ವಂಚಕ ನೀರವ್‌ ಮೋದಿ ಗಡೀಪಾರಿಗೆ ಬ್ರಿಟನ್‌ ನ್ಯಾಯಾಲಯ ಅಸ್ತು| ಮೇಲ್ಮನವಿ ಸಲ್ಲಿಸದಿದ್ದರೆ 2 ತಿಂಗಳಲ್ಲಿ ಭಾರತಕ್ಕೆ| ‘ಭಾರತೀಯೆ’ ಪ್ರೀತಿ ಪಟೇಲ್‌ ಕೈಯಲ್ಲಿ ಭವಿಷ್ಯ| ‘ಚೌಕೀದಾರ್‌ ಮೋದಿ’ಗೆ ಜಯ| 13 ಸಾವಿರ ಕೋಟಿ ರು. ವಂಚಕ ಭಾರತದ ಕೈಗೆ ಸಿಗುವ ದಿನ ಸನ್ನಿಹಿತ?

ಲಂಡನ್‌(ಫೆ.26): ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ)ಗೆ 13 ಸಾವಿರ ಕೋಟಿ ರು. ವಂಚಿಸಿ ಪರಾರಿಯಾಗಿರುವ ವಜ್ರೋದ್ಯಮಿ ನೀರವ್‌ ಮೋದಿಯನ್ನು ಭಾರತಕ್ಕೆ ಗಡೀಪಾರು ಮಾಡಲು ಬ್ರಿಟನ್‌ ನ್ಯಾಯಾಲಯ ಅನುಮತಿ ನೀಡಿದೆ. ಇದರಿಂದಾಗಿ ಕಾನೂನು ಸಮರದಲ್ಲಿ ಬಹುಕೋಟಿ ವಂಚಕನಿಗೆ ಹಿನ್ನಡೆಯಾಗಿದ್ದು, ಮುಂದಿನ ಹಾದಿ ತೀವ್ರ ಕುತೂಹಲ ಕೆರಳಿಸಿದೆ.

ನೀರವ್‌ ಮೋದಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡಿರುವುದು ಸಾಕ್ಷ್ಯಗಳಿಂದ ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಅವರು ಭಾರತೀಯ ನ್ಯಾಯಾಲಯಗಳ ಮುಂದೆ ಉತ್ತರ ಹೇಳಬೇಕಾಗಿದೆ ಎಂದು ಜಿಲ್ಲಾ ನ್ಯಾಯಾಧೀಶ ಸಾಮ್ಯುಯೆಲ್‌ ಗೂಜೀ ಅವರು ಗುರುವಾರ ತೀರ್ಪು ನೀಡಿದರು. ನೈಋುತ್ಯ ಲಂಡನ್‌ನ ವಾಂಡ್ಸ್‌ವಥ್‌ರ್‍ ಕಾರಾಗೃಹದಿಂದ 49 ವರ್ಷದ ನೀರವ್‌ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದಾಗ ಈ ತೀರ್ಪು ಪ್ರಕಟವಾಯಿತು. ಆಗ ಆತ ಯಾವುದೇ ಭಾವನೆ ವ್ಯಕ್ತಪಡಿಸಲಿಲ್ಲ. ತೀರ್ಪಿನ ಪ್ರತಿಯನ್ನು ಬ್ರಿಟನ್‌ ಗೃಹ ಸಚಿವೆ ಪ್ರೀತಿ ಪಟೇಲ್‌ ಅವರಿಗೆ ಕಳುಹಿಸುತ್ತೇನೆ ಎಂದು ನ್ಯಾಯಾಧೀಶರು ತಿಳಿಸಿದರು.

2 ತಿಂಗಳೊಳಗೆ ನಿರ್ಧಾರ:

