆಲ್ಲಾ ಪ್ರವಾಹ, ನಗರದ ನಡುವೆ ಬೃಹತ್‌ ಜಲಪಾತ ಸೃಷ್ಟಿ!* ಮರುಭೂಮಿ ಯುಎಇನಲ್ಲಿ ಪ್ರವಾಹ, ಜಲಪಾತ* ದೇಶದ ವಿವಿಧೆಡೆ ಮೋಡ ಬಿತ್ತನೆ ನಡುವೆ 3 ದಿನಗಳಿಂದ ಭಾರೀ ಮಳೆ 

ಅಬುಧಾಬಿ(ಜ.04): ಮರುಭೂಮಿಗೆ ಹೆಸರಾದ, ವರ್ಷಕ್ಕೆ ಸರಾಸರಿ 10 ಸೆಂ.ಮೀನಷ್ಟುನೈಸರ್ಗಿಕ ಮಳೆ ಸುರಿಯುವ ಯುಎಇನಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಪ್ರವಾಹ ಕಾಣಿಸಿಕೊಂಡಿದ್ದು, ಸಾಮಾನ್ಯ ಜನಜೀವನಕ್ಕೆ ಅಡ್ಡಿಯಾಗಿದೆ. ಅಷ್ಟುಮಾತ್ರವಲ್ಲ ಬೃಹತ್‌ ಜಲಪಾತ ಕೂಡಾ ಸೃಷ್ಟಿಯಾಗಿದೆ.

ಯುಎಇನಲ್ಲಿ ಮಳೆ ಸುರಿಯುವ ಸಾಧ್ಯತೆ ಹೆಚ್ಚಿಸಲು ಪ್ರತಿವರ್ಷ ಮೋಡ ಬಿತ್ತನೆ ನಡೆಸಲಾಗುತ್ತದೆ. ಈ ವರ್ಷವೂ ಕಳೆದ ವಾರ ಮೋಡ ಬಿತ್ತನೆ ಆರಂಭವಾಗಿತ್ತು. ಅದರ ಬೆನ್ನಲ್ಲೇ ಹವಾಮಾನದಲ್ಲೂ ಭಾರೀ ವೈಪರೀತ್ಯ ಕಾಣಿಸಿಕೊಂಡು, ಒಂದೂವರೆ ವರ್ಷಗಳಲ್ಲಿ ಸುರಿಯುವ ಪ್ರಮಾಣದ ಮಳೆ ಜ.1ರಿಂದೀಚೆಗೆ ಮೂರು ದಿನಗಳಲ್ಲಿ ಸುರಿದಿದೆ.

ಅಬುಧಾಬಿ, ದುಬೈ, ಶಾರ್ಜಾ, ಅಜ್ಮಾನ್‌ ಮತ್ತು ರಾಸ್‌ ಅಲ್‌ ಖೈಮಾದಲ್ಲಿ ಭಾರೀ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು ರಸ್ತೆಗಳೆಲ್ಲಾ ನೀರು ಪ್ರವಾಹೋಪಾದಿ ಹರಿಯುತ್ತಿದೆ. ಭಾರೀ ಮಳೆ ನಿರ್ವಹಿಸಲು ಅಗತ್ಯವಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ಸಣ್ಣ ಮಳೆ ಕೂಡಾ ಇಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿದೆ. ಹೀಗಾಗಿ ರಸ್ತೆಯಲ್ಲಿ ಸಂಚರಿಸುವ ವೇಳೆ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಜೊತೆಗೆ ಸಮುದ್ರದಲ್ಲಿ ಭಾರೀ ಎತ್ತರದ ಅಲೆ ಏಳುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಅಚ್ಚರಿ ಎಂಬಂತೆ ಜೆಬೆಲ್‌ ಜೈಸ್‌ ನಗರದಲ್ಲಿ ರಸ್ತೆಗೆ ಹೊಂದಿಕೊಂಡೇ ಇರುವ ಬೃಹತ್‌ ಬೆಟ್ಟಗಳಿಂದ ಭಾರೀ ಪ್ರಮಾಣದ ನೀರು ಧುಮ್ಮಿಕ್ಕುತ್ತಿದ್ದು ದಿಢೀರ್‌ ಜಲಪಾತವೊಂದನ್ನು ಸೃಷ್ಟಿಸಿದೆ.

ಭಾರೀ ಮಳೆ ಹಿನ್ನೆಲೆಯಲ್ಲಿ ಪ್ರಮುಖ ಮನರಂಜನಾ ತಾಣಗಳು, ಗ್ಲೋಬಲ್‌ ವಿಲೇಜ್‌ ಮತ್ತು ದುಬೈ 2020 ಎಕ್ಸ್‌ಪೋದ ಕೆಲ ತಾಣಗಳನ್ನು ಮುಚ್ಚಲಾಗಿದೆ. ದುಬೈ ಶಾಪಿಂಗ್‌ ಫೆಸ್ಟಿವಲ್‌ನ ಭಾಗವಾಗಿದ್ದ ಸಿಡಿಮದ್ದು ಪ್ರದರ್ಶನವನ್ನೂ ರದ್ದುಗೊಳಿಸಲಾಗಿದೆ.