ಸಿಡ್ನಿ(Pe.೧೧): ಉತ್ತರ ನ್ಯೂಜಿಲೆಂಡ್‌ ಸನಿಹದ ದಕ್ಷಿಣ ಪೆಸಿಫಿಕ್‌ ಸಾಗರದಲ್ಲಿ ತಳದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ವೇಳೆ ಸುನಾಮಿ ಕೂಡ ಎದ್ದಿದ್ದು, ನ್ಯೂಜಿಲೆಂಡ್‌, ವನೌತು ಹಾಗೂ ಆಸ್ಪ್ರೇಲಿಯಾ ಕರಾವಳಿ ತೀರದಲ್ಲಿ ಕಟ್ಟೆಚ್ಚರ ಸಾರಲಾಗಿದೆ. ಫಿಜಿ ತೀರಕ್ಕೆ 0.3 ಮೀ. ಎತ್ತರದ ಸುನಾಮಿ ಅಲೆಗಳು ಅಪ್ಪಳಿಸಿವೆ.

ಬುಧವಾರ ರಾತ್ರಿ ಇಲ್ಲಿ ತೀವ್ರತರದ ಭೂಕಂಪ ಸಂಭವಿಸಿದ್ದು, ಬಳಿಕ 0.3 ಮೀಟರ್‌ನಿಂದ 1 ಮೀಟರ್‌ ಎತ್ತರದ ಸುನಾಮಿ ಅಲೆಗಳು ದಕ್ಷಿಣ ಪೆಸಿಫಿಕ್‌ನಲ್ಲಿ ಎದ್ದಿವೆ.

ಇವು ಫಿಜಿ, ನ್ಯೂಜಿಲೆಂಡ್‌ ಹಾಗೂ ವನೌತು ತಲುಪುವ ಸಾಧ್ಯತೆ ಇದೆ ಎಂದು ಅಮೆರಿಕ ಸರ್ಕಾರದ ಪೆಸಿಫಿಕ್‌ ಸುನಾಮಿ ಎಚ್ಚರಿಕೆ ಕೇಂದ್ರ ಎಚ್ಚರಿಕೆ ನೀಡಿದೆ. ಆಸ್ಪ್ರೇಲಿಯಾದಲ್ಲಿ ಕೂಡ ಸುನಾಮಿ ಮುನ್ನೆಚ್ಚರಿಕೆ ವಹಿಸಲಾಗಿದೆ.