ಭಾರತ-ಬ್ರಿಟನ್‌ ನಡುವೆ ಗಡೀಪಾರು ಒಪ್ಪಂದವಿದೆ. ಭಾರತೀಯ ಮೂಲದವರಾಗಿರುವ ಗೃಹ ಸಚಿವೆ ಪ್ರೀತಿ ಅವರು ಕಾನೂನು ಪ್ರಕಾರ ಮುಂದಿನ ಎರಡು ತಿಂಗಳೊಳಗೆ ನೀರವ್‌ ಗಡೀಪಾರು ಕುರಿತು ನಿರ್ಧಾರ ಕೈಗೊಳ್ಳಬೇಕಾಗಿದೆ. ಅವರು ಈ ಪ್ರಕರಣದಲ್ಲಿ ಏನು ಮಾಡುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಗೃಹ ಸಚಿವರು ನ್ಯಾಯಾಲಯದ ತೀರ್ಪಿಗೆ ತದ್ವಿರುದ್ಧವಾಗಿ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಗಂಭೀರ ಪ್ರಕರಣಗಳಲ್ಲಿ ಮರಣದಂಡನೆ ಅಂಶ ಇದ್ದರೆ ಆ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗುತ್ತದೆ. ನೀರವ್‌ ಪ್ರಕರಣದಲ್ಲಿ ಅದೂ ಇಲ್ಲದಿರುವುದರಿಂದ ಅವರು ತ್ವರಿತವಾಗಿ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಇನ್ನೂ ಹೋರಾಟಕ್ಕೆ ಅವಕಾಶ:

ಪ್ರೀತಿ ಪಟೇಲ್‌ ಅವರ ನಿರ್ಧಾರದ ಬಳಿಕ ನೀರವ್‌ ಮೋದಿ ಹೈಕೋರ್ಟ್‌ನಲ್ಲಿ 14 ದಿನದಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಆತನ ಅರ್ಜಿ ವಿಚಾರಣೆಗೆ ಅಂಗೀಕಾರವಾದರೆ ಗಡೀಪಾರು ವಿಳಂಬವಾಗಲಿದೆ. ಆತ ಮೇಲ್ಮನವಿ ಸಲ್ಲಿಸದೇ ಹೋದಲ್ಲಿ ಗಡೀಪಾರು ಪ್ರಕ್ರಿಯೆ ಆರಂಭವಾಗಲಿದೆ.

ಏನಿದು ಪ್ರಕರಣ?

ವಜ್ರೋದ್ಯಮಿ ನೀರವ್‌ ಮೋದಿ ಪಿಎನ್‌ಬಿಗೆ 13 ಸಾವಿರ ಕೋಟಿ ರು. ಸಾಲ ಮರುಪಾವತಿ ಮಾಡದೆ ದೇಶ ಬಿಟ್ಟು ಪರಾರಿಯಾಗಿರುವುದು 2018ರ ಜನವರಿಯಲ್ಲಿ ಬೆಳಕಿಗೆ ಬಂದಿತ್ತು. ಆತ ಬ್ರಿಟನ್ನಿನಲ್ಲಿರುವುದು ಪತ್ತೆಯಾಗಿ ಭಾರತ ಸರ್ಕಾರ ಗಡೀಪಾರಿಗೆ ಮನವಿ ಮಾಡಿತ್ತು. 2019ರಲ್ಲಿ ಬ್ರಿಟನ್‌ ಸರ್ಕಾರ ಆತನನ್ನು ಬಂಧಿಸಿತ್ತು.

ಮುಂದೇನು?

- ಕೋರ್ಟ್‌ ಆದೇಶ 2 ತಿಂಗಳಲ್ಲಿ ಬ್ರಿಟನ್‌ನ ಗೃಹ ಸಚಿವಾಲಯಕ್ಕೆ ರವಾನೆಯಾಗುತ್ತದೆ.

- ಗೃಹ ಸಚಿವಾಲಯ ಗಡೀಪಾರು ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ.

- ಗಡೀಪಾರಿಗೆ ಆದೇಶ ಹೊರಬಿದ್ದರೆ, 14 ದಿನದಲ್ಲಿ ನೀರವ್‌ ಮೇಲ್ಮನವಿ ಸಲ್ಲಿಸಬಹುದು.

ಹಿಡಿದು ತರುತ್ತೇವೆ ಎಂದಿದ್ದ ಮೋದಿ

ಭಾರತದಲ್ಲಿ ಆರ್ಥಿಕ ಅಪರಾಧ ಎಸಗಿ ವಿದೇಶಕ್ಕೆ ಪರಾರಿಯಾಗಿರುವ ಮೇಹುಲ್‌ ಚೋಕ್ಸಿ, ನೀರವ್‌ ಮೋದಿಯಂಥ ವ್ಯಕ್ತಿಗಳನ್ನು ಹಿಡಿದು ಮರಳಿ ಭಾರತಕ್ಕೆ ತರಲು ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2019ರಲ್ಲಿ ಘೋಷಿಸಿದ್ದರು.