Turkey Earthquake ವೇಳೆ ನಾಪತ್ತೆಯಾಗಿದ್ದ ಬೆಂಗಳೂರಿನ ಎಂಜಿನೀಯರ್ ಶವವಾಗಿ ಪತ್ತೆ!
ಟರ್ಕಿ ಭೀಕರ ಭೂಕಂಪಕ್ಕೆ ವಿಶ್ವವೇ ಕಣ್ಣೀರು ಹಾಕುತ್ತಿದೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅವಶೇಷಗಳಡಿ ಸಿಲುಕಿದ್ದ ಹಲವರು ಹೊರಬರಲಾಗದೆ ಮೃತಪಟ್ಟಿದ್ದಾರೆ. ಈ ಭೂಕಂಪದ ವೇಳೆ ನಾಪತ್ತೆಯಾಗಿದ್ದ ಬೆಂಗಳೂರಿನ ಎಂಜಿನೀಯರ್ ಶವ ಪತ್ತೆಯಾಗಿದೆ. ಈ ಮಾಹಿತಿ ಖಚಿತವಾಗುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ನವದೆಹಲಿ(ಫೆ.11): ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದ ಚಿತ್ರಗಳನ್ನು ಎಂತರವರನ್ನು ಒಂದು ಕ್ಷಣ ಬೆಚ್ಚಿಬೀಳಿಸುತ್ತೆ. ಕಲ್ಲು ಹೃದಯನ್ನೂ ಕರಗಿಸುತ್ತದೆ. ಸಾವಿನ ಸಂಖ್ಯೆ 25,000ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯ, ಶೋಧ ಕಾರ್ಯಗಳು ಮುಂದುವರಿದಿದೆ. ಭಾರತದ ಎನ್‌ಡಿಆರ್‌ಎಫ್ ತಂಡ ಸತತ ಕಾರ್ಯಾಚರಣೆ ಮಾಡುತ್ತಿದೆ. ಇದರ ನಡುವೆ ಮತ್ತೊಂದು ಆಘಾತ ಎದುರಾಗಿದೆ. ಟರ್ಕಿ ಭೂಕಂಪದ ವೇಳೆ ನಾಪತ್ತೆಯಾಗಿದ್ದ ಬೆಂಗಳೂರಿನ ಎಂಜಿನೀಯರ್ ಶವ ಪತ್ತೆಯಾಗಿದೆ. 36 ವರ್ಷದ ವಿಜಯ್ ಕುಮಾರ್ ಟರ್ಕಿಯ ಪೂರ್ವ ಅನಾಟೊಲಿನಾದ ಮಲಾತ್ಯದಲ್ಲಿ ಪತ್ತೆಯಾಗಿದೆ. ವಿಜಯ್ ಕುಮಾರ್ ಉಳಿದುಕೊಂಡಿದ್ದ ಸ್ಟಾರ್ ಹೊಟೆಲ್ ನೆಲಸಮಗೊಂಡಿದೆ. ಇಧರ ಅವಶೇಷಗಳಡಿ ವಿಜಯ್ ಕುಮಾರ್ ಶವ ಪತ್ತೆಯಾಗಿದೆ.
