ವಾಷಿಂಗ್ಟನ್(ಮೇ.28)‌: ವಾಸ್ತವಕ್ಕೆ ದೂರವಾದ ಅಂಶಗಳನ್ನು ಸದಾ ಪ್ರಸ್ತಾಪಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಟ್ವೀಟರ್‌ ದೊಡ್ಡ ಶಾಕ್‌ ನೀಡಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಯೋಗಿಸುವ ಬ್ಯಾಲೆಟ್‌ ಪೇಪರ್‌ನಲ್ಲಿ ಭ್ರಷ್ಟಾಚಾರ ನಡೆಯುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮಾಡಿದ್ದ ಪೋಸ್ಟ್‌ಗೆ ಟ್ವೀಟರ್‌, ಫ್ಯಾಕ್ಟ್ಚೆಕ್‌ (ಸುದ್ದಿಯ ಸತ್ಯ ಅರಿಯುವ) ಎಚ್ಚರಿಕೆಯನ್ನು ಲಗತ್ತಿಸಿದೆ.

ಈ ಕುರಿತು ಟ್ರಂಪ್‌ ಮಾಡಿರುವ ಎರಡು ಟ್ವೀಟ್‌ಗಳ ಕೆಳಗೆ ಎಚ್ಚರಿಕೆಯ ಚಿಹ್ನೆ ಹಾಕಿ ‘ಸತ್ಯಾಸತ್ಯತೆ ಪರಿಶೀಲಿಸಿ’ ಎಂದು ಬರೆಯಲಾಗಿದೆ. ಟ್ವೀಟರ್‌ ಈ ನಡೆಗೆ ಕೆಂಡ ಕಾರಿರುವ ಟ್ರಂಪ್‌, ನನ್ನ ಆರೋಪವನ್ನು ಅಲ್ಲಗೆಳೆಯುವ ಮೂಲಕ ಟ್ವಿಟರ್‌ ಕೂಡ ಅಮೆರಿಕ ಅಧ್ಯಕ್ಷೀಯ ಚುನಾವನೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಹೇಳಿದ್ದಾರೆ. ರಿಪಬ್ಲಿಕನ್ನರು ಇಂಥ ಯತ್ನಗಳ ಮೂಲಕ ನಮ್ಮ ಬಾಯಿ ಮುಚ್ಚಿಸಬಹುದು ಎಂದು ಅಂದುಕೊಂಡಿದ್ದಾರೆ.

2016ರಲ್ಲೂ ಅವರು ಇಂಥ ಯತ್ನ ಮಾಡಿ ವಿಫಲವಾಗಿದ್ದರು. ಇದೀಗ ಅದರ ಮುಂದುವರೆದ ಭಾಗ ನಮ್ಮ ಮುಂದೆ ಕಾಣಿಸಿಕೊಳ್ಳುತ್ತಿದೆ. ಇದು ಹೀಗೆಯೇ ಮುಂದುವರೆದರೆ ನಾವು ಅವುಗಳನ್ನು ನಿಯಂತ್ರಿಸಬಹುದು ಇಲ್ಲವೇ ಅವುಗಳನ್ನು ಮುಚ್ಚಲೂ ಬಹುದು ಎಂದು ಟ್ವೀಟರ್‌ನಂಥ ಸಾಮಾಜಿಕ ಜಾಲತಾಣವನ್ನೇ ಮುಚ್ಚಿಸುವ ಬೆದರಿಕೆಯನ್ನೂ ಹಾಕಿದ್ದಾರೆ.

ಟ್ವಿಟರ್‌ನಲ್ಲಿ ಅವರಿಗೆ 8 ಕೋಟಿ ಹಿಂಬಾಲಕರಿದ್ದಾರೆ.