ಭಾರತದ ಸ್ಥಿತಿ ಹೃದಯ ವಿದ್ರಾವಕ: ವಿಶ್ವಸಂಸ್ಥೆ| ಕೋವಿಡ್‌ ದುರಂತದಿಂದ ಆಸ್ಪತ್ರೆಗಳು, ಸ್ಮಶಾನಗಳು ಪೂರ್ತಿ ಭರ್ತಿ| ಕೋವಿಡ್‌ ವಿರುದ್ಧದ ಭಾರತದ ಹೋರಾಟಕ್ಕೆ ಡಬ್ಲ್ಯುಎಚ್‌ಒ ಸಾಥ್‌

ಜಿನೇವಾ(ಏ.28): ಪ್ರತೀ ನಿತ್ಯ 3.50 ಲಕ್ಷಕ್ಕೂ ಹೆಚ್ಚು ಹೊಸ ಕೋವಿಡ್‌ ಕೇಸ್‌ಗಳು ಹಾಗೂ ಸಾವಿನ ಸಂಖ್ಯೆ 3 ಸಾವಿರದ ಹತ್ತಿರಕ್ಕೆ ತಲುಪುತ್ತಿರುವ ಭಾರತದ ಸ್ಥಿತಿಯು ಅತೀ ಹೃದಯ ವಿದ್ರಾವಕವಾದದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಪತ್ರಕರ್ತರ ಜೊತೆ ಮಾತನಾಡಿದ ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್‌ ಅಧನೋಮ್‌ ಘೇಬ್ರಿಯೇಸಸ್‌ ಅವರು, ‘ಕೊರೋನಾ ವೈರಸ್‌ ಸೃಷ್ಟಿಸಿದ ಮಹಾ ದುರಂತದಿಂದಾಗಿ ಭಾರತದ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರು ಹಾಗೂ ಸ್ಮಶಾನಗಳು ಸಹ ತುಂಬಿ ತುಳುಕುತ್ತಿವೆ. ಈ ಕೊರೋನಾ ಬಿಕ್ಕಟ್ಟಿನ ವಿರುದ್ಧದ ಭಾರತದ ಹೋರಾಟಕ್ಕೆ ಕೈ ಜೋಡಿಸುವುದಾಗಿ’ ಹೇಳಿದ್ದಾರೆ.

ಅಲ್ಲದೆ ಸೋಂಕಿನ ವಿರುದ್ಧದ ಹೋರಾಟಕ್ಕೆ ಅಗತ್ಯವಿರುವ ಸಾವಿರಾರು ಸಂಖ್ಯೆಯ ಆಮ್ಲಜನಕ ಪೂರೈಕೆ ವ್ಯವಸ್ಥೆ, ಸುಲಭವಾಗಿ ಸಾಗಿಸಬಹುದಾದ ಆಸ್ಪತ್ರೆಯ ವ್ಯವಸ್ಥೆ, ಪ್ರಯೋಗಾಲಯದ ಸಲಕರಣೆಗಳು ಸೇರಿದಂತೆ ಎಲ್ಲಾ ವೈದ್ಯಕೀಯ ನೆರವುಗಳನ್ನು ನೀಡಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

130 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತವು ಕೊರೋನಾದ ಹಾಟ್‌ಸ್ಪಾಟ್‌ ರಾಷ್ಟ್ರವಾಗಿ ಪರಿವರ್ತನೆಯಾಗಿದ್ದು, ಆಮ್ಲಜನಕ ಸಿಲಿಂಡರ್‌, ರೆಮ್‌ಡೆಸಿವಿರ್‌ ಔಷಧ, ಕೊರೋನಾ ಲಸಿಕೆಗಳ ಭಾರೀ ಕೊರತೆ ಉದ್ಭವವಾಗಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಕುಟುಂಬಸ್ಥರು ಟ್ವೀಟರ್‌ ಸೇರಿ ಇನ್ನಿತರ ಸಾಮಾಜಿಕ ವೇದಿಕೆಗಳಲ್ಲಿ ಆಸ್ಪತ್ರೆಗಳ ಹಾಸಿಗೆ, ಆಮ್ಲಜನಕ ಸಿಲಿಂಡರ್‌, ಲಸಿಕೆ ಸೇರಿದಂತೆ ಇನ್ನಿತರ ನೆರವಿನ ನಿರೀಕ್ಷೆ ಮಾಡುತ್ತಿದ್ದಾರೆ.