ಬೆಂಗಳೂರಿನ ಪೀಣ್ಯ ಕೈಗಾರಿಕಾ ವಲಯದಲ್ಲಿರುವ ಆ್ಯಕ್ಸಿಪ್ಲಾಂಟ್ ಕಂಪನಿಯಲ್ಲಿ ಎಂಜಿನೀಯರ್ ಆಗಿರುವ ವಿಜಯ್ ಕುಮಾರ್ ಕೆಲಸದ ನಿಮಿತ್ತ ಟರ್ಕಿಗೆ ತೆರಳಿದ್ದರು. ಕೆಲ ದಿನಗಳ ಹಿಂದೆ ಟರ್ಕಿಗೆ ತೆರಳಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರಿನ ಆಕ್ಸಿಪ್ಲಾಂಟ್ ಕಂಪನಿ ವಿಜಯ್ ಕುಮಾರ್ ಅವರಿಗೆ ಉಳಿದುಕೊಳ್ಳಲು 24 ಅಂತಸ್ತಿನ ಸ್ಟಾರ್ ಹೊಟೆಲ್ ಅವ್ಸಾರಾ ಬುಕ್ ಮಾಡಿತ್ತು. ಕೆಲಸ ಮುಗಿಸಿ ಪ್ರತಿ ದಿನ ಹೊಟೆಲ್‌ಗೆ ಮರಳುತ್ತಿದ್ದ ವಿಜಯ್ ಕುಮಾರ್ ಭೂಕಂಪನದ ವೇಳೆ ಹೊಟೆಲ್‌ನಲ್ಲಿ ಉಳಿದುಕೊಂಡಿದ್ದರು. 24 ಮಹಡಿಗಳ ಈ ಸ್ಟಾರ್ ಭೀಕರ ಭೂಕಂಪಕ್ಕೆ ನೆಲಸಮಗೊಂಡಿದೆ.
Turkey Earthquake: ಮೂತ್ರ ಕುಡಿದು ಬದುಕಿ ಬಂದ 17 ವರ್ಷದ ಯುವಕ!
ಇತ್ತ ಭಾರತದ ರಕ್ಷಣಾ ತಂಡ ಮಲಾತ್ಯ ನಗರದಲ್ಲಿ ರಕ್ಷಣಾ ಕಾರ್ಯ ಆರಂಭಿಸಿತ್ತು. ಭಾರತೀಯ ಮೂಲದ ಉದ್ಯಮಿ ನಾಪತ್ತೆಯಾಗಿರುವು ಮಾಹಿತಿಯನ್ನು ಆಧರಿಸಿ ಶೋಧ ಕಾರ್ಯ ಆರಂಭಿಸಿತ್ತು. ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಲು ಹಲವು ಪ್ರಯತ್ನಗಳು ನಡೆಸಲಾಗಿತ್ತು. ಆದರೆ ಮಲತ್ಯಾ, ಅನಾಟೊಲಿನಾ ಸೇರಿದಂತೆ ವಿಜಯ್ ಕುಮಾರ್ ಕೆಲಸ ಹಾಗೂ ಉಳಿದುಕೊಂಡ್ಡ ಪ್ರದೇಶಗಳು ಭೂಕಂಪಕ್ಕೆ ತತ್ತರಿಸಿತ್ತು. ಹೀಗಾಗಿ ಕುಟುಂಬದವರು ನೀಡಿದ್ದ ದೂರವಾಣಿ ಸಂಖ್ಯೆ ಹಾಗೂ ಮಾಹಿತಿ ಆಧರಿಸಿ ಭಾರತೀಯ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದರು.
ಶುಕ್ರವಾರ(ಫೆ.10) ಬೆಳಗ್ಗೆ ಎನ್‌ಡಿಆರ್‌ಎಫ್ ತಂಡ ಹೊಟೆಲ್ ಬಳಿ ಶೋಧ ಕಾರ್ಯ ಆರಂಭಿಸಿತ್ತು. ಈ ವೇಳೆ ವಿಜಯ್ ಕುಮಾರ್ ಅವರ ಪಾಸ್‌ಪೋರ್ಟ್ ಸೇರಿದಂತೆ ಇತರ ಕೆಲ ವಸ್ತುಗಳು ಪತ್ತೆಯಾಗಿತ್ತು. ಆದರೆ ವಿಜಯ್ ಕುಮಾರ್ ದೇಹ ಪತ್ತೆಯಾಗಿರಲಿಲ್ಲ. ಹೀಗಾಗಿ ಟರ್ಕಿ ರಕ್ಷಣಾ ತಂಡಗಳು ಇಲ್ಲಿ ಕಾರ್ಯಾಚರಣೆ ನಡೆಸಿ ಆಸ್ಪತ್ರೆಗೆ ದಾಖಲಿಸಿರುವ ಸಾಧ್ಯತೆಗಳು ಕಂಡುಬಂದಿತ್ತು. ಹೀಗಾಗಿ ಭಾರತೀಯ ಅಧಿಕಾರಿಗಳು ಆಸ್ಪತ್ರೆಯಲ್ಲಿ ವಿಜಯ್ ಕುಮಾರ್ ಹುಡುಕಾಟವನ್ನೂ ಆರಂಭಿಸಿತ್ತು. ಹೀಗಾಗಿ ವಿಜಯ್ ಕುಮಾರ್ ಅವರನ್ನು ಸುರಕ್ಷಿತವಾಗಿ ರಕ್ಷಿಸಲು ತಂಡ ಕಾರ್ಯಾಚರಣೆ ನಡೆಸಿತ್ತು.
