* ಬೈಡೆನ್ ಸರ್ಕಾರ ಎಚ್ಚೆತ್ತುಕೊಳ್ಳಬೇಕು* ಅಮೆರಿಕದಲ್ಲಿ ಖಲಿಸ್ತಾನ ಉಗ್ರರ ಚಟುವಟಿಕೆ ತೀವ್ರ* ಇವುಗಳಿಗೆ ಪಾಕಿಸ್ತಾನದ ಬೆಂಬಲವಿದೆ* ಅಮೆರಿಕದ ಚಿಂತಕರ ಚಾವಡಿ ವರದಿ
ವಾಷಿಂಗ್ಟನ್(se.16): ಅಮೆರಿಕದಲ್ಲಿರುವ ಖಲಿಸ್ತಾನಿ ಸಂಘಟನೆಗಳಿಗೆ ಪಾಕಿಸ್ತಾನದಿಂದ ನೆರವು ಹರಿದುಬರುತ್ತಿದೆ. ಇದರಿಂದಾಗಿ ಈ ಸಂಘಟನೆಗಳು ನಿಧಾನವಾಗಿ ಅಮೆರಿಕದಲ್ಲಿ ನೆಲೆಯೂರುತ್ತಿವೆ ಎಂದು ಅಮೆರಿಕದ ಚಿಂತಕರ ಚಾವಡಿಯೊಂದು ಜೋ ಬೈಡೆನ್ ಸರ್ಕಾರಕ್ಕೆ ಎಚ್ಚರಿಸಿದೆ.
ಖಲಿಸ್ತಾನ ಸಂಘಟನೆಗಳು ಪಾಕಿಸ್ತಾನ ಮೂಲದ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಗಳ ರೀತಿ ಬೇರೆ ಹೆಸರಿನಲ್ಲಿ ಕೂಡ ತಲೆಯೆತ್ತಬಹುದು. ಹೀಗಾಗಿ ಪಾಕಿಸ್ತಾನದ ಬೆಂಬಲದ ಬಗ್ಗೆ ಅಮೆರಿಕ ಸರ್ಕಾರ ನಿರ್ಲಕ್ಷ್ಯ ವಹಿಸದೇ ತನಿಖೆ ನಡೆಸಬೇಕು ಎಂದು ಹಡ್ಸನ್ ಇನ್ಸ್‌ಟಿಟ್ಯೂಟ್‌ನ ತಜ್ಞರ ‘ಅಮೆರಿಕದಲ್ಲಿ ಖಲಿಸ್ತಾನ ತೀವ್ರವಾದ- ಇದರಲ್ಲಿ ಪಾಕಿಸ್ತಾನದ ಪಾತ್ರ’ ಎಂಬ ವರದಿಯಲ್ಲಿ ಆಗ್ರಹಿಸಲಾಗಿದೆ.
ಇತ್ತೀಚೆಗೆ ಅಮೆರಿಕದಲ್ಲಿ ಭಾರತ ವಿರೋಧಿ ಖಲಿಸ್ತಾನಿ ಚಟುವಟಿಕೆಗಳು ಹೆಚ್ಚುತ್ತಿವೆ. ಏಷ್ಯಾ ಪೆಸಿಫಿಕ್‌ನಲ್ಲಿ ಚೀನಾ ಚಟುವಟಿಕೆಗಳು ಹೇಗೆ ಹೆಚ್ಚುತ್ತಿವೆಯೋ ಅದೇ ರೀತಿ ಅಮೆರಿಕದಲ್ಲಿ ಖಲಿಸ್ತಾನಿಗಳ ಪ್ರಭಾವ ಹೆಚ್ಚುತ್ತಿದೆ. ಇದರ ಬಗ್ಗೆ ಇನ್ನೂ ಕ್ರಮ ಕೈಗೊಳ್ಳುವುದು ತಡವಾದರೆ ಪರಿಣಾಮ ತೀವ್ರವಾದೀತು. ಇಂಥ ಸಂಘಟನೆಗಳ ವಿರುದ್ಧ ಭಯೋತ್ಪಾದಕ ನಿಗ್ರಹ ಕಾನೂನುಗಳ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಲಾಗಿದೆ.
ಕ್ಯಾಲಿಫೋರ್ನಿಯಾ ಹಾಗೂ ನ್ಯೂಯಾರ್ಕ್ನಲ್ಲಿ ಈ ಸಂಘಟನೆಗಳ ಚಟುವಟಿಕೆ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.
ಖಲಿಸ್ತಾನಿ ಸಂಘಟನೆಗಳು ಪಂಜಾಬನ್ನು ಭಾರತದಿಂದ ಪ್ರತ್ಯೇಕಿಸಿ ಪ್ರತ್ಯೇಕ ಖಲಿಸ್ತಾನ ರಾಷ್ಟ್ರ ರಚನೆ ಉದ್ದೇಶ ಹೊಂದಿವೆ.
