ಬೀಜಿಂಗ್‌[ಫೆ.13]: 1000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಕೊರೋನಾ ಸೋಂಕು, ಇದೀಗ ಚೀನಾದ ಕಮ್ಯುನಿಸ್ಟ್‌ ಪಕ್ಷದ ಮಹಾಸಭೆಯನ್ನೇ ರದ್ದು ಮಾಡುವ ಸಾಧ್ಯತೆ ಇದೆ.

ಮುಂದಿನ ತಿಂಗಳು ಸಭೆ ನಡೆಯಬೇಕಿದ್ದು, ಇದರಲ್ಲಲಿ 3000ಕ್ಕೂ ಹೆಚ್ಚು ಜನಪ್ರತಿನಿಧಿಗಳು ಭಾಗವಹಿಸಬೇಕಿತ್ತು. ಆದರೆ ಪ್ರಸಕ್ತ ಕ್ಸಿ ಜಿನ್‌ಪಿಂಗ್‌ ನೇತೃತ್ವದ ಆಡಳಿತ ಕೊರೋನಾ ವೈರಸ್‌ ನಿರ್ವಹಿಸುವ ರೀತಿ ಭಾರೀ ಟೀಕೆಗೆ ಗುರಿಯಾಗಿದೆ. ಚೀನಾದವಲ್ಲಿ ಇದುವರೆಗೆ ಯಾವುದೇ ಕಮ್ಯುನಿಸ್ಟ್‌ ನಾಯಕ ಹೊಂದದ ಸರ್ವಾಧಿಕಾರದ ರೀತಿಯಲ್ಲಿ ಅಧಿಕಾರ ಪಡೆದುಕೊಂಡಿರುವ ಕ್ಸಿ ಜಿನ್‌ಪಿಂಗ್‌ ಇಡೀ ಪರಿಸ್ಥಿತಿ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ.

2002-03ರಲ್ಲಿ ಸಾರ್ಸ್‌ ಸೋಂಕಿನ ಕುರಿತು ಜನರಿಗೆ ಮಾಹಿತಿ ನೀಡದೇ ಮಾಡಿದ ರೀತಿಯಲ್ಲೇ ಈಗಲೂ ಸರ್ಕಾರ ಜನರಿಂದ ಮಾಹಿತಿಯನ್ನು ಮುಚ್ಚಿಡುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇಂಥ ಆರೋಪಗಳು ಕ್ಸಿ ವಿರುದ್ಧ ಟೀಕೆಗೆ ಸ್ವಪಕ್ಷದಲ್ಲೇ ಇರುವ ವಿರೋಧಿ ಬಣದ ನಾಯಕರಿಗೆ ಹೊಸ ಅಸ್ತ್ರ ನೀಡಿದೆ. ಹೀಗಾಗಿ ಶೀಘ್ರವೇ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೇ ಹೋದಲ್ಲಿ ಅದು ಕ್ಸಿ ಪಟ್ಟಕ್ಕೆ ಕುತ್ತು ತರುವ ಸಾಧ್ಯತೆಯೂ ಇಲ್ಲದಿಲ್ಲ ಎನ್ನಲಾಗುತ್ತಿದೆ.