ವಾಷಿಂಗ್ಟನ್‌(ಮೇ.16): ಚೀನಾದ ಜೊತೆ ವ್ಯಾಪಾರ ಸಮರದಲ್ಲಿ ತೊಡಗಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಭಾರತದ ಜೊತೆಗೂ ಘರ್ಷಣೆಗಿಳಿಯುವ ಸೂಚನೆ ನೀಡಿದ್ದಾರೆ. ಚೀನಾದಿಂದ ತನ್ನ ಉದ್ದಿಮೆಯನ್ನು ಭಾರತಕ್ಕೆ ಸ್ಥಳಾಂತರಿಸುವ ಯೋಚನೆಯಲ್ಲಿರುವ ಆ್ಯಪಲ್‌ ಕಂಪನಿಗೆ ಟ್ರಂಪ್‌ ನೇರ ಎಚ್ಚರಿಕೆ ನೀಡಿದ್ದು, ಅಮೆರಿಕದಲ್ಲಿ ಹೆಚ್ಚು ತೆರಿಗೆ ವಿಧಿಸುವ ಬೆದರಿಕೆ ಹಾಕಿದ್ದಾರೆ.

‘ಅಮೆರಿಕದ ಕಂಪನಿಗಳು ಹೊರದೇಶಗಳಲ್ಲಿ ತಮ್ಮ ಉತ್ಪಾದನಾ ಘಟಕ ಹೊಂದಿದ್ದರೆ ಅವುಗಳನ್ನು ಮರಳಿ ಅಮೆರಿಕಕ್ಕೆ ಸ್ಥಳಾಂತರಿಸುವುದಕ್ಕೆ ನಾವು ತೆರಿಗೆ ರಿಯಾಯ್ತಿಯೂ ಸೇರಿದಂತೆ ಸಾಕಷ್ಟುಪ್ರೋತ್ಸಾಹ ನೀಡುತ್ತಿದ್ದೇವೆ. ಆದರೆ, ಚೀನಾದಿಂದ ಹೊರಹೋಗಲು ಬಯಸಿರುವ ಆ್ಯಪಲ್‌ ಕಂಪನಿ ಈಗ ಎಲ್ಲಿಗೆ ಹೊರಟಿದೆ ನೋಡಿದಿರಾ? ಭಾರತಕ್ಕೆ ಹೋಗುತ್ತಾರಂತೆ... ಐರ್‌ಲೆಂಡ್‌ಗೆ ಹೋಗುತ್ತಾರಂತೆ... ಇದು ಸರಿಯಲ್ಲ. ಇನ್ನು ನಾವಿದನ್ನು ಸಹಿಸಿಕೊಳ್ಳುವುದಿಲ್ಲ. ನಾವೂ ಬೇರೆ ದೇಶಗಳಂತೆ ಗೋಡೆ ಕಟ್ಟಿಕೊಳ್ಳುವುದಾದರೆ ಆ್ಯಪಲ್‌ ಕಂಪನಿ ತನ್ನ ಶೇ.100ರಷ್ಟುಉತ್ಪಾದನೆಯನ್ನು ಅಮೆರಿಕದಲ್ಲೇ ಮಾಡಬೇಕಾಗುತ್ತದೆ. ನಾವು ಸಡಿಲ ಬಿಟ್ಟಿದ್ದೇ ತಪ್ಪಾಯಿತು’ ಎಂದು ಟ್ರಂಪ್‌ ಸಂದರ್ಶನವೊಂದರಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೋನಾ ಹರಡಿದ ಚೀನಾಗೆ ಬಿಗ್ ಶಾಕ್, Apple ಕಂಪನಿ ಭಾರತಕ್ಕೆ ಶಿಫ್ಟ್!

ಕೊರೋನಾ ಬಿಕ್ಕಟ್ಟಿನ ನಂತರ ಬಹಳಷ್ಟುಕಂಪನಿಗಳಂತೆ ಆ್ಯಪಲ್‌ ಕೂಡ ಚೀನಾದಿಂದ ತನ್ನ ಗಣನೀಯ ಪ್ರಮಾಣದ ಉತ್ಪಾದನೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿದೆ. ಚೀನಾದಿಂದ ಹೊರಹೋಗುವ ಅಮೆರಿಕದ ಕಂಪನಿಗಳು ಅಮೆರಿಕದಲ್ಲೇ ತಮ್ಮ ಉತ್ಪಾದನೆಯನ್ನು ವಿಸ್ತರಿಸಬೇಕು ಎಂಬ ಇರಾದೆಯನ್ನು ಟ್ರಂಪ್‌ ಹೊಂದಿದ್ದಾರೆ. ಆದರೆ, ಚೀನಾದಿಂದ ಕಂಪನಿಗಳು ಭಾರತದ ಕಡೆ ಮುಖಮಾಡಿರುವುದು ಅವರನ್ನು ಕಂಗೆಡಿಸಿದೆ. ಹೀಗಾಗಿ ಅಂತಹ ಕಂಪನಿಗಳಿಗೆ ಅಮೆರಿಕದಲ್ಲಿ ಹೆಚ್ಚು ತೆರಿಗೆ ವಿಧಿಸುವ ಬೆದರಿಕೆ ಹಾಕಿದ್ದಾರೆ.