ಟರ್ಕಿ ಸಿರಿಯಾ ಭೂಕಂಪ: ಬದುಕ್ಕಿಲ್ಲವೆಂದು ತಿಳಿದರೂ ಮಗಳ ಕೈ ಬಿಡಲೊಪ್ಪದ ಅಪ್ಪ
ಭಾರತೀಯ ರಕ್ಷಣಾ ತಂಡ ಅಪ್ಸಾರಾ ಹೊಟೆಲ್ ಬಳಿ ತೀವ್ರ ಕಾರ್ಯಾಚರಣೆ ನಡೆಸಿದ ವೇಳೆ ಛಿದ್ರವಾಗಿ ದೇಹವೊಂದು ಪತ್ತೆಯಾಗಿತ್ತು. ಅನುಮಾನದ ಮೇಲೆ ಮೃತದೇಹದ ಫೋಟೋವನ್ನು ವಿಜಯ್ ಕುಮಾರ್ ಕುಟಂಬಕ್ಕೆ ರವಾನಿಸಿತ್ತು. ಈ ವೇಳೆ ವಿಜಯ್ ಕುಮಾರ್ ಅವರ ಬಲಗೈನಲ್ಲಿರುವ ಹಚ್ಚೆ ಗುರುತನ್ನು ಕುಟುಂಬಸ್ಥರು ಪತ್ತೆ ಹಚ್ಚಿದ್ದಾರೆ. ಅಲ್ಲೀವರೆಗೆ ವಿಜಯ್ ಕುಮಾರ್ ಸುರಕ್ಷಿತವಾಗಿ ಮನೆಗೆ ಮರಳಲಿದ್ದಾರೆ ಎಂದುಕೊಂಡಿದ್ದ ಕುಟುಂಬಸ್ಥರಿಗೆ ಆಘಾತವಾಗಿದೆ.
ಬೆಂಗಳೂರಿಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ವಿಜಯ್ ಕುಮಾರ್ ಉತ್ತರಕಾಂಡದ ಪೌರಿ ಗರ್ವಾಲ್ ನಿವಾಸಿಯಾಗಿದ್ದಾರೆ. ವಿಜಯ್ ಕುಮಾರ್ ಅವರ ಅಣ್ಣ ಮೃತದೇಹ ಪತ್ತೆ ಹಚ್ಚಿದ್ದಾರೆ. ಕೈಯಲ್ಲಿರುವ ಹಚ್ಚೆ ಕುರಿತು ಅಧಿಕಾರಿಗಳಿಗೆ ಮಾಹತಿ ನೀಡಿದ್ದಾರೆ. ಭಾರತೀಯ ತಂಡ ಛಿದ್ರವಾಗಿರುವ ವಿಜಯ್ ಕುಮಾರ್ ಮೃತದೇಹ ಕಾರ್ಯಾಚರಣೆ ನಡೆಸಿ ಹೊರತೆಗೆದಿದೆ. ಈ ಮೂಲಕ ಟರ್ಕಿಯಲ್ಲಿ ನಾಪತ್ತೆಯಾಗಿದ್ದ ಬೆಂಗಳೂರಿನ ಉದ್ಯಮಿ ಶವವಾಗಿ ಪತ್ತೆಯಾಗುವ ಮೂಲಕ ಇದೀಗ ಭಾರತೀಯರ ನೋವು ಮತ್ತಷ್ಟು ಹೆಚ್ಚಿಸಿದೆ.