ವಾಷಿಂಗ್ಟನ್(ಡಿ.22): ಅಮೆರಿಕಾ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್, ಪಿಎಂ ನರೇಂದ್ರ ಮೋದಿಗೆ ಅತ್ಯುನ್ನತ ಪುರಸ್ಕಾರ ಲೀಜನ್ ಆಫ್​ ಮೆರಿಟ್​​ ಪದಕ ನೀಡಿ ಗೌರವಿಸಿದ್ದಾರೆ. ಅಮೆರಿಕಾದಲ್ಲಿರುವ ಭಾರತದ ರಾಯಭಾರಿ ತರಣ್​ಜೀತ್ ಸಿಂಗ್​​ ಪ್ರಧಾನಿ ಮೋದಿಯ ಪರವಾಗಿ, ಅಮೆರಿಕಾ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್​ ಸಿ ಓಬ್ರಯಾನ್​​​ರಿಂದ ಈ ಪದಕವನ್ನು ಸ್ವೀಕರಿಸಿದ್ದಾರೆ.

ಈ ಕುರಿತಾಘಿ ಅಮೆರಿಕಾದ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್​ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.​​​ ಭಾರತ ಹಾಗೂ ಅಮೆರಿಕಾ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ವೃದ್ಧಿಸುವಲ್ಲಿ ಮೋದಿ ಅವರ ನಾಯಕತ್ವವನ್ನ ಶ್ಲಾಘಿಸಿ ಲೀಜನ್ ಆಫ್ ಮೆರಿಟ್​ ನೀಡಿ ಗೌರವಿಸಲಾಗಿದೆ ಎಂದು ಈ ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಲೀಜನ್ ಆಫ್ ಮೆರಿಟ್​ ಅಮೆರಿಕಾದ ಸಶಸ್ತ್ರ ಪಡೆಯ ಮಿಲಿಟರಿ ಪುರಸ್ಕಾರ

ಲೀಜನ್ ಆಫ್ ಮೆರಿಟ್​ ಅಮೆರಿಕಾದ ಸಶಸ್ತ್ರ ಪಡೆಯ ಮಿಲಿಟರಿ ಪುರಸ್ಕಾರವಾಗಿದ್ದು, ಇದು ಇಲ್ಲಿನ ಅತ್ಯುನ್ನತ ಪುರಸ್ಕಾರವಾಗಿದೆ. ಅತ್ಯುತ್ತಮ ಸೇವೆ ಮತ್ತು ಸಾಧನೆಗಳ ಕಾರ್ಯಕ್ಷಮತೆಯಲ್ಲಿ ಪ್ರಶಂಸನೀಯ ನಡವಳಿಕೆ ತೋರಿದವರಿಗೆ ಈ ಪದಕ ನೀಡಲಾಗುತ್ತದೆ. ರಾಜ್ಯ ಮುಖ್ಯಸ್ಥರಿಗೆ ಅಥವಾ ಸರ್ಕಾರಕ್ಕೆ ಮಾತ್ರ ನೀಡಲಾಗುವ ಹೈಯೆಸ್ಟ್​ ಡಿಗ್ರಿ ಚೀಫ್ ಕಮಾಂಡರ್ ಲೀಜನ್ ಆಫ್ ಮೆರಿಟ್​ ಗೌರವವನ್ನು ಮೋದಿಗೆ ನೀಡಲಾಗಿದೆ.

ಮೋದಿ ಜೊತೆಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​ ಮಾರಿಸನ್ ಹಾಗೂ ಜಪಾನ್​​ನ ಮಾಜಿ ಪ್ರಧಾನಿ ಶಿನ್ಸೋ ಅಬೆ ಅವರಿಗೂ ಕೂಡ ಟ್ರಂಪ್ ಈ ಗೌರವ ನೀಡಿದ್ದು, ಆಯಾ ರಾಷ್ಟ್ರಗಳ ರಾಯಭಾರಿಗಳು ವಾಷಿಂಗ್ಟನ್ ಡಿಸಿಯಲ್ಲಿ ಪದಕವನ್ನ ಸ್ವೀಕರಿಸಿದರು ಎಂದು ಅಮೆರಿಕಾದ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್​ ಟ್ವಿಟರ್​ನಲ್ಲಿ ತಿಳಿಸಿದೆ.