ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 2 ದಿನಗಳ ಬಾಂಗ್ಲಾದೇಶ ಪ್ರವಾಸ ಮುಗಿಸಿ ತಾಯ್ನಾಡಿಗೆ ವಾಪಸ್| ಬಾಂಗ್ಲಾದೇಶದಲ್ಲಿ ಕೆಲ ಇಸ್ಲಾಂ ಸಂಘಟನೆಗಳಿಂದ ಭಾರೀ ಪ್ರತಿಭಟನೆ ಮತ್ತು ಹಿಂಸಾಚಾರ

ಢಾಕಾ(ಮಾ.29): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 2 ದಿನಗಳ ಬಾಂಗ್ಲಾದೇಶ ಪ್ರವಾಸ ಮುಗಿಸಿ ತಾಯ್ನಾಡಿಗೆ ವಾಪಸ್ಸಾದ ಬೆನ್ನಲ್ಲೇ, ಬಾಂಗ್ಲಾದೇಶದಲ್ಲಿ ಕೆಲ ಇಸ್ಲಾಂ ಸಂಘಟನೆಗಳಿಂದ ಭಾರೀ ಪ್ರತಿಭಟನೆ ಮತ್ತು ಹಿಂಸಾಚಾರಗಳು ಭುಗಿಲೆದ್ದಿವೆ. ಪೂರ್ವ ಬಾಂಗ್ಲಾದೇಶದಲ್ಲಿ ಇಸ್ಲಾಂ ಸಂಘಟನೆಗಳ ಕಾರ್ಯಕರ್ತರು ಹಿಂದೂ ದೇಗುಲಗಳು ಮತ್ತು ರೈಲಿನ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ 10 ಮಂದಿ ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಶಾಂತಿಯುತವಾಗಿ ನಡೆಯುತ್ತಿದ್ದ ತಮ್ಮ ಪ್ರತಿಭಟನೆಯಲ್ಲಿ ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ ಎಂದು ಹೆಫಜಾತ್‌-ಇ-ಇಸ್ಲಾಂ ಸಂಘಟನೆ ದೂರಿದೆ. ಮೋದಿ ಆಡಳಿತದ ಭಾರತದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಮರ ಬಗ್ಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಇಸ್ಲಾಂ ಸಂಘಟನೆಯ ಸಾವಿರಾರು ಕಾರ್ಯಕರ್ತರು ಬಾಂಗ್ಲಾದೇಶದ ರಾಜಧಾನಿ ಢಾಕಾ, ಚಿತ್ತಗಾಂಗ್‌ ಸೇರಿದಂತೆ ಇನ್ನಿತರ ನಗರಗಳ ಬೀದಿಗಳಲ್ಲಿ ಭಾರೀ ಪ್ರತಿಭಟನೆ ನಡೆಸಿದರು.

ಶುಕ್ರವಾರ ಮತ್ತು ಶನಿವಾರದಿಂದಲೂ ನಡೆಯುತ್ತಿರುವ ಈ ಪ್ರತಿಭಟನೆಗಳು ಭಾನುವಾರ ಹಿಂಸಾಚಾರಕ್ಕೆ ತಿರುಗಿದ್ದು, ಹಲವು ಸರ್ಕಾರಿ ಕಚೇರಿಗಳಿಗೆ ಬೆಂಕಿ, ಪ್ರೆಸ್‌ ಕ್ಲಬ್‌, ಪತ್ರಕರ್ತರು ಸೇರಿದಂತೆ ಹಿಂದುಗಳ ಮೇಲೆ ದಾಳಿ ನಡೆಸಿದ್ದಾರೆ.